ರಣಜಿ ಫೈನಲ್: ಕರ್ನಾಟಕ 293ಕ್ಕೆ ಆಲೌಟ್: ಬಿಗಿಹಿಡಿತ ಸಾಧಿಸಿದ ಜಮ್ಮು ಕಾಶ್ಮೀರ
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 293 ರನ್ಗಳಿಗೆ ಆಲೌಟ್ ಆಯಿತು.

Published : February 27, 2026 at 2:22 PM IST
ಹುಬ್ಬಳ್ಳಿ: ಇಲ್ಲಿನ ನೃಪತುಂಗ ಬೆಟ್ಟದ ತಪ್ಪಲಿನ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧ ರಾಜ್ಯ ತಂಡವು ತೀವ್ರ ಹಿನ್ನಡೆಯಲ್ಲಿದೆ.
ನಾಲ್ಕನೇ ದಿನವಾದ ಶುಕ್ರವಾರ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಜಮ್ಮು ಕಾಶ್ಮೀರದ 584 ರನ್ಗಳಿಗೆ ಪ್ರತ್ಯುತ್ತರವಾಗಿ, 93.3 ಓವರ್ಗಳಲ್ಲಿ 293 ರನ್ಗೆ ಆಲೌಟ್ ಆಯಿತು. ಈ ಮೂಲಕ 291 ರನ್ಗಳ ಹಿನ್ನಡೆ ಅನುಭವಿಸಿತು. ಮೊದಲ ಬಾರಿಗೆ ರಣಜಿ ಫೈನಲ್ ತಲುಪಿರುವ ಕಣಿವೆನಾಡಿನ ತಂಡ ಮೇಲುಗೈ ಸಾಧಿಸಿದೆ.
ಮಯಾಂಕ್ 160 ರನ್: ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದ್ದ ಕರ್ನಾಟಕ ಶುಕ್ರವಾರ ಹೆಚ್ಚಿನ ಪ್ರತಿರೋಧವೊಡ್ಡಲಿಲ್ಲ. ಮೊದಲ ಅವಧಿಯಲ್ಲೇ 73 ರನ್ಗೆ ಇನ್ನುಳಿದ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ಮಯಾಂಕ್ ಅಗರವಾಲ್ ಹಾಗೂ 27 ರನ್ ಬಾರಿಸಿದ್ದ ಕೃತಿಕ್ ಕೃಷ್ಣ ಇಂದು ಬ್ಯಾಟಿಂಗ್ ಮುಂದುವರೆಸಿದರು. ಕೆಲ ಹೊತ್ತಲ್ಲೇ, ಕೃತಿಕ್ ಕೃಷ್ಣ (36) ಹಾಗೂ ಅವರ ಬೆನ್ನಲ್ಲೇ ವಿದ್ಯಾಧರ ಪಾಟೀಲ (11) ಔಟಾದರು. ಇನ್ನೊಂದೆಡೆ, ನಾಲ್ಕನೇ ದಿನವೂ ಅಗರವಾಲ್ ಏಕಾಂಗಿ ಹೋರಾಟ ಮುಂದುವರೆಸಿದರು. ಕ್ರೀಸ್ನಲ್ಲಿ 443 ನಿಮಿಷ ನಿಂತಿದ್ದ ಅವರು 260 ಎಸೆತಗಳಲ್ಲಿ 160 ರನ್ ಗಳಿಸಿದ್ದಾಗ ನಬಿ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
1️⃣6️⃣0️⃣ Runs
— BCCI Domestic (@BCCIdomestic) February 27, 2026
2️⃣6️⃣6️⃣ Balls
1️⃣ Incredible Fight 👏
A marathon effort from Mayank Agarawal for Karnataka! 💯
Updates ▶️ https://t.co/G0ytZLEyNB#RanjiTrophy | @IDFCFIRSTBank pic.twitter.com/gviXHarBM3
ಇದಾದ ಬಳಿಕ, ಶಿಖರ್ ಶೆಟ್ಟಿ 0 ಹಾಗೂ ಪ್ರಸಿದ್ಧ್ ಕೃಷ್ಣ 4 ರನ್ಗೆ ಔಟಾಗುವ ಮೂಲಕ ಕರ್ನಾಟಕ ಎಲ್ಲಾ ವಿಕೆಟ್ ಕಳೆದುಕೊಂಡಿತು. ವಿಜಯ್ಕುಮಾರ್ ವೈಶಾಖ್ ಅಜೇಯ 17 ರನ್ ಗಳಿಸಿದರು.
291 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಜಮ್ಮು ಕಾಶ್ಮೀರ ತಂಡ, 19 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದೆ. ಯಾವರ್ ಹಸನ್ ಹಾಗೂ ಶುಭಂ ಕುಂದಿರ್ ವಿಕೆಟ್ ಒಪ್ಪಿಸಿದ್ದಾರೆ. ಪ್ರಸಿದ್ಧ್ ಕೃಷ್ಣ ಬೌಲಿಂಗ್ನಲ್ಲಿ ಯಾವರ್ ಹಸನ್ ಕ್ಲಿನ್ ಬೌಲ್ಡ್ ಆದರೆ , ಶುಭಂ ಕುಂದಿರ್ ವೈಶಾಖ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದರು.
The fightback is 🔛
— BCCI Domestic (@BCCIdomestic) February 27, 2026
Prasidh Krishna and Vijaykumar Vyshak strike twice for Karnataka at the stroke of Lunch 👊
Updates ▶️ https://t.co/G0ytZLEyNB#ranjiTrophy | @IDFCFIRSTBank pic.twitter.com/VMHJ47md42
ದಾಖಲೆ ಬರೆದ ನಬಿ: ಜಮ್ಮು ಕಾಶ್ಮೀರದ ವೇಗದ ಬೌಲರ್ 29 ವಯಸ್ಸಿನ ಅಕೀಬ್ ನಬಿ ಟೂರ್ನಿಯ ಫೈನಲ್ ಪಂದ್ಯದಲ್ಲಿ 5 ವಿಕೆಟ್ ಪಡೆದು ಸಂಭ್ರಮಿಸಿದರು. ಪ್ರಸ್ತುತ ರಣಜಿ ಟ್ರೋಫಿ ಟೂರ್ನಿಯಲ್ಲಿ 7ನೇ ಬಾರಿ ಐದು ವಿಕೆಟ್ ಪಡೆದ ಕೀರ್ತಿಗೆ ಅವರು ಪಾತ್ರರಾದರು.
ಇದನ್ನೂ ಓದಿ: ಟಿ-20 ವಿಶ್ವಕಪ್ 2026: ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ಹೇಗಿದೆ?: ಭಾರತ ಸೇರಿದಂತೆ ಯಾರಿಗೆಲ್ಲ ಸೆಮಿಫೈನಲ್ ಹಾದಿ ಸುಗಮ?

