ಇಂಗ್ಲೆಂಡ್ ವಿರುದ್ಧ ಎರಡನೇ ಟಿ20ಯಲ್ಲಿ ಅಯ್ಯರ್ ಪಡೆಗೆ ಸೋಲು!
ಇಂಗ್ಲೆಂಡ್ ವಿರುದ್ಧ ನಡೆದಿದ್ದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನ್ನು ಕಂಡಿದೆ.


Published : July 4, 2026 at 11:42 PM IST
ಶನಿವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ, ಇಂಗ್ಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಭಾರತ ನೀಡಿದ್ದ 191 ರನ್‌ಗಳನ್ನು ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಜೆಕಬ್ ಬೆಥೆಲ್ ಅವರ ಭರ್ಜರಿ ಅರ್ಧಶತಕ ನೆರವಿನಿಂದ ಇನ್ನೂ 6 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ಅಯ್ಯರ್ ನಾಯಕತ್ವದಲ್ಲಿ ಭಾರತ ಸತತ ಮೂರನೇ ಪಂದ್ಯ ಸೋಲನ್ನು ಕಂಡಿತು.
ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಕಳಪೆ ಆರಂಭ ಪಡೆದುಕೊಂಡಿತು. ಅರ್ಶ್‌ದೀಪ್ ಸಿಂಗ್ ಮೊದಲ ಓವರ್‌ನಲ್ಲಿಯೇ ಫಿಲ್ ಸಾಲ್ಟ್ (0 ರನ್) ಮತ್ತು ಜೋಸ್ ಬಟ್ಲರ್ (0 ರನ್) ಅವರನ್ನು ಔಟ್ ಮಾಡಿದರು. ನಂತರ ನಾಯಕ ಹ್ಯಾರಿ ಬ್ರೂಕ್ ಜವಾಬ್ದಾರಿಯನ್ನು ವಹಿಸಿಕೊಂಡರು. ಬ್ರೂಕ್ 15 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 39 ರನ್ ಗಳಿಸಿದರು. ಅಕ್ಷರ್ ಪಟೇಲ್ ಹ್ಯಾರಿ ಬ್ರೂಕ್ ಅವರ ವಿಕೆಟ್ ಪಡೆದರು. ಬ್ರೂಕ್ ಔಟಾದ ಸಮಯದಲ್ಲಿ, ಇಂಗ್ಲೆಂಡ್ ಸ್ಕೋರ್ 51/3 ಆಗಿತ್ತು.
ಇಲ್ಲಿಂದ ಟಾಮ್ ಬ್ಯಾಂಟನ್ ಮತ್ತು ಜಾಕೋಬ್ ಬೆಥೆಲ್ ನಾಲ್ಕನೇ ವಿಕೆಟ್‌ಗೆ 67 ರನ್‌ಗಳ ಉತ್ತಮ ಜೊತೆಯಾಟ ಆಡಿದರು. ಬ್ಯಾಂಟನ್ 32 ಎಸೆತಗಳಲ್ಲಿ 6 ಬೌಂಡರಿಗಳನ್ನು ಒಳಗೊಂಡಂತೆ 39 ರನ್ ಗಳಿಸಿದ್ದರು. ಅರ್ಷದೀಪ್ ಇವರನ್ನು ಪೆವಿಲಿಯನ್ಗೆ ಕಳುಹಿಸುವಲ್ಲಿ ಯಶಸ್ವಿ ಆದರು. ವಿಲ್ ಜ್ಯಾಕ್ಸ್ ವರುಣ್ ಚಕ್ರವರ್ತಿ ಎಸೆತದಲ್ಲಿ ಒಂಬತ್ತು ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ವಿಲ್ ಜ್ಯಾಕ್ಸ್ ಔಟಾದ ನಂತರ, ಜಾಕೋಬ್ ಬೆಥೆಲ್ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಜಾಕೋಬ್ ಬೆಥೆಲ್ 46 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 76 ರನ್ ಗಳಿಸಿದರು. ಏತನ್ಮಧ್ಯೆ 17ನೇ ಓವರ್‌ನಲ್ಲಿ ರವಿ ಬಿಷ್ಣೋಯ್ 29 ರನ್‌ಗಳನ್ನು ಬಿಟ್ಟುಕೊಟ್ಟರು, ಇದು ಪಂದ್ಯಕ್ಕೆ ದೊಡ್ಡ ತಿರುವು ನೀಡಿತು. ಇದಕ್ಕೂ ಮೊದಲು, ಅರ್ಷದೀಪ್ ಸಿಂಗ್ ಕೂಡ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ 27 ರನ್‌ಗಳನ್ನು ಬಿಟ್ಟುಕೊಟ್ಟರು. ಆದಾಗ್ಯೂ, ಈ ಪಂದ್ಯದಲ್ಲಿ ಅರ್ಷದೀಪ್ ಮೂರು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ಭಾರತದ ಬ್ಯಾಟಿಂಗ್ ಹೀಗಿತ್ತು: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಏಳು ವಿಕೆಟ್‌ಗಳಿಗೆ 190 ರನ್ ಗಳಿಸಿತು. ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ತಂಡದ ಪರ ಇನ್ನಿಂಗ್ಸ್ ಆರಂಭಿಸಿದರು. ಚೊಚ್ಚಲ ಪಂದ್ಯವಾಡಿದ ವೈಭವ್ ತಮ್ಮ ಮೂರನೇ ಎಸೆತದಲ್ಲಿ ಜೋಶ್ ಟಂಗ್ ಅವರ ಸ್ಕ್ವೇರ್ ಲೆಗ್ ಎಸೆತವನ್ನು ಆಡುವ ಮೂಲಕ ತಮ್ಮ ಮೊದಲ ಅಂತರರಾಷ್ಟ್ರೀಯ ರನ್ ಗಳಿಸಿದರು. ನಂತರ, ಜೋಫ್ರಾ ಆರ್ಚರ್ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ನಂತರ ಅವರು ಜೋಶ್ ಟಂಗ್ ಎಸೆತದಲ್ಲೂ ಸಿಕ್ಸರ್ ಬಾರಿಸಿದರು. ಆದಾಗ್ಯೂ, ವೈಭವ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ವಿಲ್ ಜ್ಯಾಕ್ಸ್ ಎಸೆತದಲ್ಲಿ ಸ್ಟಂಪ್ ಔಟ್ ಆಟದರು. ವೈಭವ್ 10 ಎಸೆತಗಳಲ್ಲಿ 2 ಸಿಕ್ಸರ್‌ಗಳೊಂದಿಗೆ 14 ರನ್ ಗಳಿಸಿದರು. ವೈಭವ್ ಮತ್ತು ಅಭಿಷೇಕ್ ಶರ್ಮಾ ಮೊದಲ ವಿಕೆಟ್‌ಗೆ 50 ರನ್ ಸೇರಿಸಿದರು. ವೈಭವ್ ಔಟಾದ ನಂತರವೂ ಅದ್ಭುತ ಪ್ರದರ್ಶನ ನೀಡುತ್ತಿದ್ದ ಅಭಿಷೇಕ್ ಶರ್ಮಾ ಸಹ ಔಟಾದರು. ಅಭಿಷೇಕ್ 24 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 43 ರನ್ ಗಳಿಸಿದರು. ಅವರನ್ನು ಸ್ಯಾಮ್ ಕರನ್ ಔಟ್ ಮಾಡಿದರು.
ನಂತರ ನಾಯಕ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಮೂರನೇ ವಿಕೆಟ್‌ಗೆ 65 ರನ್ ಸೇರಿಸಿದರು. ಲಿಯಾಮ್ ಡಾಸನ್ ಅಯ್ಯರ್ ವಿಕೆಟ್ ಪಡೆಯುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು. ಶ್ರೇಯಸ್ 22 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 37 ರನ್ ಗಳಿಸಿದರು. ನಂತರ ಸ್ಯಾಮ್ ಕರನ್ ಶಿವಂ ದುಬೆ ಮತ್ತು ಇಶಾನ್ ಕಿಶನ್ ಅವರನ್ನು ಔಟ್ ಮಾಡಿದರು. ಕಿಶನ್ 40 ಎಸೆತಗಳಲ್ಲಿ ಆರು ಬೌಂಡರಿಗಳೊಂದಿಗೆ 49 ರನ್ ಗಳಿಸಿದರು. ಶಿವಂ ಕೇವಲ ಐದು ರನ್ ಗಳಿಸಿ ನಿರ್ಗಮಿಸಿದರು.
ನಂತರ ಬಂದವರಲ್ಲಿ ಅಕ್ಷರ್ ಪಟೇಲ್ (2 ರನ್) ಮತ್ತು ಹರ್ಷಿತ್ ರಾಣಾ (6 ರನ್) ಬ್ಯಾಟಿಂಗ್‌ನಲ್ಲಿ ಗಮನಾರ್ಹ ಪರಿಣಾಮ ಬೀರುವಲ್ಲಿ ವಿಫಲರಾದರು. ತಿಲಕ್ ವರ್ಮಾ 11 ಎಸೆತಗಳಲ್ಲಿ 24 ರನ್ ಗಳಿಸಿ ಭಾರತ 190ರ ಗಡಿ ತಲುಪುವಲ್ಲಿ ಸಹಾಯ ಮಾಡಿದರು. ಇಂಗ್ಲೆಂಡ್ ಪರ ಸ್ಯಾಮ್ ಕರನ್ ಮೂರು ವಿಕೆಟ್ ಪಡೆದರು. ಜೋಫ್ರಾ ಆರ್ಚರ್, ಲಿಯಾಮ್ ಡಾಸನ್ ಮತ್ತು ವಿಲ್ ಜ್ಯಾಕ್ಸ್ ತಲಾ ಒಂದು ವಿಕೆಟ್ ಕಿತ್ತರು.

