ಏಷ್ಯನ್ ಕ್ರೀಡಾಕೂಟ: 503 ಕ್ರೀಡಾಪಟುಗಳಿಗೆ 246 ಸಹಾಯಕ ಸಿಬ್ಬಂದಿ ಅನುಮೋದಿಸಿದ ಕ್ರೀಡಾ ಸಚಿವಾಲಯ!!
2026ರ ಏಷ್ಯನ್ ಗೇಮ್ಸ್ಗಾಗಿ ಕ್ರೀಡಾ ಸಚಿವಾಲಯ 503 ಕ್ರೀಡಾಪಟುಗಳಿಗಾಗಿ 246 ಸದಸ್ಯರ ಸಹಾಯಕ ಸಿಬ್ಬಂದಿಯನ್ನು ಅನುಮೋದಿಸಿದೆ.


Published : September 3, 2026 at 1:56 PM IST
ಈ ತಿಂಗಳು ಪ್ರಾರಂಭವಾಗಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿರುವ ಕ್ರೀಡಾಪಟುಗಳಿಗೆ 246 ಸಹಾಯಕ ಸಿಬ್ಬಂದಿಯನ್ನು ಕ್ರೀಡಾ ಸಚಿವಾಲಯ ಅನುಮೋದಿಸಿದೆ. ಈ ಹಿನ್ನೆಲೆ ಒಟ್ಟು 768 ಸದಸ್ಯರೊಂದಿಗೆ ಭಾರತ ಜಪಾನ್ಗೆ ಪ್ರವಾಸ ಬೆಳಸಲಿದೆ. ಇದರಲ್ಲಿ ಒಟ್ಟು 503 ಕ್ರೀಡಾಪಟುಗಳು ಮತ್ತು 246 ಸಹಾಯಕ ಸಿಬ್ಬಂದಿ ಇರಲಿದ್ದಾರೆ. 20ನೇ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 19 ರಂದು ಜಪಾನ್‌ನ ಐಚಿ ನಗೋಯಾದಲ್ಲಿ ಪ್ರಾರಂಭವಾಗಲಿದೆ. ಈ ಕ್ರೀಡಾಕೂಟದಲ್ಲಿ ಭಾರತೀಯ ತಂಡವು ಒಟ್ಟು 36 ಸ್ಪರ್ಧೆಗಳಲ್ಲಿ ಭಾಗವಹಿಸಲಿದೆ.
ಆದಾಗ್ಯೂ, ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಬಾರಿ 152 ಕ್ರೀಡಾಪಟುಗಳು ಕಡಿಮೆಯಾಗಿದ್ದಾರೆ. ಸಹಾಯಕ ಸಿಬ್ಬಂದಿಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 14 ಕಡಿಮೆ ಆಗಿವೆ. ಹಿಂದೆ 260 ಸದಸ್ಯರ ಸಹಾಯಕ ಸಿಬ್ಬಂದಿ ತಂಡವು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ಗೆ 655 ಕ್ರೀಡಾಪಟುಗಳೊಂದಿಗೆ ಪ್ರಯಾಣ ಬೆಳೆಸಿತ್ತು. ಏತನ್ಮಧ್ಯೆ 503 ಕ್ರೀಡಾಪಟುಗಳಲ್ಲಿ 269 ಪುರುಷ ಆಟಗಾರರು ಮತ್ತು 234 ಮಹಿಳಾ ಆಟಗಾರರು ಸೇರಿದ್ದಾರೆ.
246 ಸಹಾಯಕ ಸಿಬ್ಬಂದಿಯಲ್ಲಿ 23 ಮುಖ್ಯ/ಉಪ ಮುಖ್ಯ ತರಬೇತುದಾರರು ಮತ್ತು 150 ತರಬೇತುದಾರರು, ಹಾಗೆಯೇ ಇತರ ಸಹಾಯಕ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಫಿಸಿಯೋಗಳು, ಮನಶ್ಶಾಸ್ತ್ರಜ್ಞರು, ಮಸಾಜ್ ಥೆರಪಿಸ್ಟ್‌ಗಳು, ವ್ಯವಸ್ಥಾಪಕರು ಮತ್ತು ತಾಂತ್ರಿಕ ಸಿಬ್ಬಂದಿ ಸಹ ಸೇರಿದ್ದಾರೆ. ಆರಂಭದಲ್ಲಿ ಸಚಿವಾಲಯವು 492 ಕ್ರೀಡಾಪಟುಗಳ ಪಟ್ಟಿ ಬಿಡುಗಡೆ ಮಾಡಿತ್ತು. ನಂತರ ಅಥ್ಲೆಟಿಕ್ಸ್ ತಂಡದಿಂದ ಇನ್ನೂ ಹಲವಾರು ಹೆಸರುಗಳನ್ನು ಸೇರಿಸಿತು. ಭಾರತ 19 ತಂಡದ ಅಧಿಕಾರಿಗಳನ್ನು ಒಳಗೊಂಡಂತೆ ಒಟ್ಟು 768 ಸದಸ್ಯರೊಂದಿಗೆ ಜಪಾನ್ಗೆ ಪ್ರಯಾಣ ಬೆಳೆಸಲಿದೆ.

ಅಥ್ಲೆಟಿಕ್ಸ್ ತಂಡಕ್ಕೆ 31 ಸಹಾಯಕ ಸಿಬ್ಬಂದಿ
ಹಿಂದಿನ ರೀತಿಯಲ್ಲೆ ಈ ಬಾರಿಯೂ ಏಷ್ಯನ್ ಗೇಮ್ಸ್ನಲ್ಲಿ ಅಥ್ಲೆಟಿಕ್ಸ್ ಅತಿ ದೊಡ್ಡ ತಂಡವನ್ನು ಹೊಂದಿದೆ. ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ಒಟ್ಟು 79 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ತಂಡವು ರಾಷ್ಟ್ರೀಯ ತರಬೇತುದಾರ ಪಿ. ರಾಧಾಕೃಷ್ಣನ್ ನೇತೃತ್ವದ 20 ತರಬೇತುದಾರರು ಸೇರಿದಂತೆ 31 ಸದಸ್ಯರ ಸಹಾಯಕ ಸಿಬ್ಬಂದಿಯನ್ನು ಹೊಂದಿದೆ. ಆದಾಗ್ಯೂ, ಕಳೆದ ವರ್ಷದ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರನ್ನು ಭಾರತ ಕಳೆದುಕೊಳ್ಳಲಿದೆ, ಅವರು ಗಾಯದಿಂದಾಗಿ ಈ ಏಷ್ಯನ್ ಕ್ರೀಡಾಕೂಟದಿಂದ ಹೊರಗುಳಿಯಲಿದ್ದಾರೆ.
ಇನ್ನು ಕ್ರಿಕೆಟ್‌ನಲ್ಲಿ, ಈ ಬಾರಿಯೂ ಭಾರತೀಯ ಪುರುಷ ಮತ್ತು ಮಹಿಳಾ ತಂಡಗಳು ಭಾಗವಹಿಸಲಿವೆ. ಎರಡೂ ತಂಡಗಳಿಗೆ ಒಟ್ಟು 20 ಸಹಾಯಕ ಸಿಬ್ಬಂದಿಯನ್ನು ಅನುಮೋದಿಸಲಾಗಿದೆ. ಕ್ರಿಕೆಟ್ನ ಜವಾಬ್ದಾರಿಯನ್ನು ಬಿಸಿಸಿಐ ಕ್ರಿಕೆಟ್ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಅವರಿಗೆ ವಹಿಸಲಾಗಿದೆ.
106 ಪದಕ ಗೆದ್ದ ಭಾರತ: ಈ ಬಾರಿ ಭಾರತೀಯ ಕ್ರೀಡಾಪಟುಗಳ ಒಟ್ಟು 36 ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಕಳೆದ ಏಷ್ಯನ್ ಕ್ರೀಡಾಕೂಟದಲ್ಲಿ ಪದಕಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು. ಇದರಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 40 ಕಂಚು ಸೇರಿದಂತೆ ಒಟ್ಟು 106 ಪದಕಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೇ ಕಳೆದ ಬಾರಿ ಭಾರತ ಒಟ್ಟು 41 ಸ್ಪರ್ಧೆಗಳಲ್ಲಿ ಭಾಗವಹಿಸಿತ್ತು. ಆದರೆ, ಈ ಬಾರಿ ಸರ್ಕಾರದ ಕಟ್ಟುನಿಟ್ಟಿನ ಏಷ್ಯನ್ ಕ್ರೀಡಾಕೂಟದ ಆಯ್ಕೆ ನೀತಿಯಿಂದಾಗಿ, 152 ಕ್ರೀಡಾಪಟುಗಳು ಅರ್ಹತೆ ಪಡೆದಿಲ್ಲ. ಆದಾಗ್ಯೂ, ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಪದಕಗಳನ್ನು ಗೆಲ್ಲುವ ಭರವಸೆಯೊಂದಿಗೆ ಭಾರತ ಪ್ರಯಾಣ ಬೆಳೆಸಲಿದೆ.
ಇದನ್ನೂ ಓದಿ: ಮಹಿಳಾ ಏಷ್ಯಾಕಪ್: ಇಂದು ಭಾರತ vs ಹಾಂಗ್ ಕಾಂಗ್ ಮುಖಾಮುಖಿ; ಪಂದ್ಯ ಪ್ರಸಾರ ಎಲ್ಲಿ?

