ETV Bharat / sports

ಅಭಿಷೇಕ್, ಸೂರ್ಯ, ಪಾಂಡ್ಯ, ತಿಲಕ್ ಆರ್ಭಟ; ಜಿಂಬಾಬ್ವೆಗೆ 257 ರನ್‌ಗಳ ಬೃಹತ್ ಟಾರ್ಗೆಟ್!

ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಭಾರತ ಜಿಂಬಾಬ್ವೆಗೆ 257 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.

ಅಭಿಷೇಕ್ ಶರ್ಮಾ, ಇಶನ್ ಕಿಶನ್ ಬ್ಯಾಟಿಂಗ್
ಅಭಿಷೇಕ್ ಶರ್ಮಾ, ಇಶನ್ ಕಿಶನ್ ಬ್ಯಾಟಿಂಗ್ (IANS)
author img

By ETV Bharat Karnataka Team

Published : February 26, 2026 at 8:51 PM IST

|

Updated : February 26, 2026 at 9:06 PM IST

2 Min Read
Choose ETV Bharat

ಚೆನ್ನೈ(ತಮಿಳುನಾಡು): ಟಿ20 ವಿಶ್ವಕಪ್‌ನ ಸೂಪರ್ 8 ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆಗೆ ಗೆಲ್ಲಲು 257 ರನ್‌ಗಳ ಬೃಹತ್ ಗುರಿ ನೀಡಿದೆ. ಇದು ಈವರೆಗಿನ ಟಿ20 ವಿಶ್ವಕಪ್‌ಗಳಲ್ಲೇ ಭಾರತದ ಅತಿ ದೊಡ್ಡ ಟಾರ್ಗೆಟ್‌ ಮತ್ತು ಹಾಲಿ ವಿಶ್ವಕಪ್‌ನಲ್ಲಿ ಇದುವರೆಗಿನ ಅತಿ ದೊಡ್ಡ ಟಾರ್ಗೆಟ್‌ ಎಂಬುದು ವಿಶೇಷ.

ಅಭಿಷೇಕ್ ಶರ್ಮಾ(55 ರನ್), ಸೂರ್ಯ ಕುಮಾರ್ ಯಾದವ್(33) ತಿಲಕ್ ವರ್ಮಾ(44), ಇಶಾನ್ ಕಿಶನ್(38), ಹಾರ್ದಿಕ್ ಪಾಂಡ್ಯ(50) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಚೆನ್ನೈನ ಎಂ.ಎ.ಚಿದಂಬರಂ(ಚೆಪಾಕ್) ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದ ಜಿಂಬಾಬ್ವೆ ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿತು. ಭಾರತ ಆಡುವ ಹನ್ನೊಂದರ ಬಳಗದಲ್ಲಿ ಪ್ರಮುಖವಾಗಿ ಎರಡು ಬದಲಾವಣೆ ಮಾಡಿತು. ವಾಷಿಂಗ್ಟನ್ ಸುಂದರ್ ಬದಲಾಗಿ ಅಕ್ಷರ್ ಪಟೇಲ್ ಮತ್ತು ರಿಂಕು ಸಿಂಗ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸಿತು.

ಆರಂಭಿಕರಾಗಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಕ್ರೀಸಿಗಿಳಿದರು. ಇನ್ನಿಂಗ್ಸ್‌ನ ಮೊದಲ ಓವರ್‌ ಮಾಡಿದ ರಿಚರ್ಡ್ ನಗವಾರ ಅವರ ಎರಡನೇ ಲೆಂತ್ ಎಸೆತವನ್ನು ಸಂಜು ಆಕರ್ಷಕವಾಗಿ ಸಿಕ್ಸರ್‌ಗಟ್ಟಿದರು. ಈ ಮೂಲಕ ಭಾರತ ನಿರೀಕ್ಷೆಯಂತೆಯೇ ಸ್ಫೋಟಕ ಬ್ಯಾಟಿಂಗ್ ಮಾಡುವ ಸುಳಿವು ದೊರೆಯಿತು. ಆದರೆ, ಈ ಹಂತದಲ್ಲಿ ಜಿಂಬಾಬ್ವೆಯ ಪ್ರಮುಖ ವೇಗಿ ಬ್ಲೆಸ್ಸಿಂಗ್ ಮುಜರ್ಬಾನಿ ಎಸೆತವನ್ನು ಸಿಕ್ಸರ್‌ಗಟ್ಟಲು ಮುಂದಾದ ಸಂಜು, ರಯಾನ್ ಬರ್ಲ್ ಅವರಿಗೆ ಕ್ಯಾಚಿತ್ತು, ವಿಕೆಟ್ ಒಪ್ಪಿಸಿದರು. ಸಂಜು 15 ಎಸೆತದಲ್ಲಿ ಎರಡು ಸಿಕ್ಸರ್ ಮತ್ತು 1 ಬೌಂಡರಿಯೊಂದಿಗೆ 24 ರನ್ ಕೊಡುಗೆ ನೀಡಿದರು.

ಇದಾದ ಬಳಿಕ ಎಡಗೈ ಬ್ಯಾಟರ್ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಅವರಿಗೆ ಜೊತೆಯಾದರು. ಸೊಗಸಾದ ನಾಲ್ಕು ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ ಆಡುತ್ತಿದ್ದ ಕಿಶನ್, ಸಿಕಂದರ್ ರಾಜಾ ಎಸೆತದಲ್ಲಿ ವಿಕೆಟ್ ಕೈ ಚೆಲ್ಲಿದರು. ಇದಾದ ನಂತರ ನಾಯಕ ಸೂರ್ಯಕುಮಾರ್ ಕ್ರೀಸಿಗೆ ಬಂದರು.

ಅಭಿಷೇಕ್ ಶರ್ಮಾ ಆಕರ್ಷಕ ಅರ್ಧಶತಕ: ಸ್ಫೋಟಕ ಬ್ಯಾಟರ್ ಅಭಿಷೇಕ್ ಕೊನೆಗೂ ಇಂದು ತಮ್ಮ ಹಳೆಯ ಫಾರ್ಮ್‌ಗೆ ಮರಳಿ, ಕ್ರಿಕೆಟ್‌ ಅಭಿಮಾನಿಗಳ ಸಂತಸ ಹೆಚ್ಚಿಸಿದರು. ಶರ್ಮಾ ಸಿಕ್ಸರ್, ಬೌಂಡರಿಗಳೊಂದಿಗೆ 34 ಎಸೆತಗಳಲ್ಲಿ ಅರ್ಧ ಶತಕ(55) ಸಿಡಿಸಿದರು. ಇದಾದ ಸ್ವಲ್ಪ ಹೊತ್ತಲ್ಲೇ ತಿನೊಟೆಂಡಾ ಮಪೊಸಾ ಎಸೆತದಲ್ಲಿ ಸಿಕಂದರ್ ರಾಜಾ ಕೈಗೆ ಕ್ಯಾಚಿ ನೀಡಿ, ವಿಕೆಟ್ ಒಪ್ಪಿಸಿದರು. ಇವರ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿಗಳಿದ್ದವು.

ನಾಯಕ ಸೂರ್ಯ ಕುಮಾರ್ ಯಾದವ್ 13 ಎಸೆತಗಳಲ್ಲಿ ಭರ್ಜರಿ 33 ರನ್ ಸಿಡಿಸಿದರು. ಇವರ ಇನ್ನಿಂಗ್ಸ್‌ನಲ್ಲಿ ಎರಡು ಆಕರ್ಷಕ ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು.

ಹಾರ್ದಿಕ್ ಮಿಂಚಿನ ಅರ್ಧಶತಕ: ಇನ್ನು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ ಆಕರ್ಷಕ (50) ಅರ್ಧಶತಕ ಮತ್ತು ತಿಲಕ್ ವರ್ಮಾ(44, 16 ಎಸೆತ) ಉಪಯುಕ್ತ ರನ್ ಕೊಡುಗೆ ನೀಡಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ ಭಾರತ 257 ರನ್‌ಗಳ ಬೃಹತ್‌ ಟಾರ್ಗೆಟ್‌ ನೀಡಿತು.

ಇದನ್ನೂ ಓದಿ: 16.1 ಓವರ್‌ಗಳಲ್ಲೇ 177 ರನ್ ಚೇಸ್! ದ.ಆಫ್ರಿಕಾ ಬಿರುಗಾಳಿಗೆ ವಿಂಡೀಸ್ ಧೂಳೀಪಟ; ಭಾರತದ ಸೆಮಿಫೈನಲ್ ಆಸೆ ಜೀವಂತ

Last Updated : February 26, 2026 at 9:06 PM IST