ETV Bharat / sports

ರಣಜಿ ಫೈನಲ್: ಆಟಗಾರರನ್ನು ಹುರಿದುಂಬಿಸಿದ ಜಮ್ಮು ಕಾಶ್ಮೀರ ಸಿಎಂ ಓಮರ್​ ಅಬ್ದುಲ್ಲಾ

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಹಣಾಹಣಿ ವೀಕ್ಷಣೆಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆಗಮಿಸಿದ್ದಾರೆ.

karnataka-vs-jammu-and-kashmir-ranji-trophy-final-2025-26
ರಣಜಿ ಫೈನಲ್ ವೀಕ್ಷಿಸಿದ ಜಮ್ಮು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ (ETV Bharat)
author img

By ETV Bharat Karnataka Team

Published : February 28, 2026 at 1:07 PM IST

2 Min Read
Choose ETV Bharat

ಹುಬ್ಬಳ್ಳಿ: ಇಲ್ಲಿನ ರಾಜನಗರ ಕೆಎಸ್​​​ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2025-26ರ ಫೈನಲ್ ಪಂದ್ಯದ ವೀಕ್ಷಣೆಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆಗಮಿಸಿದ್ದಾರೆ.

ಶುಕ್ರವಾರ ಸಂಜೆ ಹುಬ್ಬಳ್ಳಿಗೆ ಆಗಮಿಸಿರುವ ಅವರು ಇಂದು ಬೆಳಗ್ಗೆ 10 ಗಂಟೆಗೆ ಮೈದಾನದಲ್ಲಿ ಕೊನೆಯ ದಿನದ ಆಟ ವೀಕ್ಷಿಸಿದರು. ಜಮ್ಮು ಕಾಶ್ಮೀರ ಆರಂಭಿಕ‌ ಬ್ಯಾಟರ್ ಕಮ್ರಾನ್ ಇಕ್ಬಾಲ್ ಶತಕ‌ ಗಳಿಸಿದಾಗ ಚಪ್ಪಾಳೆ ತಟ್ಟಿ‌ ಅಭಿನಂದಿಸಿದರು. ಸಿಎಂ ಆಗಮನದ ಹಿನ್ನೆಲೆಯಲ್ಲಿ ಮೈದಾನದಲ್ಲಿ ಪೊಲೀಸ್​​ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ.

ಪೈನಲ್​ನಲ್ಲಿ ಕರ್ನಾಟಕ ವಿರುದ್ಧದ ಪ್ರವಾಸಿ ತಂಡ ಜಮ್ಮು ಕಾಶ್ಮೀರ ಮೇಲುಗೈ ಸಾಧಿಸಿದ್ದು, ಐತಿಹಾಸಿಕ ರಣಜಿ ಟ್ರೋಫಿ ಗೆಲ್ಲುವ ಹೊಸ್ತಿಲಲ್ಲಿದೆ. ಜಮ್ಮು ಕಾಶ್ಮೀರ ತಂಡದ ಎರಡನೇ ಇನ್ನಿಂಗ್ಸ್ ಐದನೇ ದಿನವೂ ಮುಂದುವರೆದಿದ್ದು, 95 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 285 ರನ್ ಗಳಿಸಿದೆ. ಈ ಮೂಲಕ ಕರ್ನಾಟಕದ ವಿರುದ್ಧ 576 ರನ್​ಗಳ ಮುನ್ನಡೆ ಪಡೆದು ಆಟ ಮುಂದುವರೆಸಿದೆ. ಐದನೇ ದಿನ ಮೊದಲ ಅವಧಿಯಲ್ಲಿ ಕರ್ನಾಟಕಕ್ಕೆ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.

ನಾಲ್ಕನೇ ದಿನವಾದ ಶುಕ್ರವಾರ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಜಮ್ಮು ಕಾಶ್ಮೀರದ 584 ರನ್​ಗಳಿಗೆ ಪ್ರತ್ಯುತ್ತರವಾಗಿ, 93.3 ಓವರ್​ಗಳಲ್ಲಿ 293 ರನ್​ಗೆ ಆಲೌಟ್ ಆಯಿತು. ಈ ಮೂಲಕ 291 ರನ್​ಗಳ ಹಿನ್ನಡೆ ಅನುಭವಿಸಿತ್ತು.

ಕರ್ನಾಟಕದ ಪರ ಅನುಭವಿ ಮಯಾಂಕ್ ಅಗರವಾಲ್ ಹೊರತುಪಡಿಸಿ ಉಳಿದ ಬ್ಯಾಟರ್​ಗಳು ಹೋರಾಟ ತೋರುವಲ್ಲಿ ವಿಫಲರಾಗಿದ್ದರು. ನಾಲ್ಕನೇ ದಿನವೂ ಅಗರವಾಲ್ ಏಕಾಂಗಿ ಹೋರಾಟ ನಡೆಸಿದ್ದರು. ಕ್ರೀಸ್​​ನಲ್ಲಿ 443 ನಿಮಿಷ ನಿಂತಿದ್ದ ಅವರು 260 ಎಸೆತಗಳಲ್ಲಿ 160 ರನ್ ಗಳಿಸಿದ್ದಾಗ ನಬಿ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

291 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಜಮ್ಮು ಕಾಶ್ಮೀರ ತಂಡ, 4ನೇ ದಿನದ ಅಂತ್ಯಕ್ಕೆ ಜಮ್ಮು ಕಾಶ್ಮೀರ 57 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ, 477 ರನ್​ಗಳ ಮುನ್ನಡೆ ಸಾಧಿಸಿತ್ತು.

ಯಾವರ್​ ಹಸ್ಸನ್​ 4, ಶುಭಂ ಪುಂದಿರ್​ 4, ನಾಯಕ ಪರಾಸ್​ ದೋಗ್ರಾ 16 ಹಾಗೂ ಅಬ್ದುಲ್​ ಸಮದ್ 32 ರನ್​ಗಳಿಗೆ ಔಟಾಗಿದ್ದರು. ಕೊನೆಯ ದಿನ ಬ್ಯಾಟಿಂಗ್​ ಮುಂದುವರೆಸಿದ ಕಮ್ರಾನ್​ ಇಕ್ಬಾನ್​ ಭರ್ಜರಿ ಶತಕ (124) ಗಳಿಸಿ ಆಟವಾಡುತ್ತಿದ್ದಾರೆ. ಇವರಿಗೆ ಸಾಹಿಲ್​ ಲೋಹ್ರಾ (81*) ತಕ್ಕ ಸಾಥ್​ ನೀಡಿದ್ದು, ಶತಕದ ಸನಿಹದಲ್ಲಿದ್ದಾರೆ. ಕರ್ನಾಟಕದ ಪರ ಪ್ರಸಿದ್ಧ್​ ಕೃಷ್ಣ 2 ಹಾಗೂ ವಿಜಯಕುಮಾರ್​ ವೈಶಾಖ್​ ಮತ್ತು ಶ್ರೇಯಸ್​ ಗೋಪಾಲ್​ ತಲಾ ಒಂದು ವಿಕೆಟ್​ ಪಡೆದಿದ್ದಾರೆ.

ಪಂದ್ಯವು ಡ್ರಾದಲ್ಲಿ ಕೊನೆಗೊಳ್ಳಲಿದ್ದು, ಮೊದಲ ಇನ್ನಿಂಗ್​ಸ್​ ಮುನ್ನಡೆ ಆಧಾರದ ಮೇಲೆ ಜಮ್ಮು ಕಾಶ್ಮೀರ ತಂಡವು ಚಾಂಪಿಯನ್​ ಪಟ್ಟ ಅಲಂಕರಿಸಲಿದೆ. ಇದರೊಂದಿಗೆ ಕಣಿವೆನಾಡಿನ ತಂಡವು ಚೊಚ್ಚಲ ಬಾರಿಗೆ ರಣಜಿ ಕಪ್​ ಎತ್ತಿ ಹಿಡಿಯಲಿದೆ.

ಇದನ್ನೂ ಓದಿ: ಲಿವರ್​ ಕ್ಯಾನ್ಸರ್​ನಿಂದ ತಂದೆ ನಿಧನ, ಶೋಕದಲ್ಲಿ ಮುಳುಗಿದ ಕುಟುಂಬ: ನೋವಿನಲ್ಲೇ ಮೈದಾನಕ್ಕಿಳಿದಿದ್ದ ರಿಂಕು ಸಿಂಗ್​