ಯುವ ಕ್ರಿಕೆಟಿಗರಿಗೆ ಗೋಲ್ಡನ್ ಚಾನ್ಸ್! ಬೆಂಗಳೂರಿನಲ್ಲಿ ನಡೆಯಲಿದೆ ಮಹಾರಾಜ ಟ್ರೋಫಿ ಮುಕ್ತ ಆಯ್ಕೆ ಪ್ರಕ್ರಿಯೆ
ಮುಂಬರುವ ಮಹಾರಾಜ ಟ್ರೋಫಿ ಟೂರ್ನಿಗಾಗಿ ರಾಜ್ಯದ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಲು ಮೈಸೂರು ವಾರಿಯರ್ಸ್ ತಂಡವು ಬೆಂಗಳೂರಿನಲ್ಲಿ ಒಂದು ದಿನದ ಮುಕ್ತ ಆಯ್ಕೆ ಪ್ರಕ್ರಿಯೆಯನ್ನು ಆಯೋಜಿಸಿದೆ.

Published : May 30, 2026 at 1:25 PM IST
ಬೆಂಗಳೂರು: ಮುಂಬರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ T-20 ಕ್ರಿಕೆಟ್ ಟೂರ್ನಿಗಾಗಿ ರಾಜ್ಯದ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನ ಗುರುತಿಸಲು ಮೈಸೂರು ವಾರಿಯರ್ಸ್ ತಂಡವು ಜೂನ್ 1 ರಂದು ಬೆಂಗಳೂರಿನಲ್ಲಿ ಒಂದು ದಿನದ ಮುಕ್ತ ಆಯ್ಕೆ ಪ್ರಕ್ರಿಯೆಯನ್ನು ಆಯೋಜಿಸಿದೆ. ರಾಜನಕುಂಟೆಯಲ್ಲಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಪ್ರತಿಭಾನ್ವೇಷಣೆ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಯಿಂದಲೇ ಟ್ರಯಲ್ಸ್ ಆರಂಭವಾಗಲಿದೆ.
ಕೆಎಸ್‌ಸಿಎ ನೋಂದಾಯಿತ ಕ್ಲಬ್ ಆಟಗಾರರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಆಯ್ಕೆಗೆ ಬರುವ ಆಟಗಾರರು ಕಡ್ಡಾಯವಾಗಿ ಕಳೆದ ಎರಡು ವರ್ಷಗಳ ತಮ್ಮ ಕೆಎಸ್‌ಸಿಎ ಪಂದ್ಯಗಳ ಅಂಕಿ-ಅಂಶಗಳ ದಾಖಲೆ ಮತ್ತು ಸ್ವಂತ ಕ್ರಿಕೆಟ್ ಕಿಟ್‌ನ್ನ ತರಬೇಕೆಂದು ಮೈಸೂರು ವಾರಿಯರ್ಸ್ ಫ್ರಾಂಚೈಸಿ ತಿಳಿಸಿದೆ.
ಶಿಬಿರದಲ್ಲಿ ಮೈಸೂರು ವಾರಿಯರ್ಸ್ ತಂಡದ ಮುಖ್ಯ ಕೋಚ್ ಆರ್.ಎಕ್ಸ್. ಮುರಳೀಧರ್, ಸಹಾಯಕ ಕೋಚ್ ವಿಜಯ್ ಮದ್ಯಾಲ್ಕರ್, ವ್ಯವಸ್ಥಾಪಕ ಸುರೇಶ್ ಎಂ.ಆರ್ ಸೇರಿದಂತೆ ಕೋಚಿಂಗ್ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಶಿಬಿರದಲ್ಲಿ ಆಯ್ಕೆಯಾಗುವ ಅತ್ಯುತ್ತಮ ಆಟಗಾರರನ್ನು ಮೈಸೂರು ವಾರಿಯರ್ಸ್ ತಂಡವು ಮಹಾರಾಜ ಟ್ರೋಫಿ T-20ಯ ಹರಾಜು ಪಟ್ಟಿಗೆ ಸೇರಿಸಲು ಕೆಎಸ್‌ಸಿಎಗೆ ಶಿಫಾರಸು ಮಾಡಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗ ಅವರು, "ನಮ್ಮ ಎನ್‌ಆರ್ ಗ್ರೂಪ್ ಯುವ ಪ್ರತಿಭೆಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಸೂಕ್ತ ವೇದಿಕೆ ಕಲ್ಪಿಸಿಕೊಡುವಲ್ಲಿ ಸದಾ ಮುಂಚೂಣಿಯಲ್ಲಿದೆ. ಈ ಪ್ರತಿಭಾನ್ವೇಷಣೆಯ ಮೂಲಕ ರಾಜ್ಯದ ಭರವಸೆಯ ಕ್ರಿಕೆಟಿಗರನ್ನು ಗುರುತಿಸಿ, ಅವರಿಗೆ ಕ್ರಿಕೆಟ್ ಜೀವನದಲ್ಲಿ ಮುಂದೆ ಬರಲು ಉತ್ತಮ ಅವಕಾಶ ಮತ್ತು ಪ್ರೋತ್ಸಾಹ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ" ಎಂದು ತಿಳಿಸಿದ್ದಾರೆ.

ಟೂರ್ನಿ ಯಾವಾಗ ಪ್ರಾರಂಭ?: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಹಾರಾಜ T20 ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಜೂನ್ 20 ರಿಂದ ಜುಲೈ 12ರವರೆಗೆ ನಡೆಯಲಿದೆ. ಈ ಬಾರಿ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಪಂದ್ಯಗಳು ನಡೆಯಲಿದ್ದು, ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಟೂರ್ನಿಯು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಪಂದ್ಯಗಳು ಮೈಸೂರಿನಲ್ಲಿ ಆರಂಭವಾಗಲಿವೆ. ನಂತರ ಹುಬ್ಬಳ್ಳಿಯಲ್ಲಿ, ಅಂತಿಮ ಸುತ್ತಿನ ಪಂದ್ಯಗಳು ಮತ್ತೆ ಮೈಸೂರಿನಲ್ಲಿ ನಡೆಯಲಿವೆ.
ಜೂನ್ 4 ರಂದು ಆಟಗಾರರ ಹರಾಜು ಪ್ರಕ್ರಿಯೆ ಆಲೂರಿನಲ್ಲಿ ನಡೆಸಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ. ಪ್ರತಿ ತಂಡಗಳಿಗೆ ಗರಿಷ್ಠ 60 ಲಕ್ಷ ರೂಪಾಯಿಗಳ ಮೊತ್ತವನ್ನು (ಪರ್ಸ್) ನಿಗದಿಪಡಿಸಲಾಗಿದೆ. ಕೆಎಸ್‌ಸಿಎ ಹಿರಿಯ ಆಟಗಾರರ ಆಯ್ಕೆ ಸಮಿತಿಯು ಸಿದ್ಧಪಡಿಸಲಿರುವ ಸುಮಾರು 130 ರಿಂದ 150 ಆಟಗಾರರು ಹರಾಜಿನಲ್ಲಿರಲಿದ್ದಾರೆ. ಪ್ರತಿ ತಂಡವು ಕನಿಷ್ಠ 16 ಮತ್ತು ಗರಿಷ್ಠ 18 ಆಟಗಾರರನ್ನ ಖರೀದಿಸಬಹುದಾಗಿದೆ. ಇದರೊಂದಿಗೆ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಇಬ್ಬರು ಹೆಚ್ಚುವರಿ 'ಕ್ಯಾಚ್‌ಮೆಂಟ್ ಏರಿಯಾ' (ಸ್ಥಳೀಯ ವ್ಯಾಪ್ತಿಯ) ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಮಹಾರಾಜ ಟ್ರೋಫಿ ಚಾಂಪಿಯನ್ಸ್
ಮಹಾರಾಜ ಟ್ರೋಫಿ 2022ರಲ್ಲಿ ಪ್ರಾರಂಭಗೊಂಡಿದ್ದು ಈಗಾಗಲೇ 4 ಆವೃತ್ತಿಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಈ ಟೂರ್ನಿಯಲ್ಲಿ ಇದುವರೆಗೆ 4 ತಂಡಗಳು ಚಾಂಪಿಯನ್ಗಳಾಗಿ ಹೊರಹೊಮ್ಮಿವೆ. 2022ರ ಚೊಚ್ಚಲ ಆವೃತ್ತಿಯಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ಚಾಂಪಿಯನ್ ಆಗಿತ್ತು. ನಂತರ 2023ರಲ್ಲಿ ಹುಬ್ಬಳಿ ಟೈಗರ್ಸ್, 2024ರಲ್ಲಿ ಮೈಸೂರ್ ವಾರಿಯರ್ಸ್, 2025ರಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡಗಳು ಟ್ರೋಫಿ ಗೆದ್ದುಕೊಂಡಿವೆ.
ಇದನ್ನೂ ಓದಿ: ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಕೆಎಸ್‌ಸಿಎ ಮಹಾರಾಜ ಟ್ರೋಫಿ T-20 ಪಂದ್ಯಾವಳಿ

