ETV Bharat / sports

ಐಸಿಸಿ ಟಿ20 ವಿಶ್ವಕಪ್: ಇಂದು ದಕ್ಷಿಣ ಆಫ್ರಿಕಾ vs ನ್ಯೂಜಿಲೆಂಡ್​ ಮೊದಲ ಸೆಮಿಸ್​ ಕದನ

ಐಸಿಸಿ ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್​ ಇಂದು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳ ಮಧ್ಯೆ ನಡೆಯಲಿದೆ. ​

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್​ ಸೆಮಿಫೈನಲ್​ ಪಂದ್ಯ
ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್​ ಸೆಮಿಫೈನಲ್​ ಪಂದ್ಯ (ETV Bharat Graphics)
author img

By ETV Bharat Sports Team

Published : March 3, 2026 at 8:48 PM IST

|

Updated : March 4, 2026 at 11:33 AM IST

3 Min Read
Choose ETV Bharat

SA vs NZ Match: ಐಸಿಸಿ ಟಿ20 ವಿಶ್ವಕಪ್ 2026 ಅಂತಿಮ ಘಟ್ಟವನ್ನು ತಲುಪಿದೆ. ಪಂದ್ಯಾವಳಿಯ ಮೊದಲ ಸೆಮಿಫೈನಲ್ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ಇಂದು ನಡೆಯಲಿದೆ. ಈ ಹೈ- ವೋಲ್ಟೇಜ್ ಪಂದ್ಯವು ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದ್ದು ಇದಕ್ಕಾಗಿ ಕ್ರಿಕೆಟ್​ ಪ್ರಿಯರು ಉತ್ಸುಕರಾಗಿದ್ದಾರೆ.

ಎರಡೂ ತಂಡಗಳ ಇಲ್ಲಿಯವರೆಗಿನ ಪ್ರಯಾಣ ಹೇಗಿದೆ?: ದಕ್ಷಿಣ ಆಫ್ರಿಕಾ ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ತಂಡವು ಸೂಪರ್ 8 ಹಂತದಲ್ಲಿ ಆಡಿದ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಉಳಿಯಿತು. ಗಮನಾರ್ಹವಾಗಿ, ಪ್ರೋಟಿಯಸ್ ತಂಡವು ತನ್ನ ಗುಂಪು ಹಂತದ ಎಲ್ಲ ಪಂದ್ಯದಲ್ಲೂ ಅಜೇಯವಾಗಿ ಉಳಿದಿತ್ತು. ಅಲ್ಲದೇ ನ್ಯೂಜಿಲೆಂಡ್ ಅನ್ನು ಏಳು ವಿಕೆಟ್‌ಗಳಿಂದ ಸೋಲಿಸಿತ್ತು. ಆದ್ದರಿಂದ ನಾಳೆಯ ಪಂದ್ಯದಲ್ಲೂ ಇದೇ ಪ್ರದರ್ಶನ ಪುನರಾವರ್ತಿಸಲು ಎದುರು ನೋಡುತ್ತಿದೆ. ಮತ್ತೊಂದೆಡೆ ನ್ಯೂಜಿಲೆಂಡ್‌ ಸೂಪರ್​ - 8 ಹಂತದಲ್ಲಿ ಏಕೈಕ ಪಂದ್ಯವನ್ನು ಗೆದ್ದು ಉತ್ತಮ ರನ್​ ರೇಟ್​ ಆಧಾರದ ಮೇಲೆ ಸೆಮಿಸ್​​ಗೆ ಎಂಟ್ರಿ ಪಡೆದುಕೊಡಿದೆ. ಇದೀಗ ದಕ್ಷಿಣ ಆಫ್ರಿಕಾದ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಲು ಎದುರು ನೋಡುತ್ತಿದೆ. 2021ರ ನಂತರ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ತಲುಪುವ ಕನಸು ನ್ಯೂಜಿಲೆಂಡ್ ಹೊಂದಿದೆ. ಆದ್ದರಿಂದ, ಈ ಸೆಮಿಫೈನಲ್ ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ.

ಹೆಡ್​ ಟು ಹೆಡ್​ ದಾಖಲೆ: ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಇಲ್ಲಿಯವರೆಗೆ ಒಟ್ಟು 19 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ, ದಕ್ಷಿಣ ಆಫ್ರಿಕಾ 12 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ ಕೇವಲ 7 ಬಾರಿ ಮಾತ್ರ ಗೆಲುವು ಸಾಧಿಸಿದೆ. ಗಮನಿಸಬೇಕಾದ ಅಂಶ ಎಂದರೆ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಿ20 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಇಲ್ಲಿಯವರೆಗೆ ಐಸಿಸಿ ಟೂರ್ನಿಗಳಲ್ಲಿ ಮೂರು ನಾಕೌಟ್ ಪಂದ್ಯಗಳನ್ನು ಆಡಿವೆ. ಈ ಮೂರು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಕಳಪೆ ದಾಖಲೆ ಹೊಂದಿದೆ. ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಐಸಿಸಿ ನಾಕೌಟ್ ಪಂದ್ಯವನ್ನು ಎಂದಿಗೂ ಗೆದ್ದಿಲ್ಲ. ಈ ಪಂದ್ಯವನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ಕೆಟ್ಟ ದಾಖಲೆಯನ್ನು ಅಳಿಸಿ ಹಾಕಲು ಎದುರು ನೋಡುತ್ತಿದೆ.

ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಐಸಿಸಿ ನಾಕೌಟ್ ಪಂದ್ಯವು 2011ರ ಏಕದಿನ ವಿಶ್ವಕಪ್‌ನಲ್ಲಿ ನಡೆಯಿತು. ಅದು ಕ್ವಾರ್ಟರ್ ಫೈನಲ್ ಆಗಿತ್ತು. ಢಾಕಾದಲ್ಲಿ ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡ ದಕ್ಷಿಣ ಆಫ್ರಿಕಾವನ್ನು 49 ರನ್‌ಗಳಿಂದ ಸೋಲಿಸಿತ್ತು. ನಂತರ ಕಿವೀಸ್ ಪಡೆ 2015ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿತ್ತು. ಆಕ್ಲೆಂಡ್‌ನಲ್ಲಿ ನಡೆದ ಮಳೆ ಪೀಡಿತ ಪಂದ್ಯವನ್ನು ನ್ಯೂಜಿಲೆಂಡ್ ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಐಸಿಸಿ ನಾಕೌಟ್ ಪಂದ್ಯದಲ್ಲಿ ಎರಡೂ ತಂಡಗಳು ಮೂರನೇ ಬಾರಿಗೆ ಪರಸ್ಪರ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲೂ, ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು 50 ರನ್‌ಗಳಿಂದ ಸೋಲುಣಿಸಿತ್ತು. ಈ ಅಂಕಿ- ಅಂಶಗಳು ನಾಕೌಟ್​ ಪಂದ್ಯಗಳಲ್ಲಿ ನ್ಯೂಜಿಲೆಂಡ್​ ಬಲಿಷ್ಠತೆಯನ್ನು ಎತ್ತಿತೋರಿಸುತ್ತದೆ.

ಪಂದ್ಯ ಯಾವಾಗ ಮತ್ತು ಎಷ್ಟು ಗಂಟೆಗೆ ನಡೆಯಲಿದೆ?: ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯವು ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಆರಂಭವಾಗಲಿದೆ. ಪಂದ್ಯ ಪ್ರಾರಂಭವಾಗುವ 30 ನಿಮಿಷಗಳ ಮೊದಲು, ಅಂದರೆ ಸಂಜೆ 6:30 ಕ್ಕೆ ಟಾಸ್ ನಡೆಯಲಿದೆ.

ನೇರ ಪ್ರಸಾರ ಎಲ್ಲಿ?: ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು, ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯ ಲೈವ್​ ಸ್ಟ್ರೀಮಿಂಗ್​ ಆಗಲಿದೆ.

ತಂಡಗಳು - ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಕ್ವೆನಾ ಎಂಫಾಕಾ, ಲುಂಗಿ ಎನ್‌ಗಿಡಿ, ಜೇಸನ್ ಸ್ಮಿತ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಅನ್ರಿಚ್ ನಾರ್ಟ್ಜೆ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ರಯಾನ್ ರಿಕಲ್ಟನ್.

ನ್ಯೂಜಿಲೆಂಡ್: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ಟಿಮ್ ಸೀಫರ್ಟ್, ಇಶ್ ಸೋಧಿ, ಕೈಲ್ ಜೇಮಿಸನ್ ಮತ್ತು ಕೋಲ್ ಮೆಕ್‌ಕಾಂಚಿ.

ಇದನ್ನೂ ಓದಿ: ಐಪಿಎಲ್​ ಪ್ರಾರಂಭಕ್ಕೂ ಮೊದಲೇ ಆರ್​ಸಿಬಿ ಫ್ಯಾನ್ಸ್​ಗಳಿಗೆ ಸಿಕ್ಕಿತು ಗುಡ್​ನ್ಯೂಸ್​!

Last Updated : March 4, 2026 at 11:33 AM IST