ETV Bharat / sports

ಮೂರನೇ ಬಾರಿಗೆ ಹಾಕಿ ವಿಶ್ವಕಪ್ ಗೆದ್ದ ಅರ್ಜೆಂಟೀನಾ; ಸತತ ನಾಲ್ಕನೇ ಟ್ರೋಫಿ ಗೆಲ್ಲುವ ನೆದರ್ಲ್ಯಾಂಡ್ಸ್ ಕನಸು ಭಗ್ನ!!

ಶನಿವಾರ ನಡೆದ ಮಹಿಳಾ ಹಾಕಿ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಸಹ-ಆತಿಥೇಯ ನೆದರ್ಲ್ಯಾಂಡ್ಸ್ ಅನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಹಾಕಿ ವಿಶ್ವಕಪ್​ ಗೆದ್ದುಕೊಂಡ ಅರ್ಜೆಂಟೀನಾ
ಹಾಕಿ ವಿಶ್ವಕಪ್​ ಗೆದ್ದುಕೊಂಡ ಅರ್ಜೆಂಟೀನಾ (FIH)
author img

By ETV Bharat Sports Team

Published : August 30, 2026 at 8:50 AM IST

2 Min Read
Choose ETV Bharat

Womens Hockey World Cup 2026: ಶನಿವಾರ ನಡೆದ ಮಹಿಳಾ ಹಾಕಿ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಸಹ-ಆತಿಥೇಯ ನೆದರ್ಲ್ಯಾಂಡ್ಸ್ ತಂಡವನ್ನು 3-1 ಅಂತರದಿಂದ ಮಣಿಸುವ ಮೂಲಕ ಮೂರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರೊಂದಿಗೆ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿತು ಮತ್ತು ಸತತ ನಾಲ್ಕನೇ ಬಾರಿಗೆ ಚಾಂಪಿಯನ್​ ಆಗುವ ಡಚ್ಚರ ಕನಸನ್ನು ಭಗ್ನಗೊಳಿಸಿತು.

ನೆದರ್ಲ್ಯಾಂಡ್ಸ್ ಹಿಂದಿನ ವಿಶ್ವಕಪ್‌ನಲ್ಲಿ ಅರ್ಜೆಂಟೀನಾವನ್ನು 3-1 ಅಂತರದಿಂದ ಸೋಲಿಸಿತ್ತು. ಗಮನಾರ್ಹವಾಗಿ, ಅರ್ಜೆಂಟೀನಾ 2002 ಮತ್ತು 2010 ರಲ್ಲಿ ನೆದರ್ಲ್ಯಾಂಡ್ಸ್ ಅನ್ನು ಸೋಲಿಸುವ ಮೂಲಕ ತಮ್ಮ ಹಿಂದಿನ ಪ್ರಶಸ್ತಿಗಳನ್ನು ಗೆದ್ದಿತ್ತು, ಆದರೆ ಒಂಬತ್ತು ಬಾರಿಯ ಚಾಂಪಿಯನ್‌ಗಳು ಈ ಬಾರಿ ಹತ್ತನೇ ಪ್ರಶಸ್ತಿಯನ್ನು ಕಳೆದುಕೊಂಡರು.

ಫೈನಲ್​ ಹೈಲೈಟ್ಸ್​

ನೆದರ್ಲ್ಯಾಂಡ್ಸ್ ಆಮ್ಸ್ಟೆಲ್ವೀನ್‌ನಲ್ಲಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 1-1 ಗೋಲು ಗಳಿಸಿದವು. ಜಾನ್ಸೆನ್ ವೈಬಿ 30ನೇ ನಿಮಿಷದಲ್ಲಿ ಪರವಾಗಿ ಗೋಲು ಗಳಿಸಿದರೆ, ಗ್ರಾನಟೊ ಮಾರಿಯಾ 54ನೇ ನಿಮಿಷದಲ್ಲಿ ಅರ್ಜೆಂಟೀನಾ ಪರವಾಗಿ ಗೋಲು ಗಳಿಸಿದರು. ಪಂದ್ಯದ ಮೊದಲ ಕ್ವಾರ್ಟರ್ ಗೋಲುರಹಿತವಾಗಿ ಕೊನೆಗೊಂಡಿತು. ಎರಡನೇ ಕ್ವಾರ್ಟರ್‌ನಲ್ಲಿ ನೆದರ್ಲ್ಯಾಂಡ್ಸ್ ಪಂದ್ಯದ ಮೊದಲ ಗೋಲು ಗಳಿಸಿತು. ನಂತರ ಮೂರನೇ ಕ್ವಾರ್ಟರ್ ಕೂಡ ಗೋಲು ಗೋಲುರಹಿತವಾಗಿತ್ತು. ನಾಲ್ಕನೇ ಮತ್ತು ಅಂತಿಮ ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾ ತಂಡ ಒಂದು ಗೋಲು ಗಳಿಸಿ ಪಂದ್ಯವನ್ನು 1-1 ಸಮಬಲಗೊಳಿಸಿತು. ಪೂರ್ಣಾವಧಿಯವರೆಗೆ ಸ್ಕೋರ್ 1-1 ಆಗಿಯೇ ಇತ್ತು ಇದರಿಂದಾಗಿ ಪಂದ್ಯ ಪೆನಾಲ್ಟಿ ಶೂಟೌಟ್ ಮುನ್ನಡೆಯಿತು. ಈ ಪಂದ್ಯದಲ್ಲಿ ಅರ್ಜೆಂಟೀನಾ ಎಂಟು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡರೆ, ನೆದರ್ಲ್ಯಾಂಡ್ಸ್ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದಿತ್ತು.

ಪೆನಾಲ್ಟಿ ಶೂಟೌಟ್ ಹೀಗಿತ್ತು

ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ಪರ ವಿಕ್ಟೋರಿಯಾ ಗ್ರಾನಟೊ, ಬ್ರಿಸಾ ಬ್ರಗ್ಗೆಸ್ಸರ್ ಮತ್ತು ಸೋಫಿಯಾ ಕೈರೋ ಗೋಲು ಗಳಿಸಿದರು. ಡಯಾಜ್ ಜೋ ಅವರ ಗೋಲು ನಿರಾಕರಿಸಲ್ಪಟ್ಟಿತು. ನೆದರ್ಲ್ಯಾಂಡ್ಸ್ ಪರ ಏಕೈಕ ಗೋಲು ವೀನ್ ಮರಿನ್ ಅವರಿಂದ ಬಂದಿತು. ಪಿಯೆನ್ ಸ್ಯಾಂಡರ್ಸ್, ಫೆಲಿಸ್ ಆಲ್ಬರ್ಸ್ ಮತ್ತು ಮೊಯಿಸ್ ಫ್ರೀಕ್ ಪೆನಾಲ್ಟಿಯನ್ನು ತಪ್ಪಿಸಿಕೊಂಡರು. ಇದರಿಂದಾಗಿ ಅರ್ಜೆಂಟೀನಾ ಚಾಂಪಿಯನ್​ ಆಗಿ ಹೊರಹೊಮ್ಮಿತು.

ಪಂದ್ಯಾವಳಿಯಲ್ಲಿ ಅರ್ಜೆಂಟೀನಾದ ಪ್ರಯಾಣ

ಪೂಲ್ ಹಂತದಲ್ಲಿ, ಅರ್ಜೆಂಟೀನಾ ತನ್ನ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡು ಮುಂದಿನ ಹಂತಕ್ಕೆ ಮುನ್ನಡೆಯಿತು. ಹಂತ 2ರಲ್ಲಿ, ತಂಡವು ತನ್ನ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡು, ಸೆಮಿಫೈನಲ್‌ಗೆ ಸ್ಥಾನ ಖಚಿತ ಪಡಿಸಿಕೊಂಡಿತು. ನಂತರ ತಂಡವು ಸೆಮಿಫೈನಲ್ ಗೆದ್ದು ಫೈನಲ್‌ಗೆ ಮುನ್ನಡೆಯಿತು, ಅಂತಿಮವಾಗಿ ಫೈನಲ್‌ನಲ್ಲಿ ಬಲಿಷ್ಠ ನೆದರ್ಲ್ಯಾಂಡ್ಸ್ ಅನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇದನ್ನೂ ಓದಿ: ಮಹಿಳಾ ಏಷ್ಯಾಕಪ್ 2026: ಇಂದು ಭಾರತ ತಂಡ ಕಣಕ್ಕೆ; ಪಂದ್ಯ ಉಚಿತ ಪ್ರಸಾರ ಎಲ್ಲಿ?