ರಣಜಿ ಫೈನಲ್: ಕರ್ನಾಟಕ ವಿರುದ್ಧ ಇತಿಹಾಸ ಬರೆದ ಜಮ್ಮು ಕಾಶ್ಮೀರಕ್ಕೆ ಚೊಚ್ಚಲ ಪ್ರಶಸ್ತಿ
ಜಮ್ಮು ಕಾಶ್ಮೀರ ತಂಡವು 2025-26ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Published : February 28, 2026 at 3:44 PM IST
ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ 2025-26ರ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮೇಲುಗೈ ಸಾಧಿಸಿದ ಜಮ್ಮು ಮತ್ತು ಕಾಶ್ಮೀರ ತಂಡವು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದ ಜಮ್ಮು ಕಾಶ್ಮೀರ ತಂಡ ಬ್ಯಾಟಿಂಗ್ ನಡೆಸಿ, ಮೊದಲ ಇನ್ನಿಂಗ್ಸ್ನಲ್ಲಿ 584 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಇದಕ್ಕುತ್ತರವಾಗಿ ಕರ್ನಾಟಕವು 293 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ 291 ರನ್ಗಳ ಹಿನ್ನಡೆ ಅನುಭವಿಸಿತ್ತು.
ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಮ್ಮು ಕಾಶ್ಮೀರ ಮತ್ತೊಮ್ಮೆ ಕರ್ನಾಟಕದ ಮೇಲೆ ಸವಾರಿ ಮಾಡಿತು. ಪಂದ್ಯದ ಕೊನೇಯ ದಿನವಾದ ಇಂದು ಕಣಿವೆನಾಡಿನ ತಂಡ 4 ವಿಕೆಟ್ಗೆ 342 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಉಭಯ ತಂಡಗಳು ಡ್ರಾ ಮಾಡಿಕೊಳ್ಳಲು ಒಪ್ಪಿದವು. ಕೊನೆಯ ದಿನ ಕರ್ನಾಟಕದ ಬೌಲರ್ಗಳು ಯಾವುದೇ ವಿಕೆಟ್ ಪಡೆಯುವಲ್ಲಿ ವಿಫಲರಾದರು.
𝐇𝐈𝐒𝐓𝐎𝐑𝐘 𝐅𝐎𝐑 𝐉𝐀𝐌𝐌𝐔 & 𝐊𝐀𝐒𝐇𝐌𝐈𝐑! 🏆
— BCCI Domestic (@BCCIdomestic) February 28, 2026
🎥 An outpouring of pure, unadulterated emotion as J&K conquer the summit to claim their first-ever #RanjiTrophy crown 🫡
Scorecard ▶️ https://t.co/G0ytZLEyNB@IDFCFIRSTBank pic.twitter.com/XRyia1coda

ಪ್ರಥಮ ಇನ್ನಿಂಗ್ಸ್ನ ಮುನ್ನಡೆ ಆಧಾರದ ಮೇಲೆ ಜಮ್ಮು ಕಾಶ್ಮೀರ ತಂಡವು ಮೊದಲ ಬಾರಿಗೆ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಪ್ರಶಸ್ತಿ ಜಯಿಸುತ್ತಿದ್ದಂತೆ ತಂಡದ ಆಟಗಾರರು ಮೈದಾನಕ್ಕೆ ಓಡಿ ಬಂದು ಸಂಭ್ರಮಾಚರಣೆ ಮಾಡಿದರು. ಅಂತಿಮ ದಿನದಾಟ ವೀಕ್ಷಿಸಲು ಜಮ್ಮು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಕೂಡ ಆಗಮಿಸಿದ್ದು ವಿಶೇಷವಾಗಿತ್ತು. ಅವರು ಆಟಗಾರರಿಗೆ ಹುರಿದುಂಬಿಸಿ ಸಂಭ್ರಮಿಸಿದರು.

ಜಮ್ಮು ಕಾಶ್ಮೀರ ಪ್ರಥಮ ಇನ್ನಿಂಗ್ಸ್: 584/10; ಯಾವರ್ ಹಸ್ಸನ್ 88 ರನ್, ಶುಭಂ ಪುಂದಿರ್ 121, ನಾಯಕ ಪರಾಸ್ ದೋಗ್ರಾ 70, ಅಬ್ದುಲ್ ಸಮದ್ 61, ಕನ್ಹಯ್ಯ ವಾಧವನ್ 70, ಸಾಹಿಲ್ ಲೊಟ್ರಾ 72; ಪ್ರಸಿದ್ಧ್ ಕೃಷ್ಣ 98ಕ್ಕೆ 5, ವಿದ್ಯಾಧರ್ ಪಾಟೀಲ್ 116ಕ್ಕೆ 1, ಶ್ರೇಯಸ್ ಗೋಪಾಲ್ 139ಕ್ಕೆ 1, ವೈಶಾಖ್ 75ಕ್ಕೆ 1 ಹಾಗೂ ಶಿಖರ್ ಶೆಟ್ಟಿ 125ಕ್ಕೆ 1 ವಿಕೆಟ್

ಕರ್ನಾಟಕ ಪ್ರಥಮ ಇನ್ನಿಂಗ್ಸ್: 293/10; ಕೆ.ಎಲ್.ರಾಹುಲ್ 13, ಮಯಾಂಕ್ ಅಗರ್ವಾಲ್ 160, ಶ್ರೇಯಸ್ ಗೊಪಾಲ್ 27, ಕೃತಿಕ್ ಕೃಷ್ಣ 36 ರನ್; ಆಕಿಬ್ ನಬಿ ದರ್ 54ಕ್ಕೆ 5, ಸುನಿಲ್ ಕುಮಾರ್ 51ಕ್ಕೆ 2, ಯದ್ವೀರ್ ಸಿಂಗ್ ಚರಕ್ 55ಕ್ಕೆ 2 ಹಾಗೂ ಸಾಹಿಲ್ ಲೊಟ್ರಾ 50ಕ್ಕೆ 1 ವಿಕೆಟ್

ಜಮ್ಮು ಕಾಶ್ಮೀರ ದ್ವಿತೀಯ ಇನ್ನಿಂಗ್ಸ್: 342/4 ಡಿಕ್ಲೇರ್; ಕಮ್ರಾನ್ ಇಕ್ಬಾಲ್ 160*, ಪರಾಸ್ ದೋಗ್ರಾ 16, ಅಬ್ದುಲ್ ಸಮದ್ 32, ಸಾಹಿಲ್ ಲೊಟ್ರಾ 101*; ಪ್ರಸಿದ್ಧ್ ಕೃಷ್ಣ 42ಕ್ಕೆ 1, ವಿಜಯಕುಮಾರ್ ವೈಶಾಖ್ 30ಕ್ಕೆ 1 ಹಾಗೂ ಶ್ರೇಯಸ್ ಗೋಪಾಲ್ 84ಕ್ಕೆ 1 ವಿಕೆಟ್

ಪಂದ್ಯದ ಆಟಗಾರ: ಶುಭಂ ಪುಂದಿರ್
ಟೂರ್ನಿಯ ಆಟಗಾರ: ಆಕಿಬ್ ನಬಿ ದರ್
ಇದನ್ನೂ ಓದಿ: ರಣಜಿ ಫೈನಲ್: ಆಟಗಾರರನ್ನು ಹುರಿದುಂಬಿಸಿದ ಜಮ್ಮು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ

