ETV Bharat / sports

16.1 ಓವರ್‌ಗಳಲ್ಲೇ 177 ರನ್ ಚೇಸ್! ದ.ಆಫ್ರಿಕಾ ಬಿರುಗಾಳಿಗೆ ವಿಂಡೀಸ್ ಧೂಳೀಪಟ; ಭಾರತದ ಸೆಮಿಫೈನಲ್ ಆಸೆ ಜೀವಂತ

ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳಿಂದ ಮಣಿಸಿತು.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ (ANI)
author img

By ETV Bharat Karnataka Team

Published : February 26, 2026 at 6:37 PM IST

2 Min Read
Choose ETV Bharat

ಅಹಮದಾಬಾದ್(ಗುಜರಾತ್): ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮಂಡೆ ಬಿಸಿ ಸ್ವಲ್ಪ ಕಡಿಮೆಯಾಗಿದೆ. ಇದಕ್ಕೆ ಕಾರಣ ದಕ್ಷಿಣ ಆಫ್ರಿಕಾ.! ಹೌದು, ಟಿ20 ವಿಶ್ವಕಪ್‌ನಲ್ಲಿಂದು ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಭಾರತದ ಸೆಮಿಫೈನಲ್ ಕನಸೂ ಕೂಡಾ ಜೀವಂತವಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದ.ಆಫ್ರಿಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ವೆಸ್ಟ್ ಇಂಡೀಸ್ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೂಲಕ 177 ರನ್‌ ಟಾರ್ಗೆಟ್‌ ನೀಡಿತು.

ತಂಡದ ಆರಂಭಿಕ ಮತ್ತು ಮಧ್ಯಮ ಬ್ಯಾಟರ್‌ಗಳು ವಿಫಲರಾದರೂ ಕೊನೆಯಲ್ಲಿ ಕ್ರೀಸಿಗಿಳಿದ ಆಲ‌ರೌಂಡರ್‌ಗಳಾದ ಜೇಸನ್ ಹೋಲ್ಡರ್(49) ಮತ್ತು ರೊಮಾರಿಯೋ ಶೆಫರ್ಡ್ (52) ಉತ್ತಮ ಪ್ರದರ್ಶನ ನೀಡಿದರು. ಹೀಗಾಗಿ ತಂಡದ ಮೊತ್ತ ಹೆಚ್ಚಳ ಕಾರಣವಾಯಿತು.

16.1 ಓವರ್‌ಗಳಲ್ಲೇ 177 ರನ್ ಚೇಸ್: ಈ ಸವಾಲಿನ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಅತ್ಯುತ್ತಮ ಆರಂಭ ಪಡೆಯಿತು. ನಾಯಕ ಐಡೆನ್ ಮರ್ಕ್ರಾಮ್(ಅಜೇಯ 82) ಮತ್ತು ಕ್ವಿಂಟನ್ ಡಿಕಾಕ್(47) ಅತ್ಯುತ್ತಮ ಜೊತೆಯಾಟವಾಡಿದರು. ಇಬ್ಬರೂ ವಿಂಡೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಡಿಕಾಕ್ ವಿಕೆಟ್ ಪತನಗೊಂಡ ನಂತರ ಮರ್ಕ್ರಾಮ್ ಜೊತೆಯಾದ ರಿಕೆಲ್ಟನ್ (ಅಜೇಯ 45) ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡ ಎದುರಾಳಿ ತಂಡ ನೀಡಿದ 177 ರನ್ ಟಾರ್ಗೆಟ್ ಅನ್ನು ಕೇವಲ 16.1 ಓವರ್‌ಗಳಲ್ಲೇ ಚೇಸ್ ಮಾಡಿತು.

ಭಾರತದ ಸೆಮಿಫೈನಲ್ ಹಾದಿ ಸುಗಮ: ಇದರೊಂದಿಗೆ ಭಾರತದ ಸೆಮಿಫೈನಲ್ ಹಾದಿಯೂ ಸುಗಮವಾಯಿತು. ಇಂದು ವೆಸ್ಟ್ ಇಂಡೀಸ್ ಜಯಿಸಿದ್ದರೆ, ಭಾರತದ ಹಾದಿ ಕಠಿಣವಾಗುತ್ತಿತ್ತು. ಭಾರತ ಮುಂದಿನ ಎರಡೂ ಪಂದ್ಯಗಳನ್ನು ಭಾರೀ ರನ್‌ ರೇಟ್ ಅಂತರದಿಂದ ಗೆಲ್ಲಲೇಬೇಕಾಗಿತ್ತು. ಹಾಗಾಗಿ ಆ ತಲೆನೋವು ಈ ಪಂದ್ಯದಿಂದ ಕೊಂಚ ಕಡಿಮೆಯಾಗಿದೆ.

ಭಾರತ-ಜಿಂಬಾಬ್ವೆ ಪಂದ್ಯ ಕುತೂಹಲ: ಇನ್ನು ಇಂದಿನ ಮತ್ತೊಂದು ಪಂದ್ಯದಲ್ಲಿ ಭಾರತ-ಜಿಂಬಾಬ್ವೆ ತಂಡಗಳ ನಡುವೆ ಮಹತ್ವದ ಪೈಪೋಟಿ ನಡೆಯಲಿದೆ. ಈ ಪಂದ್ಯದ ಗೆಲುವು ಇತ್ತಂಡಗಳಿಗೂ ನಿರ್ಣಾಯಕವಾಗಿದ್ದು, ರೋಚಕ ಹಣಾಹಣಿ ನಿರೀಕ್ಷೆ ಇದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಸೂಪರ್ 8ರ ಘಟ್ಟದ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಹೀನಾಯ ಸೋಲುಂಡ ಭಾರತ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದೆ. ಬಲಿಷ್ಟ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳನ್ನು ಮಣಿಸಿರುವ ಜಿಂಬಾಬ್ವೆ ಕೂಡಾ ಗೆಲ್ಲಲು ಸಾಕಷ್ಟು ಕಸರತ್ತು ನಡೆಸಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್, ಸೂಪರ್ 8: ‌ಭಾರತ-ಜಿಂಬಾಬ್ವೆ ಮಹತ್ವದ ಪಂದ್ಯ ಇಂದು; ಲಘುವಾಗಿ ಪರಿಗಣಿಸಬೇಡಿ-ಕುಂಬ್ಳೆ ಎಚ್ಚರಿಕೆ