ETV Bharat / sports

ಟಿ20 ವಿಶ್ವಕಪ್, ಸೂಪರ್ 8: ‌ಭಾರತ-ಜಿಂಬಾಬ್ವೆ ಮಹತ್ವದ ಪಂದ್ಯ ಇಂದು; ಲಘುವಾಗಿ ಪರಿಗಣಿಸಬೇಡಿ-ಕುಂಬ್ಳೆ ಎಚ್ಚರಿಕೆ

ಟಿ20 ವಿಶ್ವಕಪ್‌ ಸೂಪರ್ 8ರ ಘಟ್ಟದಲ್ಲಿ ಇಂದು ಭಾರತ-ಜಿಂಬಾಬ್ವೆ ತಂಡಗಳು ಪೈಪೋಟಿ ನಡೆಸಲಿವೆ. ಉಭಯ ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಭಾರತ ಸೆಮಿಫೈನಲ್ ಪ್ರವೇಶಿಸಬೇಕಾದರೆ, ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಿದೆ.

ಭಾರತ ಕ್ರಿಕೆಟ್ ತಂಡದ ಆಟಗಾರರು
ಭಾರತ ಕ್ರಿಕೆಟ್ ತಂಡದ ಆಟಗಾರರು (ANI)
author img

By ETV Bharat Karnataka Team

Published : February 26, 2026 at 3:56 PM IST

2 Min Read
Choose ETV Bharat

ಚೆನ್ನೈ(ತಮಿಳುನಾಡು): ಟಿ20 ವಿಶ್ವಕಪ್‌ನ ಸೂಪರ್ 8ರ ಘಟ್ಟದಲ್ಲಿ ಇಂದು ಸಂಜೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಭಾರತ-ಜಿಂಬಾಬ್ವೆ ತಂಡಗಳ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯದ ಗೆಲುವು ಇತ್ತಂಡಗಳಿಗೂ ನಿರ್ಣಾಯಕವಾಗಿದ್ದು, ರೋಚಕ ಹಣಾಹಣಿ ನಿರೀಕ್ಷೆ ಮೂಡಿಸಿದೆ.

ಸೂಪರ್ 8ರ ಘಟ್ಟದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡ ಭಾರತ ಇದೀಗ ಮಾಡು ಇಲ್ಲವೇ ಮಡಿ ಪರಿಸ್ಥಿತಿಯನ್ನು ತನ್ನ ಮೇಲೆ ಹೇರಿಕೊಂಡಿದೆ. ಅತ್ತ ಬಲಿಷ್ಟ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳನ್ನೇ ಮಣಿಸಿ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಜಿಂಬಾಬ್ವೆ ರಣೋತ್ಸಾಹದಲ್ಲಿದೆ.

ಇಂದಿನ ಪಂದ್ಯ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆಲ್ಲುವುದು ಮಾತ್ರವಲ್ಲ, ಸದ್ಯದ -3.800ರ ಕಳಪೆ ನೆಟ್ ರನ್ ರೇಟ್ (NRR) ಅನ್ನು ಸುಧಾರಿಸಿಕೊಳ್ಳಲೇಬೇಕಿದೆ. ಈ ನಿಟ್ಟಿನಲ್ಲಿ ದೊಡ್ಡ ಅಂತರದ ಗೆಲುವು ಅವಶ್ಯಕ.

ಅನಿಲ್ ಕುಂಬ್ಳೆ ಎಚ್ಚರಿಕೆ: ಈ ಪಂದ್ಯದ ಬಗ್ಗೆ ಜಿಯೋಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಮಾಜಿ ನಾಯಕ ಅನಿಲ್ ಕುಂಬ್ಳೆ, ಜಿಂಬಾಬ್ವೆಯನ್ನು ಭಾರತ ಲಘುವಾಗಿ ಪರಿಗಣಿಸುವಂತಿಲ್ಲ ಎಂದು ಎಚ್ಚರಿಸಿದರು. ಇದೇ ವೇಳೆ, ಭಾರತ ತನ್ನ ನೈಸರ್ಗಿಕ, ಆಕ್ರಮಣಕಾರಿ ಮಾದರಿಯ ಕ್ರಿಕೆಟ್ ಆಡಬೇಕು ಎಂದು ಹೇಳಿದರು.

ಜಿಯೋಹಾಟ್‌ಸ್ಟಾರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಭಾರತ ತನ್ನ ನೈಸರ್ಗಿಕ ಮತ್ತು ಆಕ್ರಮಣಕಾರಿ ಮಾದರಿಯ ಕ್ರಿಕೆಟ್ ಮುಂದುವರಿಸಬೇಕು. ಜಿಂಬಾಬ್ವೆ ಒಡ್ಡುವ ಸವಾಲನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದರು. ಹಾಲಿ ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಜಿಂಬಾಬ್ವೆಯ ಗೆಲುವುಗಳನ್ನು ಕುಂಬ್ಳೆ ಇದೇ ವೇಳೆ ಉಲ್ಲೇಖಿಸಿದರು. ಆಸ್ಟ್ರೇಲಿಯಾ ವಿರುದ್ಧದ ಗೆಲುವು ಮತ್ತು ಶ್ರೀಲಂಕಾ ವಿರುದ್ಧ 179 ರನ್‌ ಗುರಿಯನ್ನು ಯಶಸ್ವಿಯಾಗಿ ಚೇಸ್‌ ಮಾಡಿರುವುದು ಆ ತಂಡ ಒತ್ತಡದ ಸ್ಪರ್ಧೆಗಳಲ್ಲೂ ಆತ್ಮವಿಶ್ವಾಸದಿಂದ ಹೇಗೆ ಆಡಿದೆ ಎಂಬುದನ್ನು ಪರಿಗಣಿಸಬೇಕು ಎಂದು ತಿಳಿಸಿದರು.

ಚೆಪಾಕ್ ಪಿಚ್ ಹೇಗಿದೆ?: ಚೆನ್ನೈನ ಎಂಎ ಚಿದಂಬರಂ ಅಥವಾ ಚೆಪಾಕ್ ಕ್ರೀಡಾಂಗಣ ಸಾಂಪ್ರದಾಯಿಕವಾಗಿ ನಿಧಾನಗತಿಯ ಟ್ರ್ಯಾಕ್‌ ಮತ್ತು ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾದ ಹಲವು ನಿದರ್ಶನಗಳಿವೆ. ಆದರೆ, 2023ರಲ್ಲಿ ಕ್ರೀಡಾಂಗಣ ನವೀಕರಣದ ನಂತರ ಸನ್ನಿವೇಶ ಬದಲಾಗಿದೆ. ಇದು ಬೌಲರ್‌ಗಳಿಗಿಂತ ಬ್ಯಾಟರ್‌‌ಗಳಿಗೆ ಹೆಚ್ಚು ಅನುಕೂಲವಾಗಿದೆ. ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ 180ರಿಂದ 200 ರವರೆಗೆ ಸ್ಕೋರ್‌ಗಳು ದಾಖಲಾಗಿವೆ.

ಮಳೆ ಬರುವ ಸಾಧ್ಯತೆ ಇದೆಯೇ?: ಪಂದ್ಯದ ವೇಳೆ ತಾಪಮಾನ 28ರಿಂದ 30 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರಲಿದೆ. ಮಳೆಯ ಬೆದರಿಕೆ ಇಲ್ಲ. ಹಾಗಾಗಿ, ಯಾವುದೇ ಅಡೆತಡೆಗಳಿಲ್ಲದೆ ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಪಂದ್ಯ ಸಮಯ: ಸಂಜೆ 7ಕ್ಕೆ

ನೇರ ಪ್ರಸಾರ: ಜಿಯೋಹಾಟ್‌ಸ್ಟಾರ್, ಸ್ಟಾರ್ ಸ್ಪೋರ್ಟ್ಸ್

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿಗೆ ಸೂರ್ಯ ಮಾಡಿದ ಆ ಒಂದು ತಪ್ಪೇ ಕಾರಣ;​ ಕೈಫ್​!