ETV Bharat / sports

ಬೆಲ್ಜಿಯಂ ವಿರುದ್ಧ ಸೋತು ಫಿಫಾ ವಿಶ್ವಕಪ್​ನಿಂದ ಹೊರಬಿದ್ದ ಯುಎಸ್​ಎ

ಬೆಲ್ಜಿಯಂ ತಂಡವು ಫಿಫಾ ವಿಶ್ವಕಪ್ 16ನೇ ಸುತ್ತಿನ ಪಂದ್ಯದಲ್ಲಿ ಸಹ-ಆತಿಥೇಯ ಯುಎಸ್​ಎ ವಿರುದ್ಧ 4-1 ಅಂತರದ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದೆ.

ಕ್ವಾರ್ಟರ್​ ಫೈನಲ್​ಗೆ ತಲುಪಿದ ಯುಎಸ್​ಎ
ಕ್ವಾರ್ಟರ್​ ಫೈನಲ್​ಗೆ ತಲುಪಿದ ಯುಎಸ್​ಎ (AP)
author img

By ETV Bharat Sports Team

Published : July 7, 2026 at 11:36 AM IST

2 Min Read
Choose ETV Bharat

ಬೆಲ್ಜಿಯಂ ತಂಡವು FIFA ವಿಶ್ವಕಪ್ 2026ರ 16ನೇ ಸುತ್ತಿನ ಪಂದ್ಯದಲ್ಲಿ ಸಹ-ಆತಿಥೇಯ USA ವಿರುದ್ಧ 4-1 ಅಂತರದ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯಿತು. ಸಿಯಾಟಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೆಡ್ ಡೆವಿಲ್ಸ್ ತಂಡವು ಆರಂಭದಿಂದ ಅಂತ್ಯದವರೆಗೂ ಪ್ರಾಬಲ್ಯ ಸಾಧಿಸಿತು, ಆತಿಥೇಯರಿಗೆ ಪುಟಿದೇಳುವಂತಹ ಯಾವುದೇ ಅವಕಾಶ ನೀಡಲಿಲ್ಲ. ಈ ಗೆಲುವಿನೊಂದಿಗೆ, ಬೆಲ್ಜಿಯಂ ಈಗ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಲು ಸಜ್ಜಾಗಿದೆ.

ಬೆಲ್ಜಿಯಂ ಪಂದ್ಯವನ್ನು ಆಕ್ರಮಣಕಾರಿಯಾಗಿ ಆರಂಭಿಸಿತು, ಒಂಬತ್ತನೇ ನಿಮಿಷದಲ್ಲಿ ಚಾರ್ಲ್ಸ್ ಡಿ ಕೆಟೆಲೇರೆ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. 31ನೇ ನಿಮಿಷದಲ್ಲಿ ಮಲಿಕ್ ಟಿಲ್ಮನ್ ಗಳಿಸಿದ ಗೋಲಿನೊಂದಿಗೆ ಯುನೈಟೆಡ್ ಸ್ಟೇಟ್ಸ್ ಸ್ಕೋರ್ ಅನ್ನು 1-1 ರಲ್ಲಿ ಸಮಬಲಗೊಳಿಸಿತು, ಆದರೆ ತಂಡದ ಈ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಎರಡು ನಿಮಿಷಗಳ ನಂತರ, ಡಿ ಕೆಟೆಲೇರೆ ತನ್ನ ಎರಡನೇ ಗೋಲು ಗಳಿಸಿ ಬೆಲ್ಜಿಯಂ ಮುನ್ನಡೆ ದ್ವಿಗುಣಗೊಳಿಸಿದರು. 2-1 ಅಂತರದಿಂದಿಗೆ ಮೊದಲಾರ್ಧ ಕೊನೆಗೊಂಡಿತು.

ದ್ವಿತೀಯಾರ್ಧದಲ್ಲಿಯೂ ಬೆಲ್ಜಿಯಂ ಪ್ರಾಬಲ್ಯ ಮುಂದುವರಿಸಿತು. ಪಂದ್ಯದ 57ನೇ ನಿಮಿಷದಲ್ಲಿ ಹ್ಯಾನ್ಸ್ ವನ್ನಾಕೆನ್ ಮೂರನೇ ಗೋಲು ಗಳಿಸುವ ಮೂಲಕ ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ನಂತರ ರೊಮೆಲು ಲುಕಾಕು ಇಂಜುರಿ ಸಮಯದಲ್ಲಿ (90+3 ನಿಮಿಷಗಳು) ನಾಲ್ಕನೇ ಗೋಲು ಗಳಿಸಿ ಬೆಲ್ಜಿಯಂನ 4-1 ಅಂತರದ ಅದ್ಭುತ ಜಯಕ್ಕೆ ಕಾರಣರಾದರು.

ಪಂದ್ಯದುದ್ದಕ್ಕೂ ಬೆಲ್ಜಿಯಂ ಸಂಘಟಿತ ಮತ್ತು ಆತ್ಮವಿಶ್ವಾಸದಿಂದ ಕೂಡಿತ್ತು. ಮತ್ತೊಂದೆಡೆ, ಸಮಬಲ ಸಾಧಿಸಿದ ನಂತರ ಯುನೈಟೆಡ್ ಸ್ಟೇಟ್ಸ್ ತನ್ನ ಲಯವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ನಿರಂತರವಾಗಿ ಒತ್ತಡದಲ್ಲಿತ್ತು. ಬೆಲ್ಜಿಯಂ ಈಗ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ಅನ್ನು ಎದುರಿಸಲಿದೆ. ಸ್ಪೇನ್​ ತಂಡ 16ರ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್ ಅನ್ನು 1-0 ಗೋಲುಗಳಿಂದ ಸೋಲಿಸಿತು.

ಅಮೆರಿಕದ ಸೋಲಿನೊಂದಿಗೆ 2026ರ ಫಿಫಾ ವಿಶ್ವಕಪ್‌ನ ಮೂರು ಆತಿಥೇಯ ತಂಡಗಳ ಪ್ರಯಾಣ ಕೊನೆಗೊಂಡಿದೆ. ಅಮೆರಿಕ ಜೊತೆಗೆ, ಕೆನಡಾ ಮತ್ತು ಮೆಕ್ಸಿಕೊ ಪಂದ್ಯಾವಳಿಯ ಸಹ-ಆತಿಥೇಯ ರಾಷ್ಟ್ರಗಳಾಗಿದ್ದವು. ಮೂರೂ ತಂಡಗಳು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸೋಲನ್ನು ಕಂಡವು. ಕೆನಡಾ, ಮೊರಾಕೊ ವಿರುದ್ಧ ಸೋತರೆ, ಮೆಕ್ಸಿಕೊ ಇಂಗ್ಲೆಂಡ್ ವಿರುದ್ಧ ಸೋಲನ್ನು ಅನುಭವಿಸಿತು. ಇದೀಗ ಅಮೆರಿಕ ಬೆಲ್ಜಿಯಂ ವಿರುದ್ಧ ಸೋಲನ್ನು ಕಂಡಿದೆ.

ಕ್ವಾರ್ಟರ್​ ಫೈನಲ್​ಗೆ 6 ತಂಡಗಳು: ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೆಲ ತಂಡಗಳು 16ರ ಘಟ್ಟದಲ್ಲಿ ಗೆಲುವು ಸಾಧಿಸಿ ಇದೀಗ ಕ್ವಾರ್ಟರ್​​ ಫೈನಲ್​ಗೆ ಮುನ್ನಡೆದಿವೆ. ಇವುಗಳಲ್ಲಿ ಮೊರಾಕೊ, ಇಂಗ್ಲೆಂಡ್​, ಬೆಲ್ಜಿಯಂ, ಫ್ರಾನ್ಸ್​, ನಾರ್ವೆ, ಸ್ಪೇನ್​ ತಂಡಗಳು ಮುಂದಿನ ಹಂತಕ್ಕೆ ಮುನ್ನಡೆದಿವೆ. ಇನ್ನು ನಾಲ್ಕು ತಂಡಗಳ ನಡುವಿನ ಪಂದ್ಯ ಫಲಿತಾಂಶ ಬಾಕಿ ಇದೆ. ಇಂದು ಅರ್ಜೆಂಟೀನಾ ಮತ್ತು​ ಈಜಿಪ್ಟ್​ ತಂಡಗಳು ಮುಖಾಮುಖಿ ಆಗಲಿದ್ದು ನಾಳೆ ಸ್ವಿಟ್ಜರ್ಲೆಂಡ್​ ಮತ್ತು ಕೊಲಂಬಿಯಾ ತಂಡಗಳು ಸೆಣಸಲಿವೆ. ಇದರೊಂದಿಗೆ 16ನೇ ಸುತ್ತಿನ ಪಂದ್ಯಗಳು ಮುಕ್ತಾಯಗೊಳ್ಳಿವೆ.

ಗೋಲ್ಡನ್​ ಬೂಟ್​ ಸ್ಪರ್ಧೆ: ಪ್ರಸ್ತುತ ನಡೆಯುತ್ತಿರುವ 2026ರ ಫಿಫಾ ವಿಶ್ವಕಪ್‌ನಲ್ಲಿ ಮೂವರು ಆಟಗಾರರ ಮಧ್ಯೆ ಗೋಲ್ಡನ್​ ಬೂಟ್​ ಸ್ಪರ್ಧೆ ತೀವ್ರಗೊಂಡಿದೆ. ಲಿಯೋನೆಲ್​ ಮೆಸ್ಸಿ ಮತ್ತು ಕೆಲಿಯನ್​ ಎಂಬಪ್ಪೆ ತಲಾ 9 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಂತರ ಏಳು ಗೋಲುಗಳನ್ನು ಗಳಿಸಿರುವ ನಾರ್ವೆಯ ಎರ್ಲಿಂಗ್​ ಹಾಲೆಂಡ್​ ಗೋಲ್ಡನ್​ ಬೂಟ್​ ರೇಸ್​ನಲ್ಲಿ 3ನೇ ಸ್ಥಾನಕ್ಕೆ ತಲುಪಿದ್ದಾರೆ.

ಇದನ್ನೂ ಓದಿ: ಪೋರ್ಚುಗಲ್​ ಟ್ರೋಫಿ ಕನಸು ಭಗ್ನ: ಕಣ್ಣೀರಿನೊಂದಿಗೆ ವಿಶ್ವಕಪ್​ಗೆ ರೊನಾಲ್ಡೊ ವಿದಾಯ !!