ಭಾರತದ ಪೌರತ್ವ ತಿರಸ್ಕರಿಸಿದ್ದ ಗುಜರಾತ್ ಟೈಟಾನ್ಸ್ ತಂಡದ ಆಟಗಾರ: ಆಸೀಸ್ನಿಂದಲೂ ಬಂದಿತ್ತಂತೆ ಆಫರ್!
ವಿದೇಶಿ ಆಟಗಾರ, ಸದ್ಯ ಗುಜರಾತ್ ತಂಡದ ಸ್ಟಾರ್ ಆಲ್ರೌಂಡರ್ಗೆ ಭಾರತದ ನಾಗರಿಕತ್ವ ಕೊಡಿಸುವ ಆಫರ್ ಹೋಗಿತ್ತಂತೆ. ಆದರೆ, ಅದನ್ನು ಆತ ನಿರಾಕರಿಸಿದ್ದಾರಂತೆ.

By PTI
Published : April 20, 2026 at 2:16 PM IST
ನವದೆಹಲಿ: ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡುತ್ತಿರುವ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಆಡಿದ ಐದು ಪಂದ್ಯಗಳಲ್ಲಿ 3 ರಲ್ಲಿ ಗೆದ್ದು ಎರಡು ಸೋತಿದೆ. ಕಳೆದ ಮೂರು ಪಂದ್ಯಗಳಲ್ಲಿ ಅದು ಗೆಲುವು ಕಂಡು ಸದ್ಯ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಈ ಮಧ್ಯೆ ತಂಡದ ಸ್ಟಾರ್ ಆಟಗಾರ ತಾನು ಭಾರತ ನೀಡಿದ್ದ ಪೌರತ್ವ ಆಫರ್ ಅನ್ನು ತಿರಸ್ಕರಿಸಿದ್ದಾಗಿ ಹೇಳುವ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ಇದರ ಜೊತೆಗ ಆತನಿಗೆ ಆಸ್ಟ್ರೇಲಿಯಾ ಕೂಡ ಇಂಥದ್ದೇ ಆಫರ್ ನೀಡಿತ್ತು. ಆದರೆ, ನನ್ನ ದೇಶ ನಿಷ್ಠೆಗಾಗಿ ಇದನ್ನು ನಿರಾಕರಿಸಿದೆ ಎಂದು ತಿಳಿಸಿದ್ದಾರೆ.
ಹೌದು. ಭಾರತ ತನಗೆ ನಾಗರಿಕತ್ವದ ಆಫರ್ ನೀಡಿತ್ತು ಎಂದು ಹೇಳಿದ್ದು ಬೇರ್ಯಾರೂ ಅಲ್ಲ, ಅಫ್ಘಾನಿಸ್ತಾನದ ಲೆಗ್ಸ್ಪಿನ್ನರ್ ರಶೀದ್ ಖಾನ್. ಅಫ್ಘಾನಿಸ್ತಾನದಂತೆ ಭಾರತದಲ್ಲೂ ಅಭಿಮಾನಿಗಳನ್ನು ಹೊಂದಿರುವ ರಶೀದ್ ತನಗೆ ಬಂದ ಅನೌಪಚಾರಿಕ ಆಫರ್ ಅನ್ನು ತಮ್ಮ ಕುರಿತಾದ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಇಂದು (ಸೋಮವಾರ) ಬಿಡುಗಡೆಯಾಗಲಿರುವ "ರಶೀದ್ ಖಾನ್: ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್‌ಡಮ್" ಎಂಬ ಪುಸ್ತಕವನ್ನು ಲೇಖಕ ಮೊಹಮ್ಮದ್ ಹಾಂಡ್ ಜಾಫರ್ ಅವರು ಬರೆದಿದ್ದಾರೆ. ಅದರಲ್ಲಿ ಅಫ್ಘಾನ್ ಸ್ಟಾರ್ ಆಲ್ರೌಂಡರ್ಗೆ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು ನಾಗರಿಕತ್ವದ ಆಫರ್ ನೀಡಿದ್ದವು ಎಂದು ಬರೆದಿದ್ದಾರೆ.
ಪುಸ್ತಕದಲ್ಲಿ ರಶೀದ್ ಹೇಳಿದ್ದೇನು? "ನನಗೆ ಆಸ್ಟ್ರೇಲಿಯಾ ಮತ್ತು ಭಾರತ ಎರಡರಿಂದಲೂ ಪೌರತ್ವ ಮತ್ತು ತಂಡದಲ್ಲಿ ಸ್ಥಾನ ನೀಡುವ ಬಗ್ಗೆ ಅನೌಪಚಾರಿಕ ಆಫರ್ ನೀಡಿದ್ದವು. ಆದರೆ, ನಾನು ಇದನ್ನು ನಯವಾಗಿ ನಿರಾಕರಿಸಿದೆ. ನನ್ನ ದೇಶ (ಅಫ್ಘಾನ್ ನಿಸ್ತಾನ) ಬಿಟ್ಟು ಬೇರೆ ಯಾವುದೇ ದೇಶದ ಪರ ಆಡುವುದಿಲ್ಲ' ಎಂದು ರಶೀದ್ ಖಾನ್ ಪುಸ್ತಕದಲ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲವಾದರೂ, ಭಾರತದಿಂದ ತನಗೆ 2023 ರ ಐಪಿಎಲ್ ಋತುವಿನ ವೇಳೆ ಆಫರ್ ಬಂದಿತ್ತು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಐಪಿಎಲ್ ನಡುವೆ ಭಾರತೀಯ ಕ್ರಿಕೆಟ್ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ತಮ್ಮನ್ನು ಭೇಟಿಯಾಗಲು ಬಯಸಿದ್ದಾರೆಂದು ತಮ್ಮ ತಂಡದ ಅಧಿಕಾರಿಯೊಬ್ಬರು ತಿಳಿಸಿದರು. ಬಳಿಕ, ನಾನು ಅವರನ್ನು ಭೇಟಿಯಾದೆ. ಮಾತಿನ ಮಧ್ಯೆ ನನಗೆ ಅವರು, 'ನಿಮ್ಮ ದೇಶದಲ್ಲಿ (ಅಫ್ಘಾನಿಸ್ತಾನ) ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಭಾರತಕ್ಕೆ ಬನ್ನಿ. ಇಲ್ಲಿಯೇ ವಾಸಿಸಿ. ನಿಮಗೆ ನಾವು ಭಾರತೀಯ ದಾಖಲೆಗಳನ್ನು ನೀಡುತ್ತೇವೆ. ಇಲ್ಲಿಯೇ ಕ್ರಿಕೆಟ್ ಆಡಬಹುದು ಎಂದರು.
ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಆದರೂ, ಮುಗುಳ್ನಗುತ್ತಾ, 'ತುಂಬಾ ಧನ್ಯವಾದಗಳು. ನಾನು ನನ್ನ ದೇಶಕ್ಕಾಗಿ ಮಾತ್ರ ಆಡುತ್ತೇನೆ. ಬೇರೆ ದೇಶದ ಪರ ಆಡಲಾರೆ ಎಂದು ನಯವಾಗಿ ನಿರಾಕರಿಸಿದೆ' ಎಂದು ಸದ್ಯ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ರಶೀದ್ ಪುಸ್ತಕದಲ್ಲಿ ನಮೂದಿಸಿದ್ದಾರೆ.
ಫ್ಯಾನ್ಸ್ಗಳಿಂದಲೂ ಒತ್ತಡ ಬಂದಿತ್ತು: ಪುಸ್ತಕದಲ್ಲಿ ಇನ್ನೊಂದು ಮಹತ್ವದ ಅಂಶವನ್ನು ಉಲ್ಲೇಖಿಸಲಾಗಿದೆ. 2018 ರಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವಾಗ, 10 ಎಸೆತಗಳಲ್ಲಿ 34 ರನ್, ಬೌಲಿಂಗ್ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದು ಪಂದ್ಯಶ್ರೇಷ್ಠ ಪಡೆದೆ. ಆಗ, ಭಾರತದಲ್ಲಿನ ನನ್ನ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಿದರು. ಭಾರತ ಸರ್ಕಾರ ನನಗೆ ಪೌರತ್ವ ನೀಡಬೇಕೆಂದು ಅದರಲ್ಲಿ ಒತ್ತಾಯಿಸಿದರು. ಆಗಿನ ವಿದೇಶಾಂಗ ಸಚಿವೆಯಾಗಿದ್ದ ದಿವಂಗತ ಸುಷ್ಮಾ ಸ್ವರಾಜ್ ಅವರನ್ನು ಸಹ ಟ್ಯಾಗ್ ಮಾಡಿದ್ದರು.
ಈ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿದ್ದ ಸುಷ್ಮಾ ಸ್ವರಾಜ್ ಅವರು, "ನಾನು ನಿಮ್ಮ ಎಲ್ಲಾ ಟ್ವೀಟ್‌ಗಳನ್ನು ನೋಡಿದೆ. ಆದರೆ, ಪೌರತ್ವದ ವಿಷಯ ಗೃಹ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ ಎಂದಿದ್ದರು. ಇದಕ್ಕೆ ಆಗಿನ ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಅವರು ಪ್ರತಿಕ್ರಿಯಿಸಿ, ರಶೀದ್ ಅವರು ನಮ್ಮ ರಾಷ್ಟ್ರದ ಹೆಮ್ಮೆ. ಅವರನ್ನು ಬೇರೆ ದೇಶಕ್ಕೆ ನೀಡಲು ಸಾಧ್ಯವಿಲ್ಲ ಎಂದಿದ್ದಾಗಿ ರಶೀದ್ ಪುಸ್ತಕದಲ್ಲಿ ತಿಳಿಸಿದ್ದಾರೆ.
ಪುಸ್ತಕದಲ್ಲಿದೆ ರಶೀದ್ ಏಳು-ಬೀಳು: 'ರಶೀದ್ ಖಾನ್: ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್‌ಡಮ್' ಪುಸ್ತಕವು ಇಂದು (ಎಪ್ರಿಲ್ 20) ಬಿಡುಗಡೆಯಾಗಲಿದೆ. ಇದರಲ್ಲಿ ಕ್ರಿಕೆಟಿನ ಆರಂಭಿಕ ಜೀವನ, ತಂಡ ಸೇರಲು ಪಟ್ಟ ಶ್ರಮ. ಅಂಡರ್ -19 ಟ್ರಯಲ್ಸ್ನಲ್ಲಿ ಕಡೆಗಣನೆ. ಬಳಿಕ ರಾಷ್ಟ್ರೀಯ ತಂಡದ ಆಸ್ತಿಯಾಗಿ ರೂಪುಗೊಂಡ ಬಗೆ ಸೇರಿದಂತೆ ನಾನಾ ವಿಷಯಗಳು ಅದರಲ್ಲಿ ಅಡಕವಾಗಿವೆ. ಇದನ್ನು ಬ್ಲೂಮ್ಸ್‌ಬರಿ ಇಂಡಿಯಾ ಪ್ರಕಟಿಸಿದೆ.
ಇವುಗಳನ್ನೂ ಓದಿ:

