2027ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ಆತಿಥ್ಯ; ಟೂರ್ನಿಗಾಗಿ ಅಹಮದಾಬಾದ್ಗೆ ಬರಲಿದೆಯಾ ಪಾಕ್?
ಮುಂದಿನ ವರ್ಷ ನಡೆಯಲಿರುವ ಚೊಚ್ಚಲ ಆವೃತ್ತಿಯ ಮಹಿಳಾ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಭಾರತ ಆಥಿತ್ಯ ವಹಿಸಿಕೊಳ್ಳಲಿದೆ ಎಂದು ಐಸಿಸಿ ಘೋಷಣೆ ಮಾಡಿದೆ.


Published : September 3, 2026 at 10:26 AM IST
ಚೊಚ್ಚಲ ಆವೃತ್ತಿಯ ಮಹಿಳಾ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಭಾರತ ಆಥಿತ್ಯ ವಹಿಸಿಕೊಳ್ಳಲಿದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಬುಧವಾರ ಘೋಷಣೆ ಮಾಡಿದೆ. ಆರು ತಂಡಗಳನ್ನು ಒಳಗೊಂಡ ಪಂದ್ಯಾವಳಿಯು ಮುಂದಿನ ವರ್ಷ ಫೆಬ್ರವರಿ 14 ರಿಂದ 28ರವರೆಗೆ ಮುಂಬೈ ಮತ್ತು ವಡೋದರಾದಲ್ಲಿ ನಡೆಯಲಿದೆ.
ಶ್ರೀಲಂಕಾದಿಂದ ಕೈತಪ್ಪಿದ ಆತಿಥ್ಯ
ಆದಾಗ್ಯೂ ಮೊದಲಿಗೆ ಈ ಟಿ20 ಪಂದ್ಯಾವಳಿಯ ಆತಿಥ್ಯದ ಹಕ್ಕುಗಳನ್ನು ಶ್ರೀಲಂಕಾಕ್ಕೆ ನೀಡಲಾಗಿತ್ತು. ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪವಿದೆ ಎಂದು ತಿಳಿದ ಕೂಡಲೇ ಐಸಿಸಿ ಆಗಸ್ಟ್ 30 ರಂದು ಶ್ರೀಲಂಕಾದ ಆತಿಥ್ಯ ಹಕ್ಕುಗಳನ್ನು ರದ್ದುಗೊಳಿಸಿತು. ಶ್ರೀಲಂಕಾ ಆತಿಥೇಯ ಹಕ್ಕುಗಳನ್ನು ಕಳೆದುಕೊಂಡ ನಂತರ ಬಾಂಗ್ಲಾದೇಶ, ಭಾರತ ಮತ್ತು ದಕ್ಷಿಣ ಆಫ್ರಿಕಾಗಳು ಪಂದ್ಯಾವಳಿಯನ್ನು ಆಯೋಜಿಸಲು ಅರ್ಜಿ ಸಲ್ಲಿಸಿದ್ದವು. ಆದರೆ ಸ್ಥಾಪಿತ ಮಾನದಂಡಗಳ ಆಧಾರದ ಮೇಲೆ ಐಸಿಸಿ ಭಾರತದ ಪ್ರಸ್ತಾವನೆಯನ್ನು ಅನುಮೋದಿಸಿತು.
ICYMI the venues and dates of the inaugural ICC Women's Champions Trophy have been confirmed 📝
— ICC (@ICC) September 3, 2026
Details 👇https://t.co/QrY2iyDwyU
ಜಯ್ ಶಾ ಹೇಳಿದ್ದೇನು?
ಐಸಿಸಿ ಅಧ್ಯಕ್ಷ ಜಯ್ ಶಾ ಚಾಂಪಿಯನ್ಸ್ ಟ್ರೋಫಿಯನ್ನು ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಎಂದು ಬಣ್ಣಿಸಿದ್ದಾರೆ. "ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ 2027 ಮಹಿಳಾ ಕ್ರಿಕೆಟ್‌ಗೆ ರೋಮಾಂಚಕಾರಿ ಮತ್ತು ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಇದು ಮೊದಲ ಸೀಸನ್ ಆಗಿದ್ದು, ಇದರಲ್ಲಿ ವಿಶ್ವದ ಅತ್ಯುತ್ತಮ ತಂಡಗಳು ಕಠಿಣ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಜೊತೆಗೆ ಅಂತರಾಷ್ಟ್ರೀಯ ಶ್ರೇಯಾಂಕಗಳನ್ನು ಸುಧಾರಿಸಲು ಮತ್ತು ಜಾಗತಿಕ ವೇದಿಕೆಯಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇತರ ತಂಡಗಳ ಸ್ಪರ್ಧೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಭಾರತ ಪ್ರವಾಸ ಮಾಡಲಿದೆಯೇ?
ಭಾರತ ಆಯೋಜಿಸಿರುವ ಈ ಪಂದ್ಯಾವಳಿಗೆ ಪಾಕಿಸ್ತಾನ ತಂಡ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಆದ್ದರಿಂದ ಪಾಕ್ ಟೂರ್ನಿಯಲ್ಲಿ ಭಾಗಿಯಾಗುತ್ತಿಲ್ಲ. ಪಾಕಿಸ್ತಾನ ಮಹಿಳಾ ತಂಡವು ಪಂದ್ಯಾವಳಿಗೆ ಅರ್ಹತೆ ಪಡೆದಿದ್ದರೆ, ಉಭಯ ತಂಡಗಳ ನಡುವಿನ ಪಂದ್ಯ ತಟಸ್ಥ ಸ್ಥಳದಲ್ಲಿ ಆಯೋಜಿಸಬೇಕಾಗುತಿತ್ತು. ಕಳೆದ ಸುಮಾರು ವರ್ಷಗಳಿಂದಲೂ ಭಾರತ ಮತ್ತು ಪಾಕಿಸ್ತಾನ ತಟಸ್ಥ ಸ್ಥಳಗಳಲ್ಲಿ ಪರಸ್ಪರ ಆಡುತ್ತವೆ. ಈಗ ಪಾಕಿಸ್ತಾನ ಭಾಗವಹಿಸುತ್ತಿಲ್ಲವಾದ್ದರಿಂದ, ಇಡೀ ಪಂದ್ಯಾವಳಿಯನ್ನು ಭಾರತದಲ್ಲಿಯೇ ಆಡಲಾಗುತ್ತದೆ.
ಪಂದ್ಯಾವಳಿಯಲ್ಲಿ ಎಷ್ಟು ತಂಡಗಳು ಕಣಕ್ಕಿಳಿಯಲಿವೆ?
ಈ ಪಂದ್ಯಾವಳಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಕಣಕ್ಕಿಳಿಯಲಿವೆ. ಜುಲೈ 6ರ ಕಟ್-ಆಫ್ ದಿನಾಂಕದ ಪ್ರಕಾರ ಐಸಿಸಿ ಮಹಿಳಾ ಟಿ20 ಅಂತರಾಷ್ಟ್ರೀಯ ಶ್ರೇಯಾಂಕದ ಆಧಾರದ ಮೇಲೆ ಈ ತಂಡಗಳು ಅರ್ಹತೆ ಪಡೆದುಕೊಂಡಿವೆ. ಏತನ್ಮಧ್ಯೆ ಕಳೆದ ವರ್ಷ ಭಾರತ ಮಹಿಳಾ ಏಕದಿನ ವಿಶ್ವಕಪ್ಗೂ ಆತಿಥ್ಯ ವಹಿಸಿಕೊಂಡಿತ್ತು ಮತ್ತು ಭಾರತ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದೀಗ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿಕೊಳ್ಳುತ್ತಿದ್ದು ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: ದುಲೀಪ್ ಟ್ರೋಫಿ; ವೈಭವ್ ಅರ್ಧಶತಕ ಮಿಸ್; ಪೂರ್ವ ವಲಯ ತಂಡ ಫೈನಲ್ಗೆ ಎಂಟ್ರಿ!!

