ETV Bharat / sports

ಅಭಿಷೇಕ್ ಶರ್ಮಾ ಅಬ್ಬರದ ಶತಕ: ಡೆಲ್ಲಿ ವಿರುದ್ಧ ಹೈದರಾಬಾದ್‌ ಭರ್ಜರಿ ಗೆಲುವು

ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು 47 ರನ್‌ ಗೆಲುವು ಸಾಧಿಸಿದೆ.

Abhishek smashes classy ton as SRH crush DC by 47 runs
ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆಟಗಾರ ಅಭಿಷೇಕ್ ಶರ್ಮಾ ಬಾಲ್​ ಅನ್ನು ಬೌಂಡರಿಗೆ ಅಟ್ಟುತ್ತಿದ್ದಾರೆ. (IANS)
author img

By PTI

Published : April 22, 2026 at 10:17 AM IST

2 Min Read
Choose ETV Bharat

ಹೈದರಾಬಾದ್: ಎಡಗೈ ಆಟಗಾರ ಅಭಿಷೇಕ್ ಶರ್ಮಾ ಅವರ ಅಜೇಯ ಶತಕ (135 ರನ್) ಮತ್ತು ಇಶಾನ್ ಮಾಲಿಂಗ ಅವರ ಮಾರಕ ಬೌಲಿಂಗ್ ಸಹಾಯದಿಂದ ಸನ್ ರೈಸರ್ಸ್ ಹೈದರಾಬಾದ್‌ ತಂಡವು ಮಂಗಳವಾರ ನಡೆದ ಐಪಿಎಲ್​ನ 31ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್​ಗಳಿಂದ ಮಣಿಸಿತು. ಟೂರ್ನಿಯಲ್ಲಿ 4ನೇ ಜಯ ಕಂಡ ಹೈದರಾಬಾದ್‌ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ಡೆಲ್ಲಿ 3ನೇ ಸೋಲುಂಡಿತು.

ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 242 ರನ್​ಗಳ ಬೃಹತ್ ಮೊತ್ತವನ್ನು ಪೇರಿಸಿತು. ಇದಕ್ಕೆ ಉತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಷ್ಟೇ ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 195 ರನ್ ಗಳಿಸಲಷ್ಟೇ ಶಕ್ತವಾಯಿತು.

ಅಭಿಷೇಕ್ ಶರ್ಮಾ ಅಬ್ಬರದ ಶತಕ: ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್​ ಐಪಿಎಲ್​ ಅಭಿಮಾನಿಗಳಿಗೆ ಮನರಂಜನೆ ನೀಡಿತು. ಟ್ರ್ಯಾವಿಡ್‌ ಹೆಡ್‌ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ, 68 ಎಸೆತಗಳನ್ನು ಎದುರಿಸುವ ಮೂಲಕ 10 ಸಿಕ್ಸ್​ ಮತ್ತು 10 ಬೌಂಡರಿ ಸಹಿತ 135 ರನ್​ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಟ್ರ್ಯಾವಿಡ್‌ ಹೆಡ್‌(35), ಇಶಾನ್‌ (25) ಮತ್ತು ಹೆನ್ರಿಕ್ ಕ್ಲಾಸೆನ್ ಅವರ ಬ್ಯಾಟಿಂಗ್​ ನೆರವಿನಿಂದ ರೈಸರ್ಸ್ ಹೈದರಾಬಾದ್‌ ತಂಡವು 242 ರನ್​ಗಳ ಬೃಹತ್ ಮೊತ್ತ ಗಳಿಸಿತು.

ಸನ್‌ರೈಸರ್ಸ್‌ ನೀಡಿದ್ದ 243 ರನ್‌ಗಳ ದೊಡ್ಡ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಶ್ರೀಲಂಕಾದ ವೇಗಿ ಇಶಾನ್‌ ಮಾಲಿಂಗ ಪರಿಣಾಮಕಾರಿ ಬೌಲಿಂಗ್‌ ಮೂಲಕ ಕಡಿವಾಣ ಹಾಕಿದರು. ಆಲ್‌ರೌಂಡರ್‌ ನಿತೀಶ್‌ ರಾಣಾ ಅರ್ಧಶತಕ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್‌ಗಳು ದೀರ್ಘ ಇನ್ನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಆರಂಭಿಕರಾಗಿ ಕಣಕ್ಕಿಳಿದ ಪಾಥುಮ್ ನಿಸ್ಸಂಕಾ 8 ರನ್‌ಗಳಿಗೆ ಔಟಾದರೆ, ವಿಕೆಟ್​ ಕೀಪರ್​ ಕೆಎಲ್ ರಾಹುಲ್ 37, ಇಂಪ್ಯಾಕ್ಟ್‌ ಸಬ್‌ಸ್ಟಿಟ್ಯೂಟ್‌ ಸಮೀರ್ ರಿಜ್ವಿ 41, ಟ್ರಿಸ್ಟಾನ್ ಸ್ಟಬ್ಸ್ 27, ಅಶುತೋಷ್ ಶರ್ಮಾ ಮತ್ತು ನಾಯಕ ಅಕ್ಷರ್ ಪಟೇಲ್ 2 ಹಾಗೂ ಕುಲದೀಪ್ ಯಾದವ್ ಔಟ್ ಆಗದೇ 1 ರನ್​ ಗಳಿಸಿದರು. 9 ವಿಕೆಟ್‌ಗಳಿಗೆ 195 ರನ್ ಗಳಿಸಿದ ಡೆಲ್ಲಿ ತಂಡ ಓವರ್ ಪೂರೈಸಿತು.

ತಮ್ಮ ಈ ದಿನದ ಉತ್ತಮ ಇನ್ನಿಂಗ್ಸ್​ ಕುರಿತು ಮಾತನಾಡಿದ ಅಭಿಷೇಕ್ ಶರ್ಮಾ, ಸನ್‌ರೈಸರ್ಸ್ ಹೈದರಾಬಾದ್​ ತಂಡ ನೀಡಿದ ಸ್ವಾತಂತ್ರ್ಯ ಮತ್ತು ಅವಕಾಶಗಳು ನಾನು ಈ ಮಟ್ಟಕ್ಕೆ ಏರಲು ಕಾರಣ ಎಂದು ತಿಳಿಸಿದರು.

2024ರ ಐಪಿಎಲ್​ ಸೀಸನ್​ ನನ್ನ ಆಟದಲ್ಲಿ ಗಮನಾರ್ಹ ಬದಲಾವಣೆ ತಂದಿತು. ಅಂದಿನಿಂದ ತಂಡದಲ್ಲಿನ ವಾತಾವರಣವು ತುಂಬಾ ಉತ್ತಮವಾಗಿದೆ. ಯಶಸ್ಸನ್ನು ಮಾತ್ರವಲ್ಲದೆ, ಸೋತಾಗಲೂ ಹುಡುಗರನ್ನು ಪ್ರೋತ್ಸಾಹಿಸಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ. ಈ ಪಂದ್ಯದ ಆರಂಭದಲ್ಲಿ ರನ್​ ಗಳಿಕೆಗೆ ಸ್ವಲ್ಪ ನಿಧಾನವಾಯಿತಾದರೂ ಕ್ರಮೇಣ ಸುಧಾರಿಸಿತು ಎಂದು ಶತಕದ ಕುರಿತು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: ಭಾರತದ ಪೌರತ್ವ ತಿರಸ್ಕರಿಸಿದ್ದ ಗುಜರಾತ್​ ಟೈಟಾನ್ಸ್​ ತಂಡದ ಆಟಗಾರ: ಆಸೀಸ್​​ನಿಂದಲೂ ಬಂದಿತ್ತಂತೆ ಆಫರ್​!