ETV Bharat / sports

11 ವರ್ಷಗಳ ಹಿಂದೆ ಇದೇ ದಿನ ಸ್ಫೋಟಕ ಇನ್ನಿಂಗ್ಸ್​ ಮೂಲಕ ವಿಶ್ವದಾಖಲೆ ಬರೆದಿದ್ದ ಹಿಟ್​ಮ್ಯಾನ್​

11 ವರ್ಷಗಳ ಹಿಂದೆ ಇದೇ ದಿನದಂದು ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ರೋಹಿತ್​ ಶರ್ಮಾ ಸ್ಫೋಟಕ ಇನ್ನಿಂಗ್ಸ್​ ಮೂಲಕ ಇತಿಹಾಸ ಸೃಷ್ಟಿಸಿದ್ದರು.

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ (IANS)
author img

By ETV Bharat Sports Team

Published : November 13, 2025 at 4:33 PM IST

2 Min Read
Choose ETV Bharat

ಇದೇ ದಿನದಂದು ಅಂದರೆ ನವೆಂಬರ್ 13, 2014ರಂದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎಂದು ಕಂಡು ಕೇಳರಿಯದ ದಾಖಲೆ ನಿರ್ಮಾಣ ಆಗಿತ್ತು. ಅಂದು ಸೃಷ್ಟಿಯಾಗಿದ್ದ ಈ ದಾಖಲೆ 11 ವರ್ಷಗಳು ಕಳೆದರೂ ಇಂದಿಗೂ ಹಾಗೆ ಉಳಿದಿದೆ. ಹೌದು, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅದ್ಭುತ ಇನ್ನಿಂಗ್ಸ್​ ಮೂಲಕ ವಿಶ್ವದಾಖಲೆ ನಿರ್ಮಿಸಿದರು.

ಎದುರಾಳಿ ಬೌಲರ್‌ಗಳನ್ನು ಮನಸೋಇಚ್ಛೆ ದಂಡಿಸಿದ್ದ ಹಿಟ್​ಮ್ಯಾನ್​ ಸ್ಫೋಟಕ ಬ್ಯಾಟಿಂಗ್​ ಮೂಲಕವೇ ರೌದ್ರಾವತಾರ ತಾಳಿದ್ದರು. ಬೌಲರ್​ಗಳು ಮಾತ್ರವಲ್ಲದೇ ಮೈದಾನದಲ್ಲಿ ನರೆದಿದ್ದ ಪ್ರೇಕ್ಷಕರು ದಿಗ್ಭ್ರಮೆಗೊಂಡಿದ್ದರು. ಇಷ್ಟಕ್ಕೆ ಆ ದಿನ ನಡೆದಿದ್ದು ಏನು ಎಂದು ಇದೀಗ ತಿಳಿಯೋಣ.

ಬರೋಬ್ಬರಿ 11 ವರ್ಷಗಳ ಹಿಂದೆ ಇದೇ ದಿನ, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಏಕದಿನ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ, ರೋಹಿತ್ ಬೃಹತ್ ಇನ್ನಿಂಗ್ಸ್ ಮೂಲಕ ರನ್​ಮಳೆ ಹರಿಸಿದ್ದರು. ಶ್ರೀಲಂಕಾದ ಬೌಲರ್‌ಗಳನ್ನು ದಂಡಿಸಿದ ಅವರು 173 ಎಸೆತಗಳಲ್ಲಿ 33 ಬೌಂಡರಿ ಮತ್ತು 9 ಸಿಕ್ಸರ್‌ಗಳೊಂದಿಗೆ 264 ರನ್ ಚಚ್ಚಿ ಇಡೀ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದ್ದರು. ರೋಹಿತ್ ಅವರ ಈ ಸ್ಫೋಟಕ ಇನ್ನಿಂಗ್ಸ್‌ಗೆ ಜಗತ್ತು ಬೆರಗುಗೊಂಡಿತ್ತು.

ಈ ಪಂದ್ಯದಲ್ಲಿ ಆರಂಭಿಕರಾಗಿ ಬ್ಯಾಟಿಂಗ್​ಗೆ ಬಂದ ಹಿಟ್​ಮ್ಯಾನ್​ ಇನ್ನಿಂಗ್ಸ್ ಮುಗಿಯುವವರೆಗೂ ಕ್ರೀಸ್‌ನಲ್ಲಿಯೇ ಇದ್ದರು. ಆದರೆ, ಇನ್ನಿಂಗ್ಸ್​ ಮುಕ್ತಾಯದ ಕೊನೆಯ ಎಸೆತದಲ್ಲಿ ಕ್ಯಾಚ್ ಔಟ್ ಆದರು. ಇದರೊಂದಿಗೆ ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಬ್ಯಾಟರ್​ ಒಬ್ಬ ಗಳಿಸಿದ ವೈಯಕ್ತಿಕ ಗರಿಷ್ಠ ಸ್ಕೋರ್​ ಇದಾಗಿದೆ. ಆದಾಗ್ಯೂ, ಈ ಪಂದ್ಯಕ್ಕೂ ಮೊದಲು, ರೋಹಿತ್ ಗಾಯದಿಂದಾಗಿ ಮೂರು ತಿಂಗಳು ಕ್ರಿಕೆಟ್ ಆಡದೆ ಮೈದಾನದಿಂದ ಹೊರಗುಳಿದಿದ್ದರು ಎಂಬುದು ಗಮನಾರ್ಹ.

ಎರಡು ದ್ವಿಶತಕ: ಈ ಆಕರ್ಷಕ ಇನ್ನಿಂಗ್ಸ್​ನೊಂದಿಗೆ ರೋಹಿತ್ ಹಲವಾರು ದಾಖಲೆಗಳನ್ನು ಬರೆದರು. ಇದಕ್ಕೂ ಮೊದಲೇ ರೋಹಿತ್ ಖಾತೆಯಲ್ಲಿ ದ್ವಿಶತಕ ಸಿಡಿಸಿದ್ದ ದಾಖಲೆ ಹೊಂದಿದ್ದರು. ಅವರು 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದರು. ಈ ಇನ್ನಿಂಗ್ಸ್‌ನೊಂದಿಗೆ, ಅವರು ವಿಶ್ವ ಕ್ರಿಕೆಟ್‌ನಲ್ಲಿ ಏಕದಿನ ಪಂದ್ಯಗಳಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ ಏಕೈಕ ಕ್ರಿಕೆಟಿಗ ಎಂಬ ದಾಖಲೆಯನ್ನು ಸೃಷ್ಟಿಸಿದರು.

ಈ ಪಂದ್ಯದಲ್ಲಿ ರೋಹಿತ್ ಅವರ ದ್ವಿಶತಕದ ನೆರವಿನಿಂದ ಭಾರತ 404 -5 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ನಂತರ, ಬೃಹತ್ ಚೇಸಿಂಗ್‌ ಬೆನ್ನತ್ತಿದ ಶ್ರೀಲಂಕಾ ತಂಡವು 251 ರನ್‌ಗಳಿಗೆ ಆಲೌಟ್ ಆಯಿತು. ಶ್ರೀಲಂಕಾ ತಂಡ ರೋಹಿತ್‌ಗಿಂತ 13 ರನ್‌ಗಳು ಕಡಿಮೆ ಗಳಿಸಿತು. ಒಟ್ಟಾರೆಯಾಗಿ, ಭಾರತ 153 ರನ್‌ಗಳ ಬೃಹತ್ ಅಂತರದಿಂದ ಗೆದ್ದಿತು. ಬಿರುಗಾಳಿಯ ಇನ್ನಿಂಗ್ಸ್‌ನೊಂದಿಗೆ ರೋಹಿತ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.

ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್‌

  • ರೋಹಿತ್ ಶರ್ಮಾ (ಭಾರತ) - 264 vs ಶ್ರೀಲಂಕಾ, 2014
  • ಮಾರ್ಟಿನ್ ಗುಪ್ಟಿಲ್ (ನ್ಯೂಜಿಲೆಂಡ್) - 234 vs ವೆಸ್ಟ್ ಇಂಡೀಸ್, 2015
  • ವೀರೇಂದ್ರ ಸೆಹ್ವಾಗ್ (ಭಾರತ) - 219 vs ವೆಸ್ಟ್ ಇಂಡೀಸ್, 2011
  • ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 215 vs ಜಿಂಬಾಬ್ವೆ, 2015
  • ಫಖರ್ ಜಮಾನ್ (ಪಾಕಿಸ್ತಾನ)- 210* vs ಜಿಂಬಾಬ್ವೆ, 2018

ಮೂರು ದ್ವಿಶತಕಗಳು: ರೋಹಿತ್ 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಏಕದಿನ ದ್ವಿಶತಕ ಗಳಿಸಿದ್ದರು. ಮುಂದಿನ ವರ್ಷ, ಶ್ರೀಲಂಕಾ ವಿರುದ್ಧ ತಮ್ಮ ಎರಡನೇ ದ್ವಿಶತಕ (264) ಬಾರಿಸಿ ಗಮನ ಸೆಳೆದಿದ್ದರು, ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಸ್ಥಾಪಿಸಿದ್ದರು. 2017 ರಲ್ಲಿ, ರೋಹಿತ್ ಶ್ರೀಲಂಕಾ ವಿರುದ್ಧ ಮತ್ತೆ ತಮ್ಮ ಮೂರನೇ ದ್ವಿಶತಕ (208*) ಗಳಿಸಿದ್ದರು. ಇದರೊಂದಿಗೆ, ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಏಕೈಕ ಕ್ರಿಕೆಟಿಗ ರೋಹಿತ್ ಆಗಿ ಉಳಿದಿದ್ದಾರೆ.

ಇದನ್ನೂ ಓದಿ: ಈ ಬಾರಿ ಭಾರತವನ್ನು ಅವರದ್ದೇ ನೆಲದಲ್ಲಿ ಮಣಿಸುತ್ತೇವೆ: ಕೇಶವ್ ಮಹಾರಾಜ್