ಟಿ-20 ವಿಶ್ವಕಪ್ನಲ್ಲಿ ಹೊಸ ದಾಖಲೆ ಬರೆದ ಶಿಮ್ರಾನ್ ಹೆಟ್ಮೆಯರ್
ಭಾರತ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಶಿಮ್ರಾನ್ ಹೆಟ್ಮೆಯರ್ ಇತಿಹಾಸ ಸೃಷ್ಟಿಸಿದ್ದಾರೆ.


Published : March 2, 2026 at 3:22 PM IST
ಟಿ-20 ವಿಶ್ವಕಪ್ನಲ್ಲಿ ನಿನ್ನೆ ಭಾರತ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮೆಯರ್ ಇತಿಹಾಸ ಸೃಷ್ಟಿಸಿದ್ದಾರೆ. ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ, ವರುಣ್ ಚಕ್ರವರ್ತಿಯ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.
ಪೂರನ್ - ಸಾಹಿಬ್ಜಾದಾ ದಾಖಲೆ ಉಡೀಸ್: ಪ್ರಸ್ತುತ ಆವೃತ್ತಿಯಲ್ಲಿ ಹೆಟ್ಮೆಯರ್ ತಮ್ಮ ತಂಡದ ಸಹ ಆಟಗಾರ ನಿಕೋಲಸ್ ಪೂರನ್ ಮತ್ತು ಪಾಕಿಸ್ತಾನದ ಸಾಹಿಬ್ಜಾದಾ ಫರ್ಹಾನ್ ಅವರನ್ನು ಹಿಂದಿಕ್ಕಿದ್ದಾರೆ. ಈ ಋತುವಿನಲ್ಲಿ ಫರ್ಹಾನ್ 18 ಸಿಕ್ಸರ್‌ಗಳನ್ನು ಬಾರಿಸಿದ್ದರು, ಇದೀಗ ಹೆಟ್ಮೆಯರ್ 19 ಸಿಕ್ಸರ್ಗಳ ಮೂಲಕ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಏತನ್ಮಧ್ಯೆ, 2024ರ ಆವೃತ್ತಿಯಲ್ಲಿ, ಪೂರನ್ 17 ಸಿಕ್ಸರ್‌ಗಳನ್ನು ಬಾರಿಸಿದರು.
When it’s in his arc, it’s out of the park 🚀
— ICC (@ICC) March 1, 2026
No one has hit more sixes in a single Men's #T20WorldCup than Shimron Hetmyer 🔥
Broadcast details 👉 https://t.co/NPykWM7qqY pic.twitter.com/K4uCLnAtya
ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರು
19 - ಶಿಮ್ರಾನ್ ಹೆಟ್ಮೆಯರ್ (2026)
18 - ಸಾಹಿಬ್ಜಾದಾ ಫರ್ಹಾನ್ (2026)
17 - ನಿಕೋಲಸ್ ಪೂರನ್ (2024)
16 - ಕ್ರಿಸ್ ಗೇಲ್ (2012)
16 - ರಹಮಾನುಲ್ಲಾ ಗುರ್ಬಾಜ್ (2024)
ನಿನ್ನೆ ಭಾರತ ವಿರುದ್ಧದ ಪಂದ್ಯದಲ್ಲಿ ಹೆಟ್ಮೆಯರ್ ಉತ್ತಮ ಪ್ರದರ್ಶನ ನೀಡಿದರು. ಅವರು ಕೇವಲ 11 ಎಸೆತಗಳಲ್ಲಿ 27 ರನ್‌ಗಳನ್ನು ಬಾರಿಸಿದರು. ಆದರೆ, ಮುಂದಿನ ಜಸ್ಪ್ರೀತ್ ಬುಮ್ರಾ ಬೌಲಿಂಗ್ ವೇಳೆ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರೇ, ಬುಮ್ರಾ ಅವರ ಎಸೆತದಲ್ಲೇ ಮತ್ತೊಬ್ಬ ಬ್ಯಾಟರ್ ರೋಸ್ಟನ್ ಚೇಸ್ (40) ಸಹ ವಿಕೆಟ್ ಕಳೆದುಕೊಂಡರು.
ಟೀಮ್ ಇಂಡಿಯಾಗೆ ಐತಿಹಾಸಿಕ ಗೆಲುವು: ಸೂಪರ್ - 8ನ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್‌ಗಳನ್ನು ಕಲೆಹಾಕಿತು. ತಂಡದ ಪರ ರೋಸ್ಟನ್ ಚೇಸ್ ಮತ್ತು ಜೇಸನ್ ಹೋಲ್ಡರ್ ಅದ್ಭುತ ಪ್ರದರ್ಶನ ನೀಡಿದರು. ಚೇಸ್ 40 ರನ್ ಗಳಿಸಿದರೆ, ಹೋಲ್ಡರ್ ಅಜೇಯ 37 ರನ್ ಕೆಲೆಹಾಕಿದರು. ಇದಕ್ಕೆ ಉತ್ತರವಾಗಿ ಭಾರತ ಆರಂಭಿಕ ಸಂಜು ಸ್ಯಾಮ್ಸನ್ (97*) ಸ್ಫೋಟಕ ಬ್ಯಾಟಿಂಗ್ ಬಲದಿಂದ 19.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 199 ರನ್ ಕಲೆಹಾಕಿ 4 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು.
ಇದರೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ 190+ ಮೊತ್ತದ ಗುರಿಯನ್ನು ಯಶಸ್ವಿ ಆಗಿ ಚೇಸ್ ಮಾಡಿತು. ಇದಕ್ಕೂ ಮೊದಲು, ಭಾರತದ ಅತಿದೊಡ್ಡ ಚೇಸ್ 2014 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಂದಿತ್ತು. ಈ ಪಂದ್ಯದಲ್ಲಿ ಭಾರತ 173 ರನ್‌ಗಳ ಗುರಿಯನ್ನು ಯಶಸ್ವಿ ಆಗಿ ಚೇಸ್ ಮಾಡಿತ್ತು.
ಸೆಮಿಫೈನಲ್ ಪಂದ್ಯ ಯಾರೊಂದಿಗೆ?: ಸೂಪರ್ - 8ನಲ್ಲಿ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ಗೆ ತಲುಪಿರುವ ಭಾರತ ಇದೀಗ ಮಾ.5 ರಂದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನ ಆತಿಥ್ಯ ವಹಿಸಿಕೊಳ್ಳುತ್ತಿದೆ. ಮಾರ್ಚ್.8 ರಂದು ಭಾನುವಾರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ವೆಸ್ಟ್ ಇಂಡೀಸ್ ಮಣಿಸಿ ಪಾಕಿಸ್ತಾನ ದಾಖಲೆ ಸರಿಗಟ್ಟಿದ ಟೀಮ್ ಇಂಡಿಯಾ

