ETV Bharat / sports

ರಣಜಿ ಫೈನಲ್: ಕರ್ನಾಟಕಕ್ಕೆ ಮಯಾಂಕ್ ಶತಕದ ಆಸರೆ; 5 ವಿಕೆಟ್ ನಷ್ಟಕ್ಕೆ 220 ರನ್

ರಣಜಿ ಫೈನಲ್​ ಹಣಾಹಣಿಯಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಬೃಹತ್​ ಹಿನ್ನಡೆಯಲ್ಲಿರುವ ಕರ್ನಾಟಕಕ್ಕೆ ಮಯಾಂಕ್ ಅಗರ್ವಾಲ್ ಆಸರೆಯಾಗಿದ್ದಾರೆ.

karnataka-vs-jammu-and-kashmir-ranji-trophy-final-scorecard
ರಣಜಿ ಫೈನಲ್​ ಹಣಾಹಣಿ (ETV Bharat)
author img

By ETV Bharat Karnataka Team

Published : February 26, 2026 at 8:13 PM IST

2 Min Read
Choose ETV Bharat

ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್​​​ಸಿಎ ಮೈದಾನದಲ್ಲಿ ‌ನಡೆಯುತ್ತಿರುವ ರಣಜಿ ಟ್ರೋಫಿ 2025-26ರ ಫೈನಲ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್ ಅಜೇಯ ಶತಕದ ಮೂಲಕ​ ಆಸರೆಯಾಗಿದ್ದಾರೆ. ಆದರೂ ಸಹ ರಾಜ್ಯ ತಂಡದ ಎದುರು ಬೆಟ್ಟದಷ್ಟು ಸವಾಲಿದೆ.

ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕವು ಮೊದಲ ಇನ್ನಿಂಗ್ಸ್​ನಲ್ಲಿ 69 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದೆ. ಅಗರ್ವಾಲ್ 207 ಬಾಲ್​​ಗಳಿಗೆ 130 ರನ್ ಹಾಗೂ ಪ್ರಸಿದ್ಧ ಕೃಷ್ಣ 75 ಎಸೆತಗಳಲ್ಲಿ 27 ರನ್​ಗಳೊಂದಿಗೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ, ಮೂರನೇ ದಿನದಾಟದ ಆರಂಭದಲ್ಲಿ ಪ್ರವಾಸಿ ಜಮ್ಮು ಕಾಶ್ಮೀರ ತಂಡವು ಆಲೌಟ್​ ಆಗುವ ಮೂಲಕ ಪ್ರಥಮ ಇನ್ನಿಂಗ್ಸ್​ನಲ್ಲಿ 584 ರನ್​ಗಳ ಬೃಹತ್​ ಮೊತ್ತ ದಾಖಲಿಸಿತು. 6 ವಿಕೆಟ್​​ಗೆ 527 ರನ್​ಗಳಿಂದ ಬ್ಯಾಟಿಂಗ್​ ಮುಂದುವರೆಸಿದ ಕಣಿವೆ ನಾಡಿನ ತಂಡ, ಇನ್ನೂ 57 ರನ್ ಸೇರಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

ಬಳಿಕ ಬ್ಯಾಟಿಂಗ್​ ಆರಂಭಿಸಿದ ಕರ್ನಾಟಕ ಆರಂಭದಿಂದಲೂ ವೈಫಲ್ಯ ಅನುಭವಿಸಿತು. ಕೆ.ಎಲ್.ರಾಹುಲ್​ ಕೇವಲ 13 ರನ್​ಗಳಿಗೆ ಅಕಿಬ್ ನಬಿ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್ ಕನ್ನಯ್ಯ ವಾಧವನ್​ಗೆ ಕ್ಯಾಚ್ ನೀಡಿ ಹೊರ ನಡೆದರು. ಇದರಿಂದ ಭೋಜನ ವಿರಾಮಕ್ಕೂ ಮುನ್ನ ಕರ್ನಾಟಕ‌ 13 ಓವರ್ ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 35 ರನ್ ಕಲೆಹಾಕಿತ್ತು.

Karnataka vs Jammu and Kashmir Ranji Trophy Final Scorecard
ರಣಜಿ ಫೈನಲ್ ಹಣಾಹಣಿ (ETV Bharat)

ವಿರಾಮದ ನಂತರ ಕ್ರೀಸ್​ಗಿಳಿದ ನಾಯಕ ಆಟ ದೇವದತ್ತ ಪಡಿಕ್ಕಲ್ 11 ರನ್ ಗಳಿಸಿ ಔಟಾದರೆ, ಅವರ ಬೆನ್ನಲ್ಲೇ ಅನುಭವಿ ಕರುಣ್​ ನಾಯರ್​ ಹಾಗೂ ಸ್ಮರಣ್​ ರವಿಚಂದ್ರನ್​ ಇಬ್ಬರೂ ಶೂನ್ಯಕ್ಕೆ ವಿಕೆಟ್​ ಒಪ್ಪಿಸುವ ಮೂಲಕ ರಾಜ್ಯ ತಂಡ ಒತ್ತಡಕ್ಕೆ ಸಿಲುಕಿತು. ಕರುಣ್ ಅಕಿಬ್ ನಬಿ ಎಸೆತದಲ್ಲಿ ಕ್ಲೀನ್ ಬೌಲ್ಡಾದರೆ, ಸ್ಮರಣ್ ಕೂಡ ನಬಿ ಬೌಲಿಂಗ್​ನಲ್ಲೇ ಕನ್ಹಯ್ಯಗೆ ಕ್ಯಾಚ್ ನೀಡಿ ಪೆವಿಲಿಯನ್ ಪರೇಡ್ ನಡೆಸಿದರು. ಆಗ ತಂಡದ ಮೊತ್ತ 17.6 ಓವರ್​ಗಳಲ್ಲಿ 57 ರನ್ ಆಗಿತ್ತು.

ಬಳಿಕ, ಮಯಾಂಕ್​ ಅಗರ್ವಾಲ್​ ಜೊತೆಗೂಡಿದ ಸ್ಪಿನ್ನರ್​ ಶ್ರೇಯಸ್​ ಗೋಪಾಲ್ ಸಮಯೋಚಿತ ಆಟ ತೋರಿದರು.​ ಈ ಜೋಡಿ ಐದನೇ ವಿಕೆಟ್​​ಗೆ 105 ರನ್​ ಸೇರಿಸಿತು. ತಮ್ಮ ಅನುಭವದಂತೆ ಆಟ ಪ್ರದರ್ಶಿಸಿದ ಅಗರ್ವಾಲ್ ಭರ್ಜರಿ ಶತಕ (130*, 207 ಎಸೆತ) ದಾಖಲಿಸಿದರು. ಈ ಹಂತದಲ್ಲಿ 27 ರನ್​ ಗಳಿಸಿದ್ದ ಗೋಪಾಲ್​ ಯುದ್ವೀರ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ತದನಂತರ, ಕೃತಿಕ್​ ಕೃಷ್ಣ (27*) ಜೊತೆಗೂಡಿರುವ ಮಯಾಂಕ್​ 6ನೇ ವಿಕೆಟ್​ಗೆ 58 ರನ್​ ಸೇರಿಸಿ ನಾಲ್ಕನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ತಂಡವು ಇನ್ನೂ 364 ರನ್​ಗಳ ಭಾರಿ ಹಿನ್ನಡೆಯಲ್ಲಿದೆ.

ಇದನ್ನೂ ಓದಿ: ಕರ್ನಾಟಕ- ಜಮ್ಮು & ಕಾಶ್ಮೀರ ರಣಜಿ ಫೈನಲ್ ಡ್ರಾ ಆದ್ರೆ ಗೆಲ್ಲೋದು ಈ ತಂಡ! ಈ ಲೆಕ್ಕಾಚಾರ ಗೊತ್ತೇ?