ETV Bharat / sports

ದೀರ್ಘಕಾಲದ ಅನಾರೋಗ್ಯ: ಕ್ರಿಕೆಟಿಗ ರಿಂಕು ಸಿಂಗ್ ತಂದೆ ನಿಧನ

ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯ ವಕ್ತಾರ ಡಾ. ಸುನಿಲ್ ಕುಮಾರ್ ಮಾತನಾಡಿ, ಖಾಂಚಂದ್ ಸಿಂಗ್ ಯಕೃತ್ತಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ.

ಕ್ರಿಕೆಟಿಗ ರಿಂಕು ಸಿಂಗ್ ತಂದೆ ನಿಧನ
ಕ್ರಿಕೆಟಿಗ ರಿಂಕು ಸಿಂಗ್ ತಂದೆ ನಿಧನ (ETV Bharat)
author img

By ETV Bharat Karnataka Team

Published : February 27, 2026 at 9:55 AM IST

2 Min Read
Choose ETV Bharat

ಅಲಿಗಢ/ನೋಯ್ಡಾ: ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರ ತಂದೆ ಖಾಂಚಂದ್ ಸಿಂಗ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಶುಕ್ರವಾರ ಮುಂಜಾನೆ ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕ್ರಿಕೆಟಿಗ ರಿಂಕು ಸಿಂಗ್​ ತಂದೆ ದಾಖಲಾಗಿದ್ದ ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯ ವಕ್ತಾರ ಡಾ. ಸುನಿಲ್ ಕುಮಾರ್ ಮಾತನಾಡಿ, ಖಾಂಚಂದ್ ಸಿಂಗ್ ಯಕೃತ್ತಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಅವರ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು. ಹೀಗಾಗಿ ಅವರನ್ನು ಫೆಬ್ರವರಿ 21 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ವೆಂಟಿಲೇಟರ್​ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳ್ಳಗ್ಗೆ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು ಎಂದು ಡಾ. ಕುಮಾರ್ ಮಾಹಿತಿ ನೀಡಿದ್ದಾರೆ.

ತಂದೆಯ ಗಂಭೀರ ಸ್ಥಿತಿಯಿಂದಾಗಿ, ಟಿ20 ವಿಶ್ವಕಪ್‌ನ ಮಧ್ಯದಲ್ಲಿ ರಿಂಕು ಮನೆಗೆ ಮರಳಬೇಕಾಯಿತು. ಫೆಬ್ರವರಿ 26 ರಂದು ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ಭಾರತೀಯ ತಂಡವನ್ನು ಮತ್ತೆ ಸೇರಿಕೊಂಡಿದ್ದರು. ಇತ್ತೀಚೆಗಷ್ಟೇ ತಮ್ಮ ತಂದೆಯನ್ನು ಭೇಟಿ ಮಾಡಲು ನೋಯ್ಡಾಗೆ ಭೇಟಿ ನೀಡಿದ್ದರು.

ರಿಂಕು ಸಿಂಗ್​ ತಂದೆ ನಿಧನದ ಬಗ್ಗೆ ಮಸೂದ್​ ಅಮಿನಿ ಹೇಳಿದ್ದಿಷ್ಟು: ರಿಂಕು ಅವರ ಮಾಜಿ ತರಬೇತುದಾರ ಮಸೂದ್ ಅಮಿನಿ, ಅಲಿಗಢದಲ್ಲಿ ಮಾತನಾಡಿದ್ದು, ಖಾಂಚಂದ್ ಸಿಂಗ್ ಅವರು ಮುಂದುವರಿದ ಹಂತದ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಮತ್ತು ಅನಾರೋಗ್ಯದ ಅಂತಿಮ ಹಂತದಲ್ಲಿದ್ದರು ಎಂದು ತಿಳಿಸಿದ್ದಾರೆ. ರಿಂಕು ಅವರ ತಂದೆ ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಮತ್ತು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಅವಿಶ್ರಾಂತವಾಗಿ ಶ್ರಮಿಸುತ್ತಿದ್ದರು ಎಂದು ಅಮಿನಿ ಹೇಳಿದ್ದಾರೆ.

ಗ್ಯಾಸ್​ ಸಿಲಿಂಡರ್​​ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದ ಖಾಂಚಂದ್​ ಸಿಂಗ್: ಖಾಂಚಂದ್​ ಸಿಂಗ್​ ಗ್ಯಾಸ್ ಸಿಲಿಂಡರ್ ವಿತರಕರಾಗಿ ಕೆಲಸ ಮಾಡುತ್ತಿದ್ದರು. ಈ ಮೂಲಕ ಅವರು ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ಅಲಿಘಡ ಜಿಲ್ಲೆಯ ನಿವಾಸಿಯಾಗಿರುವ 28 ವರ್ಷದ ಕ್ರಿಕೆಟಿಗ ರಿಂಕು ಸಿಂಗ್​, ತಮ್ಮ ಯಶಸ್ಸಿನ ಬಹುಭಾಗವನ್ನು ತಮ್ಮ ತಂದೆಗೆ ಅರ್ಪಿಸಿದ್ದಾರೆ. ಅಲಿಗಢದಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಕೆಲಸ ಮಾಡುತ್ತಿದ್ದ ಖಾಂಚಂದ್ ಸಿಂಗ್, ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಕ್ರಿಕೆಟಿಗನಾಗುವ ತಮ್ಮ ಮಗನ ಕನಸನ್ನು ಬೆಂಬಲಿಸಿದ್ದರು. ಖಾಂಚಂದ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಅಲಿಗಢದಲ್ಲಿ ನಡೆಸಲಾಗುವುದು ಮತ್ತು ರಿಂಕು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನು ಓದಿ:

ಕಲಬೆರಕೆ ಹಾಲಿನಿಂದ 6 ಜನರ ದುರಂತ ಅಂತ್ಯ: ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ 15 ಜನರ ಹೋರಾಟ!

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ': NCERT ಪಠ್ಯದಲ್ಲಿನ ಉಲ್ಲೇಖಕ್ಕೆ ಸುಪ್ರೀಂ ಅಸಮಾಧಾನ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಪ್ರಧಾನ್​ ವಿಷಾದ