ETV Bharat / opinion

ಇರಾನ್​ - ಅಮೆರಿಕದ ನಡುವೆ 'ಶಾಂತಿ' ಮಂತ್ರ: ಆದರೆ, ಅಡಕತ್ತರಿಯಲ್ಲಿ ಸಿಲುಕಿರುವ 'ನಂಬಿಕೆ'ಯ ಅಂಶ

ಇರಾನ್​ ಮತ್ತು ಅಮೆರಿಕದ ನಡುವೆ ಶಾಂತಿ ಒಪ್ಪಂದ ಘೋಷಣೆಯಾಗಿದೆ. ಇದಕ್ಕೆ ಜಿನೇವಾದಲ್ಲಿ ಜೂನ್​ 19 ರಂದು ಅಂತಿಮ ಮುದ್ರೆ ಬೀಳುವ ಸಾಧ್ಯತೆಯಿದೆ. ಈ 'ಶಾಂತಿ ಮಂತ್ರ'ದ ಒಳ - ಹೊರವು ಏನು ಎಂಬುದು ಇಲ್ಲಿದೆ.

US IRAN PEACE DEAL
ಸಾಂದರ್ಭಿಕ ಚಿತ್ರ (AP)
author img

By Achal Malhotra

Published : June 16, 2026 at 6:27 PM IST

4 Min Read
Choose ETV Bharat

ಇಂದು ಆಗುತ್ತೆ, ಅಂದು ಆಗುತ್ತೆ ಅಂತ ನಿತ್ಯವೂ ಮುಂದೂಡುತ್ತಲೇ ಬಂದಿದ್ದ ಅಮೆರಿಕ ಮತ್ತು ಇರಾನ್​ ನಡುವಣ ಕದನ ವಿರಾಮ ಶಾಂತಿ ಮಾತುಕತೆಯು ಕಡೆಗೂ ಯುದ್ಧ ಆರಂಭವಾಗಿ 107 ದಿನಗಳ ನಂತರ ವರ್ಚುಯಲ್​ ಆಗಿ ಏರ್ಪಟ್ಟಿದೆ. ಶಾಂತಿ ಒಪ್ಪಂದದ ಕುರಿತು ಒಮ್ಮತಕ್ಕೆ ಬಂದಿದ್ದಾಗಿ ಅಮೆರಿಕ ಮತ್ತು ಇರಾನ್​ ಘೋಷಿಸಿದ್ದರೂ, ಇದಕ್ಕೆ ಅಧಿಕೃತ ಮುದ್ರೆ ಬೀಳುವುದು ಜೂನ್​ 19ರ ಜಿನೀವಾ ಸಭೆಯಲ್ಲಿ.

14 ಅಂಶಗಳ ಒಪ್ಪಂದ ಇದಾಗಿದೆ ಎಂದು ಹೇಳಲಾಗಿದೆ. ಆದರೆ, ಅವು ಯಾವುವು ಎಂಬುದನ್ನು ಎರಡೂ ರಾಷ್ಟ್ರಗಳು ಪ್ರಕಟಿಸಿಲ್ಲ. ಮಾಧ್ಯಮಗಳ ವರದಿಯ ಪ್ರಕಾರ, ಈ ಪ್ರಸ್ತಾವಿತ ತಿಳಿವಳಿಕಾ ಪತ್ರವು (ಎಂಒಯು) ಕೆಲವು ಪ್ರಮುಖ ವಿಷಯಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಅವುಗಳೆಂದರೆ..

ಅಮೆರಿಕ, ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧದ ಘಟನಾವಳಿಗಳು
ಅಮೆರಿಕ, ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧದ ಘಟನಾವಳಿಗಳು (ETV Bharat Graphics)
  • ಅಮೆರಿಕ - ಇರಾನ್​ ನಡುವೆ ಶತ್ರುತ್ವಕ್ಕೆ ಶಾಶ್ವತ ತೆರೆ
  • ಹಾರ್ಮುಜ್​ ಜಲಸಂಧಿ ಮೇಲಿನ ಅಮೆರಿಕದ ದಿಗ್ಬಂಧನ ತೆರವು
  • ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತ
  • ಇರಾನ್​ ಮೇಲೆ ಅಮೆರಿಕ ಹಾಕಿರುವ ನಿರ್ಬಂಧ ತೆರವು
  • ಮುಟ್ಟುಗೋಲು ಹಾಕಿಕೊಳ್ಳಲಾದ ಇರಾನ್​ ಆಸ್ತಿಗಳ ಬಿಡುಗಡೆ
  • ಯುದ್ಧದಿಂದ ಹಾನಿಗೊಳಗಾದ ಇರಾನ್​ ಪುನರ್​​ನಿರ್ಮಾಣಕ್ಕೆ 300 ಬಿಲಿಯನ್​ ಡಾಲರ್​ ನೆರವು
  • ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ಉಪಸ್ಥಿತಿಯ ಗಾತ್ರ
  • ಇರಾನ್​​ನ ಪರಮಾಣು ಕಾರ್ಯಕ್ರಮದ ಭವಿಷ್ಯ?

ಈ ಮೇಲಿನ ಪ್ರಮುಖ ಅಂಶಗಳು ಹಂತ ಹಂತವಾಗಿ ಜಾರಿಗೆ ಬರುವ ಸಾಧ್ಯತೆಯಿದೆ. ಆದರೆ, ಇರಾನ್​ ಬೆಂಬಲಿತ ಪಡೆಗಳಾದ ಹಿಜ್ಬುಲ್ಲಾ, ಹಮಾಸ್​ ಮತ್ತು ಹೌತಿಗಳ ಪಾತ್ರವೇನು? ಎಂಬುದು ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಮೆರಿಕ, ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧದ ಘಟನಾವಳಿಗಳು
ಅಮೆರಿಕ, ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧದ ಘಟನಾವಳಿಗಳು (ETV Bharat Graphics)

ಪರಮಾಣು ಬಾಂಬ್​ ಯೋಜನೆ ಕೈಬಿಡುತ್ತಾ ಇರಾನ್​? ಮೇಲ್ನೋಟಕ್ಕೆ ಈ ಒಪ್ಪಂದವು ಜಾರಿ ಮತ್ತು ನಂಬಲು ಸಾಧ್ಯವಾಗುತ್ತಿಲ್ಲ. ಕಾರಣ, ಇರಾನ್​ನ ಎಲ್ಲ ಬೇಡಿಕೆಗಳನ್ನು ಅಮೆರಿಕ ಒಪ್ಪಿಕೊಂಡಂತಿದ್ದರೂ, 2015 ರಲ್ಲಿ ಪಿ-5+ ಜರ್ಮನಿ ದೇಶಗಳೊಂದಿಗೆ ಇರಾನ್​ ಮಾಡಿಕೊಂಡಿದ್ದ ಪರಮಾಣು ಒಪ್ಪಂದದ ಕಥೆಯೇನು ಎಂಬುದು ಇತ್ಯರ್ಥವಾಗಿಲ್ಲ. ಇರಾನ್​ ಈ ಹಿಂದಿನಿಂದಲೂ ಪರಮಾಣು ಯೋಜನೆಗೆ ಕಟಿಬದ್ಧವಾಗಿದೆ. ಇದೇ ಕಾರಣಕ್ಕಾಗಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ತಮ್ಮ ಮೊದಲ ಅವಧಿಯಲ್ಲಿ ನಡೆದ ಒಪ್ಪಂದದಿಂದ ಹೊರನಡೆದಿದ್ದರು. ಈಗ ಎರಡನೇ ಅವಧಿಯಲ್ಲಿ ದಾಳಿ ನಡೆಸಿದ್ದೂ ಇದೇ ಕಾರಣಕ್ಕಾಗಿ.

ಹೀಗಾಗಿ, ವಿವಾದಕ್ಕೆ ಕಾರಣವಾಗಿರುವ ಮತ್ತು ಪರಮಾಣು ಬಾಂಬ್​ ತಯಾರಿಕೆಗೆ ಸಜ್ಜಾಗುತ್ತಿರುವ ಸುಮಾರು 440 ಕೆಜಿ ತೂಕದ ಪುಷ್ಟೀಕರಿಸಲಾದ (enrichment) ಯುರೇನಿಯಂ ಅನ್ನು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ (ಐಎಇಎ) ಹಸ್ತಾಂತರಿಸಲು ಇರಾನ್​ ಒಪ್ಪಿಕೊಳ್ಳಬಹುದೇ ಎಂಬುದು ಮಿಲಿಯನ್​ ಡಾಲರ್​ ಪ್ರಶ್ನೆ.

ಧಾವಂತದಲ್ಲಿ ಅಮೆರಿಕ, ಎಚ್ಚರಿಕೆಯಲ್ಲಿ ಇರಾನ್​: ಯುದ್ಧ ಆರಂಭವಾಗಿ ನಂತರದ ಬೆಳವಣಿಗೆಗಳಲ್ಲಿ ಅಮೆರಿಕವು ಶಾಂತಿ ಮಾತುಕತೆ ನಡೆಸಲು ಇರಾನ್​​ಗೆ ದುಂಬಾಲು ಬಿದ್ದಿತ್ತು. ಈಗಲೂ ಅಮೆರಿಕವೇ ಈ ಒಪ್ಪಂದದ ಮುಂಚೂಣಿಯಲ್ಲಿದೆ. ಆದರೆ, ಇತ್ತ ಇರಾನ್​ ಮಾತ್ರ ತೀರಾ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಇಂತಹ ಹಲವು ಒಪ್ಪಂದಗಳು ಮುರಿದು ಬಿದ್ದ ಬಗ್ಗೆ ಮಾತನಾಡಿದೆ. ಅಮೆರಿಕ ಹಿಂದೆ ನಡೆದುಕೊಂಡ ರೀತಿಯೇ ಇದಕ್ಕೆ ಕಾರಣ.

ಅಮೆರಿಕ, ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧದ ಘಟನಾವಳಿಗಳು
ಅಮೆರಿಕ, ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧದ ಘಟನಾವಳಿಗಳು (ETV Bharat Graphics)

ಇನ್ನೊಂದೆಡೆ, ಇಸ್ರೇಲ್‌ನ ಪ್ರತಿಕ್ರಿಯೆ ಆತಂಕ ಸೃಷ್ಟಿಸಿದೆ. ಈ ಶಾಂತಿ ಒಪ್ಪಂದದ ದೀರ್ಘಾವಧಿಯ ಉಳಿವಿನ ಬಗ್ಗೆ ಅದು ಸಂಶಯ ವ್ಯಕ್ತಪಡಿಸಿದೆ. ತಾನು ಈ ಒಪ್ಪಂದದ ಭಾಗವಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. ಈ ಕುರಿತು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಹೇಳಿಕೆ ನೀಡಿದ್ದು: "ನಮ್ಮ ಗಡಿಗಳು ಮತ್ತು ಇಸ್ರೇಲಿ ಸಮುದಾಯವನ್ನು ಜಿಹಾದಿ ಶಕ್ತಿಗಳಿಂದ ರಕ್ಷಿಸಲು ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆ) ಲೆಬನಾನ್, ಸಿರಿಯಾ ಮತ್ತು ಗಾಜಾದ ಭದ್ರತಾ ವಲಯಗಳಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಮುಂದುವರಿಯಲಿದೆ ಎಂಬ ಸ್ಪಷ್ಟ ನೀತಿಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ನಾನು ಅನುಸರಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

ಕಳೆದ ಎರಡೂವರೆ ವರ್ಷಗಳಲ್ಲಿ ಇಸ್ರೇಲ್ ಗಾಜಾ, ಲೆಬನಾನ್ ಮತ್ತು ಸಿರಿಯಾದ ಸುಮಾರು 1,000 ಚದರ್​ ಕಿಲೋಮೀಟರ್ ಪ್ರದೇಶವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಅಂದಾಜಿಸಲಾಗಿದೆ. ಇದು ತನ್ನ 'ಗ್ರೇಟರ್ ಇಸ್ರೇಲ್' ಕನಸಿನ ಭಾಗವನ್ನಾಗಿ ಮಾಡಿಕೊಂಡಿದೆ.

ಅಮೆರಿಕದ ಹಿಂಬಾಗಿಲ ಯುದ್ಧ ನೀತಿ? ಮುಂದಿನ ದಿನಗಳಲ್ಲಿ ಅಮೆರಿಕವು ಇರಾನ್ ಜೊತೆಗೆ ನೇರ ಸಂಘರ್ಷದಿಂದ ಹಿಂದೆ ಸರಿದರೂ, ಇಸ್ರೇಲ್‌ಗೆ ತನ್ನ ನೈತಿಕ ಮತ್ತು ಮಿಲಿಟರಿ ಬೆಂಬಲವನ್ನು ಮುಂದುವರಿಸಬಹುದು. ಇರಾನ್‌ನ ಬೆಂಬಲಿತ ಪಡೆಗಳನ್ನು ಮಟ್ಟಹಾಕಲು ಮತ್ತು ಇರಾನ್ ಅನ್ನು ಸಂಪೂರ್ಣವಾಗಿ ನಾಶಪಡಿಸದಿದ್ದರೂ ಸಾಧ್ಯವಾದಷ್ಟು ದುರ್ಬಲಗೊಳಿಸಲು ಇಸ್ರೇಲ್ ಪ್ರಯತ್ನಿಸುತ್ತಿದೆ. ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಾವಧಿ ಚುನಾವಣೆಯಲ್ಲಿ ಅಧ್ಯಕ್ಷ ಟ್ರಂಪ್ ಪರವಾಗಿ ಫಲಿತಾಂಶ ಬಂದರೆ, ಅಮೆರಿಕ ಮತ್ತೆ ಈ ಸಂಘರ್ಷದಲ್ಲಿ ಧುಮುಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಅಮೆರಿಕ, ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧದ ಘಟನಾವಳಿಗಳು
ಅಮೆರಿಕ, ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧದ ಘಟನಾವಳಿಗಳು (ETV Bharat Graphics)

ಬಿಕ್ಕಟ್ಟಿನಲ್ಲಿ ಪ್ಯಾಲೆಸ್ಟೀನಿಯನ್​ ವಿವಾದ: ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧಕ್ಕೆ ಕಾರಣವಾಗಿರುವ ಪ್ಯಾಲೆಸ್ಟೀನಿಯನ್​ ಪ್ರದೇಶ ವಿವಾದ ಇತ್ಯರ್ಥಕ್ಕೆ ವಿಶ್ವಸಂಸ್ಥೆ 'ಎರಡು ರಾಷ್ಟ್ರ ನಿರ್ಮಾಣ' ಪರಿಹಾರವನ್ನು ಸೂಚಿಸಿದೆ. ಪ್ಯಾಲೆಸ್ತೀನಿಯನ್ನರಿಗೆ ಸಾರ್ವಭೌಮ ತಾಯ್ನಾಡನ್ನು ನೀಡುವವರೆಗೂ ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ಸಾಧ್ಯವಿಲ್ಲ. ಆಗ ಇರಾನ್ ಮತ್ತು ಅದರ ಬೆಂಬಲಿತ ಪಡೆಗಳು ಇಸ್ರೇಲ್ ಮೇಲೆ ದಾಳಿ ಮಾಡುವ ಅಗತ್ಯವಿರುವುದಿಲ್ಲ. ಆದರೆ, ಸದ್ಯಕ್ಕೆ ಈ ವಿಷಯ ಯಾವುದೇ ಕಾರ್ಯಸೂಚಿಯಲ್ಲಿ ಇಲ್ಲದಿರುವುದು ಬಿಕ್ಕಟ್ಟಿನ ಭಾಗವೇ ಸರಿ.

ಈ ಒಪ್ಪಂದವು ಯಶಸ್ವಿಯಾಗಿ ಜಾರಿಗೆ ಬಂದು ಅಮೆರಿಕ ಮತ್ತು ಇರಾನ್ ಅದನ್ನು ಸಂಪೂರ್ಣವಾಗಿ ಪಾಲಿಸಿದರೆ, ಈ ಪ್ರದೇಶದಲ್ಲಿ ಸಹಜ ಸ್ಥಿತಿ ಮರಳಲು ಸಹಾಯವಾಗುತ್ತದೆ ಎಂಬುದು ಖಚಿತ. ಆದರೆ, ಶಾಶ್ವತ ಶಾಂತಿ ಎಂಬುದು ಮಾತ್ರ ದೂರದ ಕನಸು. ಈಗಾಗಲೇ ಜಾಗತಿಕ ಆರ್ಥಿಕತೆಗೆ ಈ ಯುದ್ಧವು ಪೆಟ್ಟು ನೀಡಿದೆ. ಈಗಿನ ಶಾಂತಿ ಮಂತ್ರ ವಿಶ್ವಕ್ಕೇ ಭಾರಿ ಲಾಭವಾಗಲಿದೆ. ಇರಾನ್ ತೈಲದ ಮೇಲಿನ ನಿರ್ಬಂಧಗಳು ತೆರವಾಗುವುದರಿಂದ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಇಂಧನ ಪೂರೈಕೆ ಪುನಾರಂಭಗೊಳ್ಳುವುದರಿಂದ ತೈಲ ಬೆಲೆಗಳು ಸ್ಥಿರಗೊಳ್ಳಲಿವೆ. ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ. ಈಗಾಗಲೇ ಕಚ್ಚಾ ತೈಲದ ಬೆಲೆಗಳು ಇಳಿಕೆಯಾಗಿದ್ದು, ಷೇರು ಮಾರುಕಟ್ಟೆಗಳು ಜಿಗಿತ ಕಾಣುತ್ತಿವೆ.

ಈ ಶಾಂತಿಯಿಂದ ಭಾರತಕ್ಕೇನು ಲಾಭ? ಭಾರತದ ದೃಷ್ಟಿಕೋನದಿಂದ ನೋಡುವುದಾದರೆ, ಇರಾನ್‌ನಿಂದ ಮತ್ತೆ ಇಂಧನ ಪೂರೈಕೆ ಆರಂಭವಾಗುವ ಸಾಧ್ಯತೆಯಿದೆ. ಇರಾನ್‌ನಲ್ಲಿರುವ ಚಬಹಾರ್ ಬಂದರು ಯೋಜನೆಗೆ ಮರುಜೀವ ಬರಲಿದ್ದು, ಇದು ಇರಾನ್ ಮೂಲಕ ಅಫ್ಘಾನಿಸ್ತಾನ ಮತ್ತು ಯುರೋಪ್‌ಗೆ ಭಾರತದ ಸಂಪರ್ಕವನ್ನು ಹೆಚ್ಚಿಸಲಿದೆ. ಕಡಲ ವ್ಯಾಪಾರ ಮತ್ತು ನಾಗರಿಕ ವಿಮಾನಯಾನ ಉದ್ಯಮಕ್ಕೂ ಇದರಿಂದ ಲಾಭವಾಗಲಿದೆ. ರಸಗೊಬ್ಬರಗಳ ತಡೆರಹಿತ ಆಮದು ಭಾರತೀಯ ಕೃಷಿ ವಲಯಕ್ಕೆ ದೊಡ್ಡ ಸಮಾಧಾನ ತರಲಿದೆ.

ಕಚ್ಚಾ ತೈಲ ಬೆಲೆ ಸ್ಥಿರತೆಯಿಂದಾಗಿ ವಿದೇಶಿ ವಿನಿಮಯದ ಹೊರಹರಿವು ಕಡಿಮೆಯಾಗಲಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಕಡಿಮೆಯಾಗಿ ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ. ಅಷ್ಟೇ ಅಲ್ಲದೆ, ಮಧ್ಯಪ್ರಾಚ್ಯದಲ್ಲಿರುವ 1 ಕೋಟಿಗೂ ಅಧಿಕ ಭಾರತೀಯ ಸಮುದಾಯದ ಸುರಕ್ಷತೆಗೆ ಇದು ಅತ್ಯಂತ ಪ್ರಮುಖ ಅಂಶವಾಗಿದೆ. ಇವರು ಭಾರತಕ್ಕೆ ವಿದೇಶಿ ಕರೆನ್ಸಿಯನ್ನು ಕಳುಹಿಸುವ ಪ್ರಮುಖ ಮೂಲವಾಗಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಅಮೆರಿಕ ಮತ್ತು ಇರಾನ್ ನಡುವಿನ ಹಗೆತನದ ಅಂತ್ಯ ಮತ್ತು ಜಾಗತಿಕ ಪೂರೈಕೆ ಸರಪಳಿಯ ಸುಗಮ ಸಂಚಾರ ಇಡೀ ವಿಶ್ವಕ್ಕೆ ಶುಭ ಸೂಚನೆಯಾಗಿದೆ. ಆದರೆ, ಈ ಸಂಘರ್ಷವು ಸಂಪೂರ್ಣ ಮತ್ತು ಅಂತಿಮ ಇತ್ಯರ್ಥವಾಗಲು ಕೆಲ ಅಂಶಗಳು ಅಡ್ಡಿಯಾಗಿದ್ದು, ಕನಸು ಇನ್ನೂ ದೂರವಿದೆ ಎನ್ನಬಹುದು.

ಇವುಗಳನ್ನೂ ಓದಿ: