ETV Bharat / sports

ಪ್ರಿಯಾಂಶ್​, ಕಾನೊಲಿ ಅಬ್ಬರಕ್ಕೆ ಬೆಚ್ಚಿಬಿದ್ದ ಜೈಂಟ್ಸ್​: ಪಂಜಾಬ್​ ಕಿಂಗ್ಸ್ ಗೆಲುವಿನ ನಾಗಾಲೋಟ​

ಟಾಸ್​ ಗೆದ್ದು ಪಂಜಾಬ್​ ಕಿಂಗ್ಸ್​ ತಂಡಕ್ಕೆ ಬ್ಯಾಟಿಂಗ್​ ನೀಡಿದ ಲಕ್ನೋ ಸೂಪರ್​ ಜೈಂಟ್ಸ್ ತಂಡ ಮತ್ತೊಂದು ಸೋಲು ಕಂಡಿದೆ.

IPL 2026 Punjab Kings vs Lucknow Super Giants Match
ಪಂಜಾಬ್​ ಕಿಂಗ್ಸ್​ ತಂಡ (IANS)
author img

By ETV Bharat Karnataka Team

Published : April 20, 2026 at 9:12 AM IST

2 Min Read
Choose ETV Bharat

ಚಂಡೀಗಡ: ಈ ಬಾರಿಯ ಐಪಿಎಲ್​​ನಲ್ಲಿ ಅಜೇಯ ಗೆಲುವಿನ ಓಟ ಮುಂದುವರೆಸಿರುವ ಪಂಜಾಬ್​ ಕಿಂಗ್ಸ್​ ತಂಡ, ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ 54 ರನ್​​​​ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಪಾರಮ್ಯ ಮುಂದುವರೆಸಿದೆ.

ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೋ ತಂಡ ಪಂಜಾಬ್​ಗೆ ಮೊದಲು ಬ್ಯಾಟಿಂಗ್​​ಗೆ ಆಹ್ವಾನಿಸಿತು. ಆಟ ಆರಂಭಿಸಿದ ಕಿಂಗ್ಸ್​ಗೆ ಪ್ರಬಸಿಮ್ರಾನ್​ ಸಿಂಗ್​ ಶೂನ್ಯಕ್ಕೆ ಔಟಾಗುವ ಮೂಲಕ ಆಘಾತ ಎದುರಾಯಿತು. ಆದರೆ ಎರಡನೇ ವಿಕೆಟ್​​​ಗೆ ಜೊತೆಯಾದ ಯುವ ಬ್ಯಾಟರ್​ಗಳಾದ ಪ್ರಿಯಾಂಶ್​ ಆರ್ಯ (93, 37 ಬಾಲ್​) ಹಾಗೂ ಕೂಪರ್​ ಕಾನೊಲಿ (87, 46 ಎಸೆತ) ಭರ್ಜರಿ 184 ರನ್​​ಗಳ ಜೊತೆಯಾಟವಾಡುವ ಮೂಲಕ ಜೈಂಟ್ಸ್​ ಬೌಲರ್​​​ಗಳನ್ನು ಚೆಂಡಾಡಿದರು.

ಈ ಹಂತದಲ್ಲಿ ಕಾನೊಲಿ ಔಟಾದರೆ, ಅವರ ಬೆನ್ನಲ್ಲೇ ಶತಕದ ಹೊಸ್ತಿಲಲ್ಲಿದ್ದ ಪ್ರಿಯಾಂಶ್​​ 93 ರನ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ನಾಯಕ ಅಯ್ಯರ್​ ಕೂಡ ಕೇವಲ 5 ರನ್​ಗೆ ಪೆವಿಲಿಯನ್​ಗೆ ಮರಳಿದರು. ಕೊನೆಯ ಓವರ್​ಗಳಲ್ಲಿ ಸ್ಟೊಯ್ನಿಸ್​ 29 (16 ಎಸೆತ), ನೆಹಾಲ್​ ವಧೇರಾ (13) ಹಾಗೂ ಶಶಾಂಕ್​ ಸಿಂಗ್​ (17) ಅವರ ಬಿರುಸಿನ ಬ್ಯಾಟಿಂಗ್​ ನೆರವಿನಿಂದ ಕಿಂಗ್ಸ್​ 7 ವಿಕೆಟ್​​ಗಳಿಗೆ 254 ರನ್​​ ಬಾರಿಸಿತು. ಇದು ಈ ಋತುವಿನ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ ಆರ್​ಸಿಬಿ 250 ರನ್​ ಗಳಿಸಿರುವುದು ಅತ್ಯಧಿಕ ಸ್ಕೋರ್​ ಆಗಿತ್ತು. ಲಕ್ನೋ ಪರ ಮೊಹಮದ್ ಶಮಿ ಸೇರಿದಂತೆ ಎಲ್ಲಾ ಬೌಲರ್​ಗಳು ದುಬಾರಿಯಾದರೂ ಸಹ, ವೇಗಿ ಪ್ರಿನ್ಸ್​ ಯಾದವ್​ 4 ಓವರ್​ಗಳಲ್ಲಿ ಕೇವಲ 25 ರನ್​ ನೀಡಿ 2 ವಿಕೆಟ್​ ಕಬಳಿಸಿ ಮಿಂಚಿದರು.

ಜೈಂಟ್ಸ್ ಬ್ಯಾಟಿಂಗ್​: 255 ರನ್​ ಗುರಿ ಬೆನ್ನಟ್ಟಿದ ಜೈಂಟ್ಸ್​​​ ಉತ್ತಮ ಆರಂಭ ಪಡೆಯಿತು. ಪವರ್​ ಪ್ಲೇ ಅಂತ್ಯದಲ್ಲಿ 35 ಗಳಿಸಿದ್ದ ಆಯುಶ್​ ಬದೋನಿ ಮೊದಲ ವಿಕೆಟ್​ ರೂಪದಲ್ಲಿ ಪೆವಿಲಿಯನ್ ಸೇರಿದರು. ಈ ವೇಳೆ ತಂಡದ ಮೊತ್ತ 61 ರನ್​ಗಳಾಗಿತ್ತು. ಬಳಿಕ ನಾಯಕ್ ರಿಷಭ್​​ ಪಂತ್ (43)​ ಜೊತೆಗೂಡಿದ ಮಿಚಲ್​​ ಮಾರ್ಷ್ ​(40) ಕೊಂಚ ಭರವಸೆ ಮೂಡಿಸಿದರೂ ಸಹ ಅದು ಸಾಕಾಗಲಿಲ್ಲ. ಚಹಲ್​ ಬೌಲಿಂಗ್​ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಮಾರ್ಷ್​ ಬ್ರೆಟ್ಲೆಟ್​​ಗೆ ಕ್ಯಾಚ್​ ನೀಡಿ ಹೊರನಡೆದರು.

ನಂತರ, ಪಂತ್​ ಕೂಡ 43 ರನ್​ಗೆ ಔಟಾದರು. ಈ ಬಾರಿ ಸಂಪೂರ್ಣ ವಿಫಲರಾಗಿರುವ ಪೂರನ್​ (9) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಮಾರ್ಕ್ರಮ್​​ 42 ಹಾಗೂ ಮುಕುಲ್​ ಚೌದರಿ ಅಜೇಯ 21 ರನ್​ ಬಾರಿಸಿ ಕೊಂಚ ಹೋರಾಟ ಪ್ರದರ್ಶಿಸಿದರು. ಅಂತಿಮವಾಗಿ 20 ಓವರ್​​ಗಳಲ್ಲಿ 200 ರನ್ ಮಾತ್ರ​ ಗಳಿಸಿದ ಜೈಂಟ್ಸ್,​ ಟೂರ್ನಿಯ 6 ಪಂದ್ಯಗಳಲ್ಲಿ ನಾಲ್ಕು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಾರಿದೆ. ಪ್ರಿಯಾಂಶ್​ ಆರ್ಯ ಪಂದ್ಯದ ಆಟಗಾರ ಪ್ರಶಸ್ತಿಗೆ ಪಾತ್ರರಾದರು.

ಇದನ್ನೂ ಓದಿ: ರಾಜಸ್ಥಾನ ಮಣಿಸಿ ಕೊನೆಗೂ ಗೆಲುವಿನ ಖಾತೆ ತೆರೆದ ಕೆಕೆಆರ್​!!