ETV Bharat / sports

ಭಾರತವನ್ನು ತಮ್ಮದೇ ಅಭಿಮಾನಿಗಳ ಮುಂದೆ ಸೋಲಿಸುತ್ತೇವೆ; ಇಂಗ್ಲೆಂಡ್ ಖಡಕ್​ ವಾರ್ನಿಂಗ್

ನಾಳೆ ಟೀಮ್​ ಇಂಡಿಯಾವನ್ನು ತಮ್ಮದೇ ಅಭಿಮಾನಿಗಳ ಮುಂದೆ ಸೋಲಿಸುತ್ತೇವೆ ಎಂದು ಇಂಗ್ಲೆಂಡ್​ ಪ್ಲೇಯರ್​ ಎಚ್ಚರಿಕೆ ನೀಡಿದ್ದಾರೆ.

ಟೀಮ್​ ಇಂಡಿಯಾ
ಟೀಮ್​ ಇಂಡಿಯಾ (IANS)
author img

By ETV Bharat Sports Team

Published : March 4, 2026 at 6:34 PM IST

2 Min Read
Choose ETV Bharat

ಹೈದರಾಬಾದ್: 2026ರ ಟಿ20 ವಿಶ್ವಕಪ್‌ನ ಭಾಗವಾಗಿ ಗುರುವಾರ ನಡೆಯಲಿರುವ ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯಕ್ಕಾಗಿ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ನಾಳೆ ವಾಂಖೆಡಯಲ್ಲಿ ಉಭಯ ತಂಡಗಳು ಸೆಣಸಲಿದ್ದು ಇದಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿವೆ. ಈ ಪಂದ್ಯಕ್ಕೂ ಮೊದಲೇ ಇಂಗ್ಲೆಂಡ್ ಸ್ಟಾರ್ ಆಲ್‌ರೌಂಡರ್ ಮಾಡಿದ ಕಾಮೆಂಟ್‌ಗಳು ಭಾರೀ ಸಂಚಲನ ಮೂಡಿಸಿವೆ.

ಇಂಗ್ಲೆಂಡ್​ನ ಆಲ್​ರೌಂಡರ ಸ್ಯಾಮ್​ ಕರ್ರನ್​ 2023ರ ವಿಶ್ವಕಪ್​ ಫೈನಲ್​ ವೇಳೆ ಪ್ಯಾಟ್​ ಕಮಿನ್ಸ್​ ನೀಡಿದ ಶೈಲಿಯಲ್ಲಿ ಭಾರತಕ್ಕೆ ವಾರ್ನಿಂಗ್​ ನೀಡಿದ್ದಾರೆ. ನಾಳೆ ವಾಂಖೆಡೆ ಮೈದಾನವನ್ನು ಸ್ತಬ್ದಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಸೆಮಿಫೈನಲ್‌ಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ರನ್, ಗುರುವಾರ ವಾಂಖೆಡೆ ಕ್ರೀಡಾಂಗಣವು ಮೌನಕ್ಕೆ ಜಾರಲಿದೆ ಎಂದು ನಿರೀಕ್ಷಿಸುತ್ತಿದ್ದೇನೆ. ಇದರ ಅರ್ಥ ನಾಳೆಯ ಪಂದ್ಯದಲ್ಲಿ ನಮ್ಮ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್​ ತಲುಪುತ್ತದೆ ಎಂದರು.

ಮುಂಬೈನಲ್ಲಿ ಸಾಮಾನ್ಯವಾಗಿ ಭಾರತೀಯ ಅಭಿಮಾನಿಗಳ ಆರ್ಭಟ ಜೋರಾಗಿರುತ್ತದೆ. ಆದರೆ ಉತ್ತಮ ಪ್ರದರ್ಶನದ ಮೂಲಕದ ಅವರನ್ನು ಮೌನಗೊಳಿಸಿ ಭಾರತದ ಮೇಲೆ ಒತ್ತಡವನ್ನು ಹೆಚ್ಚಿಸುತ್ತೇವೆ. ಅಭಿಮಾನಿಗಳ ಕಿರುಚಾಟವನ್ನು ನಿಯಂತ್ರಿಸಲು ಸಾಧ್ಯವಾದರೆ, ಪಂದ್ಯದ ಮೇಲೆ ಪ್ರಾಬಲ್ಯವೂ ಸಾಧಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.

ಕರ್ರನ್​ ಅವರ ಈ ಹೇಳಿಕೆ ಪ್ಯಾಟ್ ಕಮ್ಮಿನ್ಸ್ ಅವರ ಹಳೆಯ ಹೇಳಿಕೆಯನ್ನು ನೆನಪಿಸಿತು. 2023 ರ ODI ವಿಶ್ವಕಪ್ ಫೈನಲ್‌ಗೆ ಮೊದಲು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಇದೇ ರೀತಿ ಕಾಮೆಂಟ್​ ಮಾಡಿದ್ದರು. ಆ ಸಮಯದಲ್ಲಿ, ಅಹಮದಾಬಾದ್‌ನಲ್ಲಿ 132,000 ಪ್ರೇಕ್ಷಕರನ್ನು ಮೌನಗೊಳಿಸುವುದಕ್ಕಿಂತ ತೃಪ್ತಿಕರವಾದದ್ದೇನೂ ಇಲ್ಲ ಎಂದು ಕಮ್ಮಿನ್ಸ್ ಹೇಳಿದರು. ವಾಸ್ತವವಾಗಿ, ಆಸ್ಟ್ರೇಲಿಯಾ ಆ ಪಂದ್ಯದಲ್ಲಿ ಭಾರತವನ್ನು ಸೋಲಿಸಿತು, ಲಕ್ಷಾಂತರ ಭಾರತೀಯರ ಹೃದಯಗಳನ್ನು ಒಡೆದುಹಾಕಿತು. ಈಗ, ಅದೇ ಧಾಟಿಯಲ್ಲಿ, ಸ್ಯಾಮ್ ಕರನ್ ಅವರು ಕ್ರೀಡಾಂಗಣವನ್ನು ಮೌನಗೊಳಿಸುವುದಾಗಿ ಹೇಳಿರುವುದು ಭಾರತೀಯ ಅಭಿಮಾನಿಗಳಿಗೆ ಆ ಕಹಿ ನೆನಪುಗಳನ್ನು ನೆನಪಿಸುತ್ತಿದೆ.

ಮುಂದುವರೆದು ಮಾತನಾಡುತ್ತ, ಐಪಿಎಲ್‌ನಂತಹ ಪಂದ್ಯಾವಳಿಗಳಿಂದಾಗಿ ಇಂಗ್ಲೆಂಡ್ ಆಟಗಾರರು ಇಲ್ಲಿನ ವಾತಾವರಣ ಮತ್ತು ಪ್ರೇಕ್ಷಕರಿಗೆ ಚೆನ್ನಾಗಿ ಒಗ್ಗಿಕೊಂಡಿದ್ದಾರೆ ಎಂದು ಕರ್ರನ್ ಹೇಳಿದರು. "ಅನೇಕ ಯುವ ಕ್ರಿಕೆಟಿಗರು ಭಾರತದ ವಿರುದ್ಧ ಸೆಮಿಫೈನಲ್ ಆಡುವ ಕನಸು ಕಾಣುತ್ತಾರೆ ಮತ್ತು ಆ ಅವಕಾಶವನ್ನು ಪಡೆಯುವುದು ನಮಗೆ ತುಂಬಾ ಒಳ್ಳೆಯದು". ಕ್ರೀಡಾಂಗಣದೊಳಗೆ ಎಷ್ಟೇ ಶಬ್ದವಿದ್ದರೂ, ನಾವು ಅದನ್ನು ಅದ್ಭುತ ಅನುಭವವೆಂದು ಪರಿಗಣಿಸುತ್ತೇವೆ, ಆದರೆ ಅಂತಿಮವಾಗಿ ನಮ್ಮ ಗುರಿ ಕ್ರೀಡಾಂಗಣವನ್ನು ಶಾಂತಗೊಳಿಸಿ ಫೈನಲ್‌ಗೆ ಹೋಗುವುದು ಎಂದು ಸ್ಪಷ್ಟಪಡಿಸಿದರು.

ಸತತ ಮೂರನೇ ಸೆಮಿಫೈನಲ್: ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗುತ್ತಿರುವುದು ಇದು ಸತತ ಮೂರನೇ ಬಾರಿ. 2022 ರಲ್ಲಿ ಅಡಿಲೇಡ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದರೆ, 2024 ರಲ್ಲಿ ಜಾರ್ಜ್ ಟೌನ್‌ನಲ್ಲಿ ನಡೆದ ಕದನದಲ್ಲಿ ಭಾರತ 68 ರನ್‌ಗಳಿಂದ ಗೆದ್ದು ಸೇಡು ತೀರಿಸಿಕೊಂಡಿತು. ಇದೇ ಸಂದರ್ಭದಲ್ಲಿ, 2022ರಲ್ಲಿ ಅವರು ಆಡಿದ ಆಟವನ್ನು ಪುನರಾವರ್ತಿಸಲು ಬಯಸುತ್ತೇನೆ ಎಂದು ಹೇಳಿದರು. ಆ ದಿನ ಬೌಲರ್‌ಗಳು ಬಿಗಿಯಾಗಿ ಬೌಲಿಂಗ್ ಮಾಡಿದರು ಮತ್ತು ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಭಾರತವನ್ನು ಸೋಲಿಸಿದರು ಎಂದು ಅವರು ನೆನಪಿಸಿಕೊಂಡರು.

"ಹೇಗಾದರೂ ಮಾಡಿ ನಾಳೆಯ ಪಂದ್ಯವನ್ನು ಗೆದ್ದು ಮತ್ತೆ ವಿಶ್ವಕಪ್ ಫೈನಲ್ ತಲುಪುವುದು ನನ್ನ ಮುಖ್ಯ ಗುರಿಯಾಗಿದೆ" ಭಾರತವನ್ನು ತಮ್ಮದೇ ಅಭಿಮಾನಿಗಳ ಮುಂದೆ ಸೋಲಿಸುತ್ತೇನೆ ಎಂದು ಕರನ್ ವಿಶ್ವಾಸ ವ್ಯಕ್ತಪಡಿಸಿದರು.

ವಾಂಖೆಡೆ ಕ್ರೀಡಾಂಗಣವು ನರೇಂದ್ರ ಮೋದಿ ಕ್ರೀಡಾಂಗಣಕ್ಕಿಂತ ಚಿಕ್ಕದಾಗಿದ್ದರೂ, ಅಲ್ಲಿನ ಪ್ರೇಕ್ಷಕರ ಸದ್ದು ಹೆಚ್ಚು ಜೋರಾಗಿರುತ್ತದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡಕ್ಕೆ ಮುಂಬೈ ಪ್ರೇಕ್ಷಕರ ಬೆಂಬಲ ಅಪಾರ ಬಲ ನೀಡುತ್ತದೆ. ಸ್ಯಾಮ್ ಕರನ್ ವಾರ್ನಿಂಗ್​ಗೆ ಟೀಮ್​ ಇಂಡಿಯಾ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ಐಪಿಎಲ್​ ಪ್ರಾರಂಭಕ್ಕೂ ಮೊದಲೇ ಆರ್​ಸಿಬಿ ಫ್ಯಾನ್ಸ್​ಗಳಿಗೆ ಸಿಕ್ಕಿತು ಗುಡ್​ನ್ಯೂಸ್​!