ರಣಜಿ ಫೈನಲ್: 584 ರನ್ ಗಳಿಸಿದ ಜಮ್ಮು ಕಾಶ್ಮೀರ; ಸಂಕಷ್ಟದಲ್ಲಿ ಕರ್ನಾಟಕ ತಂಡ
ರಣಜಿ ಟ್ರೋಫಿ ಫೈನಲ್ನಲ್ಲಿ ಜಮ್ಮು ಕಾಶ್ಮೀರ ತಂಡ ಬೃಹತ್ ಮೊತ್ತ ದಾಖಲಿಸಿದ್ದು, ಕರ್ನಾಟಕ ತಂಡಕ್ಕೆ ಕಠಿಣ ಸವಾಲು ಎದುರಾಗಿದೆ.

Published : February 26, 2026 at 1:19 PM IST
ಹುಬ್ಬಳ್ಳಿ: ಇಲ್ಲಿನ ನೃಪತುಂಗ ಬೆಟ್ಟದ ತಪ್ಪಲಿನ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕದ ವಿರುದ್ಧ ಜಮ್ಮು ಕಾಶ್ಮೀರ ತಂಡ ಪ್ರಥಮ ಇನ್ನಿಂಗ್ಸ್ನಲ್ಲಿ 584 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಪ್ರತ್ಯುತ್ತರವಾಗಿ ಕರ್ನಾಟಕ ತಂಡವು 4 ವಿಕೆಟ್ ಕಳೆದುಕೊಂಡು 74 ರನ್ ಗಳಿಸಿ ಆಡುತ್ತಿದೆ.
ಪಂದ್ಯದ ಮೂರನೇ ದಿನವಾದ ಗುರುವಾರ ನಿನ್ನೆಯ ಮೊತ್ತಕ್ಕೆ 57 ರನ್ ಸೇರಿಸುವಷ್ಟರಲ್ಲಿ ಜಮ್ಮು ಕಾಶ್ಮೀರ ತಂಡ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. 2ನೇ ದಿನದ ಅಂತ್ಯಕ್ಕೆ ಜಮ್ಮು ಕಾಶ್ಮೀರವು 6 ವಿಕೆಟ್ಗೆ 527 ರನ್ ಪೇರಿಸಿತ್ತು. ಕರ್ನಾಟಕ ಪರ ವೇಗಿ ಪ್ರಸಿದ್ಧ ಕೃಷ್ಣ 98 ರನ್ ನೀಡಿ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಬಳಿಕ ಬ್ಯಾಟಿಂಗ್ ಆರಂಭಿಸಿರುವ ಕರ್ನಾಟಕ ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ ಕೇವಲ 13 ರನ್ ಗಳಿಸಿ ಆಕಿಬ್ ನಬಿ ಬೌಲಿಂಗ್ನಲ್ಲಿ ಕನ್ನಯ್ಯ ವಾಧವನ್ಗೆ ಕ್ಯಾಚ್ ನೀಡಿ ಹೊರನಡೆದರು. ಬಳಿಕ ನಾಯಕ ದೇವದತ್ತ ಪಡಿಕ್ಕಲ್ ಕೂಡ ಭೋಜನ ವಿರಾಮದ ಬಳಿಕ ಸುನಿಲ್ ಕುಮಾರ್ ಬೌಲಿಂಗ್ನಲ್ಲಿ 11 ರನ್ಗೆ ಔಟಾದರು. ತದನಂತರ ಕರುಣ್ ನಾಯರ್ ಹಾಗೂ ಸ್ಮರಣ್ ರವಿಚಂದ್ರನ್ ಇಬ್ಬರೂ ಸಹ ಖಾತೆ ತೆರೆಯದೇ ನಿರಾಸೆ ಮೂಡಿಸಿದ್ದು, ಅತಿಥೇಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಕರ್ನಾಟಕದ ಮುಂದೆ ಬೃಹತ್ ಮೊತ್ತ ಕಲೆಹಾಕುವ ಸವಾಲು ಎದುರಾಗಿದೆ.

ಜಮ್ಮು ಕಾಶ್ಮೀರ ಬ್ಯಾಟಿಂಗ್: ರಣಜಿ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ತಲುಪಿರುವ ಜಮ್ಮು ಕಾಶ್ಮೀರ ತಂಡದ ಬ್ಯಾಟರ್ಗಳು ಕರ್ನಾಟಕದ ಬೌಲಿಂಗ್ ಪಡೆಯನ್ನು ಇನ್ನಿಲ್ಲದೆ ಕಾಡಿದರು. ತಂಡದ ಪರ ಒಬ್ಬರು ಶತಕ ಹಾಗೂ ನಾಲ್ವರು ಬ್ಯಾಟರ್ಗಳು ಅರ್ಧಶತಕಗಳನ್ನು ಬಾರಿಸಿ ಮಿಂಚಿದರು. ಖಾಮ್ರನ್ ಇಕ್ಬಾಲ್ (6) ಹೊರತುಪಡಿಸಿ ಉಳಿದೆಲ್ಲಾ ಅಗ್ರಕ್ರಮಾಂಕದ ಬ್ಯಾಟರ್ಗಳು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಯಾವರ್ ಹಸ್ಸನ್ 88, ಶುಭಮ್ ಪುಂದಿರ್ 121, ನಾಯಕ ಪರಾಸ್ ದೋಗ್ರಾ 70, ಅಬ್ದುಲ್ ಸಮದ್ 61, ವಿಕೆಟ್ ಕೀಪರ್ ಬ್ಯಾಟರ್ ಕನ್ಹಯ್ಯ ವಾಧವಾನ್ 70 ಹಾಗೂ ಸಾಹಿಲ್ ಲೋಹ್ರಾ 72 ರನ್ ಬಾರಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಅಲ್ಲದೆ, ಬಾಲಂಗೋಚಿಗಳಾದ ಅಬಿದ್ ಮುಸ್ತಾಕ್ 28 ಹಾಗೂ ಯುದ್ವೀರ್ ಸಿಂಗ್ 30 ರನ್ ಗಳಿಸುವ ಮೂಲಕ ಕರ್ನಾಟಕದ ಬೌಲರ್ಗಳ ಬೆವರಿಳಿಸಿದರು. ಕರ್ನಾಟಕದ ಪರ ಪ್ರಸಿದ್ದ್ ಕೃಷ್ಣ 98 ರನ್ಗೆ 5 ವಿಕೆಟ್ ಪಡೆದರೆ, ವಿದ್ಯಾದರ್ ಪಾಟೀಲ್, ವಿಜಯ್ಕುಮಾರ್ ವೈಶಾಕ್, ಶ್ರೇಯಸ್ ಗೋಪಾಲ್, ಶಿಖರ್ ಶೆಟ್ಟಿ ತಲಾ ಒಂದು ವಿಕೆಟ್ ಕಿತ್ತರು.
ಪಂದ್ಯದಲ್ಲಿ ಇಂದೂ ಸೇರಿ ಇನ್ನೆರಡು ದಿನಗಳ ಆಟ ಬಾಕಿ ಇದೆ. ಒಂದು ವೇಳೆ, ಪಂದ್ಯ ಡ್ರಾ ಆಗಿ, 584 ರನ್ಗಳ ಬೃಹತ್ ಮೊತ್ತವನ್ನು ದಾಟುವಲ್ಲಿ ಕರ್ನಾಟಕವು ವಿಫಲವಾದರೆ, ಜಮ್ಮು ಕಾಶ್ಮೀರ ತಂಡವು ನಿಯಮದ ಪ್ರಕಾರ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಚಾಂಪಿಯನ್ ಆಗಿ ಹೊರಹೊಮ್ಮಲಿದೆ. ಹೀಗಾಗಿ, ಭಾರಿ ರನ್ ಬಿಟ್ಟುಕೊಟ್ಟಿರುವ ಕರ್ನಾಟಕ ತಂಡವು ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿದೆ.
ಇದನ್ನೂ ಓದಿ: ರಣಜಿ ಫೈನಲ್: ಜಮ್ಮು-ಕಾಶ್ಮೀರ ಬೃಹತ್ ಮೊತ್ತ; ಮಾತಿನ ಚಕಮಕಿ ವೇಳೆ ಕರ್ನಾಟಕದ ಫೀಲ್ಡರ್‌ಗೆ 'ಹೆಡ್‌ಬಟ್' ಮಾಡಿದ ಪರಾಸ್ ಡೋಗ್ರಾ

