IPLನಲ್ಲಿ ಇಂದು ಸಂಜೆ LSG vs RR: ಯಶಸ್ವಿ-ಸೂರ್ಯವಂಶಿ ಜೋಡಿಯತ್ತ ಎಲ್ಲರ ಚಿತ್ತ
ಲಕ್ನೋದಲ್ಲಿಂದು ಸಂಜೆ ನಡೆಯಲಿರುವ 32ನೇ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡದೆದುರು ಸೆಣಸಲಿದೆ.

Published : April 22, 2026 at 1:52 PM IST
ಹೈದರಾಬಾದ್: ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ಸಂಜೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಜಸ್ಥಾನ ರಾಯಲ್ಸ್ (RR) ಮುಖಾಮುಖಿಯಾಗಲಿವೆ.
ಆರ್‌ಆರ್ ಬಲಿಷ್ಠವಾಗಿದ್ದು, ಐದನೇ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ತವಕದಲ್ಲಿದೆ. ಎಲ್ಎಸ್ಜಿ ಈ ಋತುವಿನಲ್ಲಿ ಸದ್ಯ ತೀವ್ರ ಹಿನ್ನಡೆಯಲ್ಲಿದೆ. ಅದು ಆರು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳನ್ನಷ್ಟೇ ಗೆದ್ದಿದೆ. ಇದರೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಐಡೆನ್ ಮಾರ್ಕ್ರಾಮ್ LSG ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಇವರು ಆರು ಇನ್ನಿಂಗ್ಸ್‌ನಿಂದ 27ರ ಸರಾಸರಿಯಲ್ಲಿ 160.39 ಸ್ಟ್ರೈಕ್ ರೇಟ್‌ನೊಂದಿಗೆ 162 ರನ್ ಗಳಿಸಿದ್ದಾರೆ. ಪ್ರಿನ್ಸ್ ಯಾದವ್ ಆರು ಪಂದ್ಯಗಳಿಂದ 11 ವಿಕೆಟ್ ಪಡೆದು ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದಾರೆ.
ಆರ್‌ಆರ್ ಪರ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇವರಿಬ್ಬರೂ ಕ್ರಮವಾಗಿ 152.73 ಮತ್ತು 236.53ರ ಸ್ಟ್ರೈಕ್ ರೇಟ್‌ನಲ್ಲಿ 223 ಮತ್ತು 246 ರನ್‌ಗಳನ್ನು ಬಾರಿಸಿದ್ದಾರೆ. ರವಿ ಬಿಷ್ಣೋಯ್ ಬೌಲಿಂಗ್‌ನಲ್ಲಿ ಸ್ಟಾರ್ ಪರ್ಫಾರ್ಮರ್ ಆಗಿದ್ದು, ಆರು ಇನ್ನಿಂಗ್ಸ್‌ನಿಂದ 10 ವಿಕೆಟ್ ಉರುಳಿಸಿದ್ದಾರೆ. ಹೀಗಾಗಿ, ಸ್ಫೋಟಕ ಆರಂಭಿಕ ಜೋಡಿ ಮತ್ತು ಸ್ಪಿನ್ನರ್ ತಂಡದ ಹಾಟ್ ಫೇವರಿಟ್ ಆಗಿದ್ದಾರೆ.
LSG vs RR, ಹೆಡ್-ಟು-ಹೆಡ್ ದಾಖಲೆ: ಎರಡೂ ತಂಡಗಳ ನಡುವಿನ ಪಂದ್ಯಗಳಲ್ಲಿ RR ಹೆಚ್ಚು ಪ್ರಾಬಲ್ಯ ತೋರಿದೆ. ಆರು ಪಂದ್ಯಗಳಲ್ಲಿ ಆರ್‌ಆರ್ ನಾಲ್ಕು ಪಂದ್ಯ ಗೆದ್ದಿದೆ. ಆದರೆ, ಎಲ್ಎಸ್ಜಿ ಕೇವಲ ಎರಡು ಪಂದ್ಯಗಳಲ್ಲಷ್ಟೇ ಮೇಲುಗೈ ಸಾಧಿಸಿದೆ. ಕಳೆದ ಋತುವಿನಲ್ಲಿ ಎರಡೂ ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದವು. ಎಲ್ಎಸ್ಜಿ ಎರಡು ರನ್‌ಗಳಿಂದ ಜಯಗಳಿಸಿತು. ಹೀಗಾಗಿ, ಹೆಡ್-ಟು-ಹೆಡ್ ದಾಖಲೆ ಆರ್‌ಆರ್ ಪರವಾಗಿದೆ.
ಪಿಚ್ ವರದಿ: ಈ ಸ್ಟೇಡಿಯಂನಲ್ಲಿ ಇದುವರೆಗೆ ಎರಡು ಪಂದ್ಯಗಳು ನಡೆದಿದ್ದು, ಎರಡೂ ಪಂದ್ಯಗಳು ಕಡಿಮೆ ಸ್ಕೋರ್ ಕಂಡಿವೆ. 26 ಟಿ20 ಪಂದ್ಯಗಳಲ್ಲಿ ಸರಾಸರಿ 173 ಮೊದಲ ಇನ್ನಿಂಗ್ಸ್ ಸ್ಕೋರ್ ದಾಖಲಾಗಿದೆ.
ಇನ್ನಿಂಗ್ಸ್ ಆರಂಭದಲ್ಲಿ ವೇಗಿಗಳು ಸ್ವಲ್ಪ ಸೀಮ್ ಮೂವ್ಮೆಂಟ್ ಪಡೆಯಬಹುದು. ಆದ್ದರಿಂದ ಜೋಫ್ರಾ ಆರ್ಚರ್ ಅಥವಾ ಪ್ರಿನ್ಸ್ ಯಾದವ್ ಇಬ್ಬರಲ್ಲಿ ಯಾರು ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.
LSG ಬೌಲರ್‌ಗಳು ಟೂರ್ನಿಯಲ್ಲಿ ಇದುವರೆಗೆ ಅತ್ಯುತ್ತಮ ಎಕಾನಮಿ ರೇಟ್ (8.77) ಮತ್ತು ಅತ್ಯಧಿಕ ಡಾಟ್ ಬಾಲ್ (ಶೇ.41.8) ಎಸೆದಿದ್ದಾರೆ.
ಇವುಗಳನ್ನೂ ಓದಿ:

