ಸಂಜು ಸಿಡಿಲಬ್ಬರದ ಬ್ಯಾಟಿಂಗ್! ವೆಸ್ಟ್ ಇಂಡೀಸ್ ಮಣಿಸಿ 10 ವರ್ಷದ ಹಳೆ ಸೇಡು ತೀರಿಸಿಕೊಂಡ ಭಾರತ
ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಸೂಪರ್-8 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ಗೆ ತಲುಪಿದೆ.


Published : March 1, 2026 at 10:49 PM IST
IND vs WI Match: ಟಿ20 ವಿಶ್ವಕಪ್ನಲ್ಲಿ ಇಂದು ನಡೆದಿದ್ದ ಸೂಪರ್ -8ನ ಅಂತಿಮ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸುವ ಮೂಲಕ ಟೀಮ್ ಇಂಡಿಯಾ ಸೆಮಿಫೈನಲ್ಗೆ ಎಂಟ್ರಿಕೊಟ್ಟಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಕೆರಿಬಿಯನ್ ಪಡೆ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 195 ರನ್ಗಳನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಭಾರತದ ಪರ ಸಂಜು ಸ್ಯಾಮ್ಸ್ನ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಚೇಸಿಂಗ್ ಪ್ರಾರಂಭಿಸಿದ್ದ ಭಾರತ ಉತ್ತಮ ಆರಂಭ ಪಡೆದುಕೊಂಡಿತ್ತು. ಅಭಿಷೇಕ್ ಮತ್ತು ಸಂಜು ಸ್ಯಾಮ್ಸನ್ 29 ರನ್ಗಳ ಜೊತೆಯಾಟವಾಡಿದರು. ಆದರೆ 10 ರನ್ ಗಳಿಸಿದ್ದ ಅಭಿಷೇಕ್ ಕೆಟ್ಟ ಶಾಟ್ ಆಡಿ ಔಟಾಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇದಾದ ಬೆನ್ನಲ್ಲೇ ಇಶಾನ್ ಕಿಶನ್ ಸಹ 10 ರನ್ಗಳಿಸಿ ನಿರ್ಗಮಿಸಿದರು. ಒಂದು ಹಂತದಲ್ಲಿ ಭಾರತ ಸತತ 2 ವಿಕೆಟ್ ಪಡೆದು ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಜೊತೆಯಾಗಿ 58 ರನ್ಗಳನ್ನು ಕಲೆಹಾಕಿದರು. ಒಂದೆಡೆ ಸಂಜು ಅರ್ಧಶತಕ ಪೂರ್ಣಗೊಳಿಸಿದರೇ 18 ರನ್ ಗಳಿಸಿದ್ದ ಸೂರ್ಯ ವಿಕೆಟ್ ಕಳೆದುಕೊಂಡರು. ನಂತರ ತಿಲಕ ಜೊತೆಯಾಗಿ ತಂಡದ ಸ್ಕೋರ್ 141ಕ್ಕೆ ಕೊಂಡೊಯ್ದು ತಂಡವನ್ನು ಗೆಲುವಿ ಹತ್ತರಕ್ಕೆ ತಂದರು. ಆದಾಗ್ಯೂ ತಿಲಕ್ (27) ಬೌಂಡರಿ ಬಾರಿಸುವ ಯತ್ನದಲ್ಲಿ ವಿಕೆಟ್ ಕಳೆದುಕೊಂಡರು. ನಂತರ ಹಾರ್ದಿಕ್ (17) ಮತ್ತು ಶಿವಂ ದುಬೆ (8*) ರನ್ ಕೊಡುಗೆ ನೀಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಶಾಹಿ ಹೋಪ್ (32), ರೋಸ್ಟನ್ ಚೇಸ್ (40) ಜೊತೆಯಾಗಿ 68 ರನ್ಗಳನ್ನು ಕಲೆಹಾಕಿದರು. ಬಳಿಕ ಹೆಟ್ಮೇಯರ್ (27), ರೂದರ್ಫೋರ್ಡ್ (14), ರೋವಮನ್ ಪೋವೆಲ್ (34*) ಮತ್ತು ಜೇಸನ್ ಹೋಲ್ಡರ್ (37*) ಸಹ ಉತ್ತಮ ಪ್ರದರ್ಶನ ನೀಡಿದರು. ಭಾರತದ ಪರ ಬುಮ್ರಾ 2 ವಿಕೆಟ್ ಪಡೆದುಕೊಂಡರು.
ಸಂಜು ಶತಕ ವಂಚಿತ: ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ ಅಜೇಯವಾಗಿ 97 ರನ್ ಕಲೆಹಾಕಿದರು. ಈ ಅದ್ಭುತ ಪ್ರದರ್ಶನಕ್ಕಾಗಿ ಅವರು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು.
ಹಳೆ ಸೇಡು ತೀರಿಸಿಕೊಂಡ ಭಾರತ: ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆಲುವು ಸಾಧಿಸಿ 10 ವರ್ಷದ ಹಳೆ ಸೇಡು ತೀಸಿಕೊಂಡಿತು. 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಭಾರತವನ್ನು ಸೆಮಿಫೈನಲ್ನಲ್ಲಿ ಮಣಿಸುವ ಮೂಲಕ ಕೆರಿಬಿಯನ್ ಫೈನಲ್ ತಲುಪಿತ್ತು ಇದೀಗ ಭಾರತ ವೆಸ್ಟ್ ಇಂಡೀಸ್ ಮಣಿಸಿ ಸೆಮಿಸ್ಗೆ ಎಂಟ್ರಿ ಕೊಟ್ಟಿದೆ.
ಇಂಗ್ಲೆಂಡ್ ವಿರುದ್ಧ ಸೆಮಿಸ್ ಕದನ: ಭಾರತ ಮಾ.5 ರಂದು ನಡೆಯಲಿರುವ 2ನೇ ಸೆಮಿಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು; 20 ವರ್ಷದ ಹಳೆ ದಾಖಲೆ ಉಡೀಸ್

