ಅಪ್ರಾಪ್ತ ಶೂಟರ್ಗೆ ಲೈಂಗಿಕ ಕಿರುಕುಳ ಆರೋಪ: ರಾಷ್ಟ್ರೀಯ ತರಬೇತುದಾರ ಅಮಾನತು, ಕೇಸ್ ದಾಖಲು
ಹರಿಯಾಣದ ಫರಿದಾಬಾದ್ನ ಅಪ್ರಾಪ್ತ ಶೂಟರ್ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಷ್ಟ್ರೀಯ ತರಬೇತುದಾರನನ್ನು ಅಮಾನತು ಮಾಡಲಾಗಿದೆ. ಆತನ ವಿರುದ್ಧ ಕೇಸ್ ದಾಖಲಿಸಲಾಗಿದೆ.

By PTI
Published : January 8, 2026 at 4:15 PM IST
ಫರಿದಾಬಾದ್ (ಹರಿಯಾಣ): ಕಳೆದ ತಿಂಗಳು ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 17 ವರ್ಷದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಭಾರತದ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು ಅಮಾನತುಗೊಳಿಸಲಾಗಿದೆ.
ಶೂಟರ್ ಕುಟುಂಬ ನೀಡಿದ ದೂರಿನ ಮೇರೆಗೆ ತರಬೇತುದಾರನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಸಾಕ್ಷಿಗಳಿಂದ ಹೇಳಿಕೆ ದಾಖಲು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ ತನಿಖೆ ಆರಂಭಿಸಲಾಗಿದೆ.
ಶೂಟರ್ ಆರೋಪವೇನು?: 17 ವರ್ಷದ ಶೂಟರ್ ನೀಡಿದ ದೂರಿನ ಪ್ರಕಾರ, "2025ರ ಡಿಸೆಂಬರ್ 16 ರಂದು ದೆಹಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಶೂಟಿಂಗ್ ಚಾಂಪಿಯನ್‌ಶಿಪ್ ನಡೆಯುತ್ತಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಲು ತನ್ನ ತರಬೇತುದಾರರೊಂದಿಗೆ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ಗೆ ಬಂದೆ. ಚಾಂಪಿಯನ್‌ಶಿಪ್ ಸಮಯದಲ್ಲಿ ತರಬೇತುದಾರ ಸೂರಜ್‌ಕುಂಡ್‌ನಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದರು. ಟೂರ್ನಿ ಮುಗಿದ ನಂತರ, ತರಬೇತುದಾರರು ನನ್ನ ಪ್ರದರ್ಶನದ ಬಗ್ಗೆ ಚರ್ಚಿಸುವ ನೆಪದಲ್ಲಿ ಹೋಟೆಲ್‌ಗೆ ಆಹ್ವಾನಿಸಿದ್ದರು.
ನಾನು ಅಲ್ಲಿಗೆ ಹೋದ ಬಳಿಕ, ಹೋಟೆಲ್ನ ಕೊಠಡಿಗೆ ಬರುವಂತೆ ಸೂಚಿಸಿದ. ಪಂದ್ಯದ ಬಗ್ಗೆ ಚರ್ಚಿಸಿದ ನಂತರ ನನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ, ನಿನ್ನ ವೃತ್ತಿಜೀವನ ಹಾಳು ಮಾಡುವ ಮತ್ತು ಕುಟುಂಬಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ. ಇದರಿಂದ ಹೆದರಿ ನಾನು ಯಾರಿಗೂ ತಿಳಿಸಿರಲಿಲ್ಲ. ಆದರೆ, ನನ್ನಲ್ಲಾದ ಬದಲಾವಣೆ ಗಮನಿಸಿ ತಾಯಿ ವಿಚಾರಿಸಿದಾಗ ಜನವರಿ 6 ರಂದು ಈ ಬಗ್ಗೆ ತಿಳಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕುಟುಂಬಸ್ಥರು ಈ ಬಗ್ಗೆ ಮಾಹಿತಿ ಪಡೆದ ನಂತರ, ಆಕೆಯನ್ನು ಫರಿದಾಬಾದ್‌ನಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದು, ಆರೋಪಿ ತರಬೇತುದಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತನಿಖೆ ಆರಂಭ: ಪ್ರಕರಣದ ಕುರಿತಂತೆ, ಫರಿದಾಬಾದ್ ಪೊಲೀಸ್ ವಕ್ತಾರ ಯಶ್ಪಾಲ್ ಸಿಂಗ್ ಮಾಹಿತಿ ನೀಡಿದ್ದು, "ಸಂತ್ರಸ್ತೆಯ ತಾಯಿಯ ದೂರಿನ ಆಧಾರದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಡಿಸೆಂಬರ್ 16 ರಂದು ನಡೆದಿದ್ದರೂ, ಜನವರಿ 6 ರಂದು ದೂರು ದಾಖಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪುರಾವೆ ಸಂಗ್ರಹಿಸಲು ಹೋಟೆಲ್ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಸ್ತುತ ತರಬೇತುದಾರ ಮತ್ತು ಹೋಟೆಲ್ ಸಿಬ್ಬಂದಿಯನ್ನು ವಿಚಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತರಬೇತುದಾರ ಅಮಾನತು: ವಿಷಯ ಬೆಳಕಿಗೆ ಬಂದ ನಂತರ ಭಾರತೀಯ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಕೋಚ್ ಅಂಕುಶ್ ಭಾರದ್ವಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಭಾರದ್ವಾಜ್ ಅವರು ಯಾವುದೇ ತರಬೇತಿ ಚಟುವಟಿಕೆಯಲ್ಲಿ ತೊಡಗುವಂತಿಲ್ಲ ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆ ಆದೇಶಿಸಿದೆ.
ಇವುಗಳನ್ನೂ ಓದಿ:

