"ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ಭಾರತಕ್ಕೆ ಪ್ರಯಾಣ ಬೆಳೆಸಲ್ಲ"; ಬಾಂಗ್ಲಾ ಕ್ರಿಕೆಟ್ ಮಂಡಳಿ
ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ಭಾರತಕ್ಕೆ ಪ್ರಯಾಣ ಬೆಳೆಸದಿರಲು ಬಾಂಗ್ಲಾದೇಶ ನಿರ್ಧರಿಸಿದೆ ಎಂದು ಬಾಂಗ್ಲಾ ಕ್ರೀಡಾ ಸಲಹೆಗಾರ ತಿಳಿಸಿದ್ದಾರೆ.


Published : January 4, 2026 at 4:57 PM IST
ಟಿ20 ವಿಶ್ವಕಪ್ ಪ್ರಾರಂಭಕ್ಕೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಇದಕ್ಕೂ ಮೊದಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿಶ್ವಕಪ್ ಪಂದ್ಯಗಳನ್ನು ಆಡಲು ಭಾರತಕ್ಕೆ ಪ್ರಯಾಣ ಬೆಳೆಸಲ್ಲ ಎಂದು ತಿಳಿಸಿದೆ. ಐಪಿಎಲ್ 2026ರ ಮಿನಿ ಹರಾಜಿನಲ್ಲಿ ₹9.2 ಕೋಟಿಗೆ ಕೆಕೆಆರ್ ತಂಡದ ಪಾಲಾಗಿದ್ದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಲ್ಲಿ ಆಡಿಸದಂತೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೆ ಅವರನ್ನು ರಿಲೀಸ್ ಮಾಡಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.
ನಿನ್ನೆ ದಿನ 2026ರ ಟಿ20 ವಿಶ್ವಕಪ್‌ನಲ್ಲಿ, ಭಾರತದಲ್ಲಿ ನಡೆಯಲಿರುವ ತಮ್ಮ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಲು, ಐಸಿಸಿಗೆ ಮನವಿ ಮಾಡುವಂತೆ ಬಾಂಗ್ಲಾದೇಶ ಸರ್ಕಾರ ತಮ್ಮ ಮಂಡಳಿಗೆ ಸೂಚಿಸಿತ್ತು ಎಂದು ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಮಾಹಿತಿ ಹಂಚಿಕೊಂಡಿದ್ದರು. ನಜ್ರುಲ್ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದರು. "ಕ್ರೀಡಾ ಸಚಿವಾಲಯದ ಉಸ್ತುವಾರಿ ಸಲಹೆಗಾರನಾಗಿ, ಮುಸ್ತಾಫಿಜುರ್ ಅವರನ್ನು ಐಪಿಎಲ್ 2026 ರಿಂದ ಕೈಬಿಡಲು ಕಾರಣ ಏನು ಎಂಬ ಸಂಪೂರ್ಣ ವಿಷಯವನ್ನು ಐಸಿಸಿಗೆ ಲಿಖಿತವಾಗಿ ವಿವರಿಸುವಂತೆ ಭಾರತೀಯ ಕ್ರಿಕೆಟ್ ಮಂಡಳಿಗೆ ಕೇಳಿದ್ದೇವೆ.
ಅಲ್ಲದೇ, ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಜುರ್ ರೆಹಮಾನ್ ಒಪ್ಪಂದವನ್ನು ವಾಪಸ್ ಪಡೆದರೆ, ಅವರು ಭಾರತದಲ್ಲಿ ಐಪಿಎಲ್ ಆಡಲು ಸಾಧ್ಯವಾಗದಿದ್ದರೆ, ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ಬಾಂಗ್ಲಾ ಆಟಗಾರರಿಗೆ ಸುರಕ್ಷಿತವಲ್ಲ ಎಂದು ಬಿಸಿಬಿ, ಐಸಿಸಿಗೆ ತಿಳಿಸಬೇಕು ಎಂದು ನಜ್ರುಲ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದರು. ಇದೇ ವಿಚಾರವಾಗಿ ಇಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ತುರ್ತು ಸಭೆ ನಡೆಸಿ, ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಯಾಣ ಬೆಳೆಸಲ್ಲ ಎಂದು ನಿರ್ಣಯಿಸಿದ್ದಾಗಿ ನಜ್ರುಲ್ ಖಚಿತಪಡಿಸಿದ್ದಾರೆ.
ಬಿಸಿಸಿಐ ಹೇಳಿದ್ದೇನು?: ಆದರೆ, ಟೂರ್ನಿ ಆರಂಭವಾಗಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇರುವ ಕಾರಣ ಸ್ಥಳ ಬದಲಾವಣೆ ಕಷ್ಟವೆಂದು ಬಿಸಿಸಿಐ ಮೂಲಗಳು ತಿಳಿಸಿವೆ. "ತಮ್ಮಿಚ್ಛೆಯಂತೆ ಸ್ಥಳಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಹಠಾತ್ ಬದಲಾವಣೆಯಿಂದಾಗಿ ಪ್ರಯಾಣದಲ್ಲಿ ಅನೇಕ ತೊಂದರೆಗಳು ಎದುರಾಗಲಿವೆ. ಇಲ್ಲಿ ಕೇವಲ ಬಾಂಗ್ಲಾದೇಶ ವೇಳಾಪಟ್ಟಿ ಮಾತ್ರವಲ್ಲಿ ಇದರ ಜೊತೆಗೆ ಆಡುವ ಇತರ ತಂಡಗಳ ಬಗ್ಗೆಯೂ ಯೋಚಿಸಿಬೇಕಾಗುತ್ತದೆ".
"ಈಗಾಗಲೇ ಅವರ ವಿಮಾನ ಟಿಕೆಟ್‌ಗಳು ಮತ್ತು ಹೋಟೆಲ್‌ಗಳನ್ನು ಮುಂಗಡ ಕಾಯ್ದಿರಿಸಲಾಗಿದೆ. ಪಂದ್ಯಾವಳಿಯ ಲೀಗ್ ಹಂತವು ಪ್ರತಿ ದಿನ ಮೂರು ಪಂದ್ಯಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಪಾಕ್ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯುತ್ತವೆ. ಇದೊಂದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದೀಗ ಬಾಂಗ್ಲಾ ಪಂದ್ಯಗಳನ್ನು ಅಲ್ಲೇ ನಡೆಸಬೇಕೆಂದರೆ ಪ್ರಸಾರಕ್ಕೂ ಸಮಸ್ಯೆಯಾಗಲಿದೆ. ಹಾಗಾಗಿ ಪಂದ್ಯಗಳನ್ನು ಬದಲಾಯಿಸುವುದು ಅಂದುಕೊಂಡಷ್ಟು ಸುಲಭವಲ್ಲ" ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿವೆ.
ಬಾಂಗ್ಲಾ ವೇಳಾಪಟ್ಟಿ: ಫೆಬ್ರವರಿ 7 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಲಿದ್ದು, ನಿಗದಿತ ವೇಳಾಪಟ್ಟಿ ಪ್ರಕಾರ ಬಾಂಗ್ಲಾದೇಶವು ಭಾರತದಲ್ಲಿ ಗುಂಪು ಹಂತದಲ್ಲಿ ನಾಲ್ಕು ಪಂದ್ಯಗಳನ್ನು ಆಡಬೇಕಿದೆ. ಫೆಬ್ರವರಿ 7 ರಂದು ವೆಸ್ಟ್ ಇಂಡೀಸ್ ವಿರುದ್ಧ, ಫೆಬ್ರವರಿ 9 ರಂದು ಇಟಲಿ, ಫೆಬ್ರವರಿ 14 ರಂದು ಇಂಗ್ಲೆಂಡ್ ಮತ್ತು ಫೆಬ್ರವರಿ 17 ರಂದು ನೇಪಾಳ ವಿರುದ್ಧ ಆಡಬೇಕಿದೆ. ಈ ಪಂದ್ಯಗಳ ಈಡನ್ ಗಾರ್ಡನ್ ಮತ್ತು ವಾಂಖೆಡೆಯಲ್ಲಿ ನಡೆಯಲಿವೆ.
ಇದನ್ನೂ ಓದಿ: ಸಚಿನ್ ದಾಖಲೆ ಸರಿಗಟ್ಟಲು ಒಂದು ಹೆಜ್ಜೆ ದೂರದಲ್ಲಿ ರೂಟ್!

