ಐಪಿಎಲ್ ಆಟಗಾರರು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಅಗ್ನಿ ಅವಘಡ!
ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.


Published : June 1, 2026 at 9:43 AM IST
ಅಹಮದಾಬಾದ್, ಗುಜರಾತ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ IPL 2026ರ ಗ್ರ್ಯಾಂಡ್ ಫಿನಾಲೆಯ ನಂತರ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರನ್ನರ್ ಅಪ್ ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.
ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಫೈನಲ್ ಪಂದ್ಯದ ನಂತರ, ಆಟಗಾರರನ್ನು ಕ್ರೀಡಾಂಗಣದಿಂದ ಹೋಟೆಲ್‌ಗೆ ಕರೆದೊಯ್ಯುತ್ತಿದ್ದ ಬಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್‌ನ ಎಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬಸ್‌ನಿಂದ ಹೊಗೆ ಹೊರಬರಲು ಪ್ರಾರಂಭಿಸಿತು. ಎಂಜಿನ್‌ನಲ್ಲಿ ಹೊಗೆ ಹೊರಬರುತ್ತಿರುವುದನ್ನು ಚಾಲಕ ಮತ್ತು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ಕೂಡಲೇ ಬಸ್ ನಿಲ್ಲಿಸಲಾಗಿದೆ ಮತ್ತು ಎಲ್ಲಾ ಆಟಗಾರರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಈ ಹಠಾತ್ ಘಟನೆಯಿಂದಾಗಿ ನಾಯಕ ಶುಭಮನ್ ಗಿಲ್ ಸೇರಿದಂತೆ ಗುಜರಾತ್ ಟೈಟಾನ್ಸ್‌ನ ಎಲ್ಲ ಆಟಗಾರರು ಮತ್ತು ಅಧಿಕಾರಿಗಳು ಸುಮಾರು 1 ಗಂಟೆಗಳ ಕಾಲ ರಸ್ತೆಯಲ್ಲಿ ಸಿಲುಕಿಕೊಂಡರು. ನಂತರ ಆಡಳಿತವು ತಕ್ಷಣವೇ ಮತ್ತೊಂದು ಬಸ್ ವ್ಯವಸ್ಥೆ ಮಾಡಿ ಎಲ್ಲ ಆಟಗಾರರನ್ನು ಸುರಕ್ಷಿತವಾಗಿ ಹೋಟೆಲ್‌ಗೆ ಕರೆದೊಯ್ಯಲಾಯಿತು. ಘಟನೆಯಲ್ಲಿ ಯಾವುದೇ ಆಟಗಾರರು ಸಿಬ್ಬಂದಿಗೆ ಗಾಯಗಳಾಗಿಲ್ಲ ಮತ್ತು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಮಂಡಳಿ ಖಚಿತ ಪಡಿಸಿದೆ.
Gujarat Titans players, staff evacuated from team bus after short circuit causes breakdown and reported flames. This came after the team lost to RCB in the IPL final. pic.twitter.com/vMw8cFjCcb
— Vani Mehrotra (@vani_mehrotra) June 1, 2026
ಪಂದ್ಯ ಹೈಲೈಟ್ಸ್: ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ಬ್ಯಾಟ್ಸ್‌ಮನ್‌ಗಳು ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಬೆಂಗಳೂರಿನ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಯಿಂದ ಗುಜರಾತ್ ತಂಡ ಕೇವಲ 155 ರನ್‌ಗಳಿಗೆ ಸೀಮಿತವಾಯ್ತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡದ ಪರ ಶುಭಮನ್ ಗಿಲ್, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್‌ರಂತಹ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಪ್ರಶಸ್ತಿ ನಿರ್ಣಾಯಕ ಪಂದ್ಯದಲ್ಲಿ ರನ್ ಗಳಿಸುವಲ್ಲಿ ವಿಫಲರಾದರು. ಇದರೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಹ ನಿರಾಸೆ ಮೂಡಿಸಿದರು. ವಾಷಿಂಗ್ಟನ್ ಸುಂದರ್ ಮಾತ್ರ 37 ಎಸೆತಗಳಲ್ಲಿ 50 ರನ್ ಗಳಿಸಿ ಹೈಸ್ಕೋರರ್ ಎನಿಸಿಕೊಂಡರು. ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್ ಮತ್ತು ರಸಿಕ್ ಸಲಾಂ ದಾರ್ ಒಟ್ಟಾಗಿ 7 ವಿಕೆಟ್‌ಗಳನ್ನು ಪಡೆದು ಗೆಲುವಿಗೆ ಅಡಿಪಾಯ ಹಾಕಿದರು.
ವಿರಾಟ್ ಕೊಹ್ಲಿಯ ಸ್ಫೋಟಕ ಪ್ರದರ್ಶನ: ಈ ಗುರಿಯನ್ನು ಬೆನ್ನತ್ತಿದ ಬೆಂಗಳೂರು ಪರ ವಿರಾಟ್ ಕೊಹ್ಲಿ ಅಜೇಯ 75 ರನ್ ಗಳಿಸಿ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರಿಗೆ ವೆಂಕಟೇಶ್ ಅಯ್ಯರ್ (32 ರನ್) ಮತ್ತು ಟಿಮ್ ಡೇವಿಡ್ (24 ರನ್) ಸಾಥ್ ನೀಡಿದರು. ಇದರೊಂದಿಗೆ ಆರ್‌ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದುಕೊಂಡ 3ನೇ ತಂಡವಾಯ್ತು.
ಸತತ ಎರಡು ಋತುಗಳಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದ ತಂಡಗಳು
ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2010 ಮತ್ತು 2011 ರಲ್ಲಿ ಸತತ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 2019 ಮತ್ತು 2020 ರಲ್ಲಿ ಐಪಿಎಲ್‌ನಲ್ಲಿ ಸತತ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
2025ರ ಫೈನಲ್‌ನಲ್ಲಿ ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿತು, ಇದೀಗ 2026 ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿದೆ.

