ETV Bharat / sports

ಮಹಿಳಾ ಏಷ್ಯಾಕಪ್​ 2026: ಥಾಯ್ಲೆಂಡ್​ ವಿರುದ್ಧ ಭಾರತಕ್ಕೆ 94 ರನ್​ಗಳ ಜಯ!!

ಮಹಿಳಾ ಏಷ್ಯಾಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್​ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ಶುಭಾರಂಭ ಮಾಡಿದೆ.

ಭಾರತ ತಂಡ
ಭಾರತ ತಂಡ (IANS)
author img

By ETV Bharat Sports Team

Published : August 31, 2026 at 9:23 AM IST

3 Min Read
Choose ETV Bharat

ಮಹಿಳಾ ಏಷ್ಯಾಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್​ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 159 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ, ಥಾಯ್ಲೆಂಡ್​ 16.1 ಓವರ್‌ಗಳಲ್ಲಿ 65 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 94 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಭಾರತದ ಪರವಾಗಿ ಶೆಫಾಲಿ ವರ್ಮಾ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರೆ, ನಂದಿನಿ ಶರ್ಮಾ ಮತ್ತು ದೀಪ್ತಿ ಶರ್ಮಾ ಬೌಲಿಂಗ್​ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ದೀಪ್ತಿ ಒಂದೇ ಒಂದು ರನ್ ಬಿಟ್ಟುಕೊಡದೆ ಮೂರು ವಿಕೆಟ್‌ಗಳನ್ನು ಪಡೆದು ಗಮನ ಸೆಳೆದಿದ್ದಾರೆ.

ಈ ಗುರಿಯನ್ನು ಬೆನ್ನಟ್ಟಿದ, ಥಾಯ್ಲೆಂಡ್​ ಕಳಪೆ ಆರಂಭ ಪಡೆದುಕೊಂಡಿತು. ಥೈಲ್ಯಾಂಡ್ ಪರ ನಾನಾಪತ್ ಕೊಂಚರೋಯೆಂಕೈ ಮಾತ್ರ ಎರಡಂಕಿ ತಲುಪಲು ಸಾಧ್ಯವಾಯ್ತು. ಕೊಂಚರೋಯೆಂಕೈ ಹೊರತುಪಡಿಸಿ, ಥೈಲ್ಯಾಂಡ್‌ನ ಯಾವುದೇ ಬ್ಯಾಟರ್​ಗಳು ಆರು ರನ್‌ಗಳಿಗಿಂತ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಕೊಂಚರೋಯೆಂಕೈ 48 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 41 ರನ್ ಗಳಿಸಿದರು. ಭಾರತದ ಪರ ದೀಪ್ತಿ ಮತ್ತು ನಂದಿನಿ ತಲಾ ಮೂರು ವಿಕೆಟ್ ಪಡೆದರೆ, ಶ್ರೀ ಚರಣಿ ಎರಡು ಮತ್ತು ಕ್ರಾಂತಿ ಗೌಡ್ ಒಂದು ವಿಕೆಟ್ ಉರುಳಿಸಿದರು.

ಭಾರತದ ಇನ್ನಿಂಗ್ಸ್​ ಹೈಲೈಟ್ಸ್​: ಈ ಪಂದ್ಯದಲ್ಲಿ ಟಾಸ್​ ಗೆದ್ದ ಥಾಯ್ಲೆಂಡ್​ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಸ್ಮೃತಿ ಮಂಧಾನ ಮತ್ತು ಶಫಾಲಿ ಇನ್ನಿಂಗ್ಸ್ ಆರಂಭಿಸಿದರು. ಶೆಫಾಲಿ ವರ್ಮಾ ಆರಂಭದಿಂದಲೇ ಎದುರಾಳಿ ಮೇಲೆ ಒತ್ತಡವನ್ನು ಸೃಷ್ಟಿಸಿದರು. ಆದಾಗ್ಯೂ, ಭಾರತವು ಮಂಧಾನಾ ರೂಪದಲ್ಲಿ ಮೊದಲ ಹೊಡೆತವನ್ನು ಅನುಭವಿಸಿತು. ಮಂಧಾನ 10 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 19 ರನ್ ಗಳಿಸಿ ರನೌಟ್​ ಆದರು. ಥಾಯ್ಲೆಂಡ್ ವಿರುದ್ಧ ಭಾರತೀಯ ಮಹಿಳಾ ತಂಡವು ಉತ್ತಮ ಆರಂಭವನ್ನು ಪಡೆಯಿತು.

ಆದರೂ ಶೆಫಾಲಿ ರನ್ ವೇಗವನ್ನು ನಿಧಾನಗೊಳಿಸಲಿಲ್ಲ ಮತ್ತು ದೊಡ್ಡ ಹೊಡೆತಗಳನ್ನು ಹೊಡೆಯುತ್ತಲೇ ಇದ್ದರು. ಇದರಿಂದಾಗಿ, ಪವರ್‌ಪ್ಲೇನಲ್ಲಿ ಭಾರತವು ಒಂದು ವಿಕೆಟ್ ನಷ್ಟಕ್ಕೆ 65 ರನ್‌ಗಳನ್ನು ಗಳಿಸಿತು. ಇದು ಮಹಿಳಾ ಟಿ20 ಏಷ್ಯಾ ಕಪ್‌ನಲ್ಲಿ ಪವರ್‌ಪ್ಲೇನಲ್ಲಿ ಅತ್ಯಧಿಕ ಸ್ಕೋರ್ ಆಗಿದೆ. ಇದಕ್ಕೂ ಮೊದಲು ಈ ದಾಖಲೆ ಭಾರತದ ಹೆಸರಿನಲ್ಲಿತ್ತು. 2022ರಲ್ಲಿ ಬಾಂಗ್ಲಾದೇಶ ವಿರುದ್ಧದ ಪವರ್‌ಪ್ಲೇನಲ್ಲಿ ಭಾರತ ತಂಡವು ಯಾವುದೇ ನಷ್ಟವಿಲ್ಲದೆ 59 ರನ್‌ಗಳನ್ನು ಗಳಿಸಿತ್ತು. ಇದರ ನಂತರವೂ ಶೆಫಾಲಿ ತನ್ನ ಬಲವಾದ ಬ್ಯಾಟಿಂಗ್ ಅನ್ನು ಮುಂದುವರಿಸಿದರು ಮತ್ತು 26 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು.

ಆದರೆ 13ನೇ ಓವರ್‌ನಲ್ಲಿ ಸುಲಿಪೋರ್ನ್ ಲಾವೋಮಿ ಸತತ ಎರಡು ವಿಕೆಟ್​ಗಳನ್ನು ಕಬಳಿಸಿದ್ದರಿಂದ ತಂಡದ ಬ್ಯಾಟಿಂಗ್ ಕುಸಿಯಲಾರಂಭಿಸಿತು. ಲಾವೋಮಿ ಮೊದಲು ಶೆಫಾಲಿಯನ್ನು ಔಟ್ ಮಾಡಿದರು ಮತ್ತು ನಂತರ, ಮುಂದಿನ ಎಸೆತದಲ್ಲಿ, ರಿಚಾ ಘೋಷ್ ಅವರ ವಿಕೆಟ್​ ಪಡೆದುಕೊಂಡರು. ಇದಕ್ಕೂ ಮೊದಲು, ತಿಪಟ್ಚಾ ಫುಟ್ಟಾವೊಂಗ್ ನಾಯಕಿ ಹರ್ಮನ್‌ಪ್ರೀತ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮೂರನೇ ಹೊಡೆತ ನೀಡಿದ್ದರು. ಹರ್ಮನ್‌ಪ್ರೀತ್ ಐದು ರನ್‌ಗಳಿಗೆ ಔಟಾದರು. ಶೆಫಾಲಿ 36 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿದಂತೆ 64 ರನ್ ಗಳಿಸಿದರು. ಶೆಫಾಲಿ ಔಟಾದ ನಂತರ ಭಾರತದ ಇನ್ನಿಂಗ್ಸ್ ಕುಸಿಯಿತು. ಭಾರತ 137 ರನ್‌ಗಳಿಗೆ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿತು.

ಕೊನೆಯಲ್ಲಿ, ಶ್ರೀ ಚರಣಿ ಮತ್ತು ಕ್ರಾಂತಿ ಗೌಡ್ 22 ರನ್‌ಗಳನ್ನು ಸೇರಿಸುವ ಮೂಲಕ ಭಾರತದ ಸ್ಕೋರ್ ಅನ್ನು 160ರ ಹತ್ತಿರಕ್ಕೆ ತಂದರು. ಕ್ರಾಂತಿ ಎಂಟು ಎಸೆತಗಳಲ್ಲಿ 15 ರನ್ ಮತ್ತು ಶ್ರೀ ಚರಣಿ ಆರು ರನ್ ಗಳಿಸಿ ಅಜೇಯರಾಗಿ ಉಳಿದರು. ಥಾಯ್ಲೆಂಡ್ ಪರ, ಸುಲೀಪೋರ್ನ್ ಮೂರು ವಿಕೆಟ್‌ಗಳನ್ನು ಪಡೆದರೆ, ಸುನಿದಾ ಚತುರೊಂಗ್ರತನ ಎರಡು ವಿಕೆಟ್‌ಗಳನ್ನು ಕಿತ್ತರು. ತಿಪಚ್ಚ ಮತ್ತು ಚನಿದಾ ತಲಾ ಒಂದು ವಿಕೆಟ್ ಪಡೆದರು.

ದಾಖಲೆ ಬರೆದ ಮಂಧಾನ: ಈ ಪಂದ್ಯದಲ್ಲಿ ಮಂಧಾನ ಕಡಿಮೆ ಮೊತ್ತಕ್ಕೆ ಔಟಾದರೂ, ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆದರು. ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಂಧಾನ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಮಂಧಾನ ಸುಜೀ ಬೇಟ್ಸ್ ಅವರನ್ನು ಹಿಂದಿಕ್ಕಿದ್ದಾರೆ. ಬೇಟ್ಸ್ ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10740 ರನ್ ಗಳಿಸಿದ್ದಾರೆ. ಈಗ ಮಂಧಾನ 10756ರನ್​ಗಳೊಂದಿಗೆ ಅವರಿಗಿಂತ ಮುಂದಿದ್ದಾರೆ. ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ 10868 ರನ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಟೆಸ್ಟ್​ ಕ್ರಿಕೆಟ್​ನಲ್ಲೂ ನೋಬಾಲ್​ ಹಾಕುವವರಿಗೆ ದಂಡ ವಿಧಿಸಬೇಕು!!