ಮಕರ ಸಂಕ್ರಾಂತಿ ಸಂಭ್ರಮ ಡಬಲ್ ಮಾಡಲು ಭೇಟಿ ನೀಡಬೇಕಾದ ರಾಜ್ಯದ ಪ್ರಮುಖ ಐತಿಹಾಸಿಕ ತಾಣಗಳಿವು!
Makara Sankranti 2026: ಈ ಬಾರಿಯ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ದುಪ್ಪಟ್ಟುಗೊಳಿಸಲು ನೀವು ಭೇಟಿ ನೀಡಬೇಕಾದ ರಾಜ್ಯದ ಪ್ರಮುಖ ಐತಿಹಾಸಿಕ ಸ್ಥಳಗಳು ಯಾವುವು ಎಂಬುದನ್ನು ಈಸ್ಟೋರಿಯಲ್ಲಿ ನೋಡೋಣ.


Published : January 8, 2026 at 2:57 PM IST
- ಹುಚ್ಚೇಶ್ವರ ಅಣ್ಣಿಗೇರಿ
ಸೂರ್ಯ ಉತ್ತರ ದಿಕ್ಕಿಗೆ ಚಲಿಸುತ್ತಿದ್ದಂತೆ ಹಬ್ಬದ ಋತು ಪ್ರಾರಂಭವಾಗುತ್ತದೆ. ಜನವರಿ 14 ಇಲ್ಲವೇ 15 ರಂದು ಆಚರಿಸಲಾಗುವ ಪವಿತ್ರ ಹಬ್ಬವಾದ ಮಕರ ಸಂಕ್ರಾಂತಿಯೊಂದಿಗೆ ಶುರುವಾಗುತ್ತದೆ. ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತದೆ. ವಿಭಿನ್ನ ಹೆಸರುಗಳು ಹಾಗೂ ಹಲವು ಪ್ರಕಾರಗಳೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಭೋಗಿ ಹಬ್ಬ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು ಹಬ್ಬವಾಗಿ ಸಂಭ್ರಮಿಸಲಾಗುತ್ತದೆ.
ಹೌದು, ಮಾನವೀಯ ಸಂಬಂಧವನ್ನು ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರಯಾಣದ ಆರಂಭ ಸೂಚಿಸುವ ಸೂರ್ಯ ಮಕರ ರಾಶಿ ಪ್ರವೇಶಿಸುವ ದಿನವಾಗಿದೆ. ಭಾರತೀಯ ಸಂಪ್ರದಾಯದಲ್ಲಿ ಈ ದಿನವನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಹೊಲಗಳಲ್ಲಿ ಹೊಸ ಸುಗ್ಗಿಯ ಸಂತೋಷ, ಮನೆಗಳಲ್ಲಿ ಎಳ್ಳು ಮತ್ತು ಬೆಲ್ಲದ ಸಿಹಿ ಮತ್ತು ಆಕಾಶದಲ್ಲಿ ವರ್ಣರಂಜಿತ ಗಾಳಿಪಟಗಳು ಹೀಗೆ ಮಕರ ಸಂಕ್ರಾಂತಿ ಪ್ರತಿಯೊಂದು ರೂಪದಲ್ಲಿ ಕೂಡ ಸಂತಸವನ್ನು ತರುತ್ತದೆ.
ಈ ಮಕರ ಸಂಕ್ರಾಂತಿಯ (Makar Sankranti 2026) ಸಮಯದಲ್ಲಿ ಬಹುತೇಕರು ಪ್ರವಾಸ ಕೈಗೊಳ್ಳುತ್ತಾರೆ. ರಾಜ್ಯದ ಐತಿಹಾಸಿಕ ಸ್ಥಳಗಳು ಪ್ರವಾಸಿಗಳನ್ನು ಮನ ಸೆಳೆಯುತ್ತಿವೆ. ಅನೇಕ ದೇವಾಲಯಗಳ ವಾಸ್ತುಶಿಲ್ಪ, ಕಲಾಕೃತಿಗಳು, ಸಂಕೀರ್ಣವಾದ ಕೆತ್ತನೆಗಳು ಕಣ್ಣುಗಳಿಗೆ ಮುದ ನೀಡುತ್ತವೆ. ಈ ಪ್ರವಾಸಿ ತಾಣಗಳಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡಿ ಪ್ರಾಚೀನ ವೈಭವ ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಈ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಲು ನೀವು ಭೇಟಿ ನೀಡಬೇಕಾದ ಕರ್ನಾಟಕದ ರಾಜ್ಯದ ಪ್ರಮುಖ ಐತಿಹಾಸಿಕ ಸ್ಥಳಗಳು ಯಾವುವು ಎಂಬುದನ್ನು ವಿವರವಾಗಿ ತಿಳಿಯೋಣ.

ಪಾರಂಪರಿಕ ನಗರಿ ಮೈಸೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ, ಪಾರಂಪರಿಕ ನಗರಿ, ಗಂಧದ ನಗರಿ ಹೀಗೆ ಅನೇಕ ಹೆಸರುಗಳಿಂದ ಪ್ರಸಿದ್ಧವಾಗಿರುವ ಮೈಸೂರು ದೇಶ ಹಾಗೂ ವಿದೇಶದ ಪ್ರವಾಸಿಗರನ್ನು ಸೆಳೆಯುತ್ತಿದೆ. ಮೈಸೂರಿನಲ್ಲಿ ಗಮನಸೆಳೆಯುವ ಅಂಬಾವಿಲಾಸ ಅರಮನೆಯ ಜೊತೆಗೆ ಇನ್ನೂ ನಾಲ್ಕು ಅರಮನೆಗಳಿವೆ. ಕೃಷ್ಣರಾಜಸಾಗರ ಅಣೆಕಟ್ಟಿನ ಬಳಿಯಿರುವ ಬೃಂದಾವನ ಉದ್ಯಾನವು ಕಣ್ಮನ ಸೆಳೆಯುವ ಕಾರಂಜಿಗಳು, ಹೂವಿನ ಹಾಸುಗಳಿಗೆ ತುಂಬಾ ಖ್ಯಾತಿ ಗಳಿಸಿದೆ. ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯದ ಶಿಲ್ಪಕಲೆ ಹಾಗೂ ಜಗನ್ಮೋಹನ ಅರಮನೆಯ ಕಲಾ ಗ್ಯಾಲರಿಯು ಪ್ರಮುಖ ಆಕರ್ಷಣೆಯಾಗಿವೆ. ಮೈಸೂರು ಅದ್ಭುತ ರಾಜ ಪರಂಪರೆ, ಸಂಕೀರ್ಣ ವಾಸ್ತುಶಿಲ್ಪ, ಪ್ರಸಿದ್ಧ ರೇಷ್ಮೆ ಸೀರೆಗಳು, ಯೋಗ ಹಾಗೂ ಶ್ರೀಗಂಧಕ್ಕೆ ತುಂಬಾ ಹೆಸರುವಾಸಿಯಾಗಿದೆ. ಇದರಿಂದ ವರ್ಷಪೂರ್ತಿ ಕೋಟ್ಯಂತರ ಪ್ರವಾಸಿಗರನ್ನು ಸೆಳೆಯುತ್ತಿದೆ. ಅಂಬಾವಿಲಾಸ ಅರಮನೆಯು ಕರ್ನಾಟಕ ಸರ್ಕಾರದ ಹೆರಿಟೇಜ್ ಕಟ್ಟಡಗಳ ಪಟ್ಟಿಯಲ್ಲಿ ಹೆಸರುವಾಸಿಯಾಗಿದೆ.

ಮನಸ್ಸಿಗೆ ಮುದ ನೀಡುವ ಹಂಪಿ: ಅವಶೇಷಗಳ ನಗರಿ ಹಂಪಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಹಂಪಿಯ ತಾಣಗಳು ಪ್ರವಾಸಿಗರ ಮನಸ್ಸಿಗೆ ಮುದು ನೀಡುತ್ತವೆ. ಹಂಪಿಯಲ್ಲಿ 500ಕ್ಕೂ ಪ್ರಾಚೀನ ಸ್ಮಾರಕಗಳು, ಐತಿಹಾಸಿನ ದೇವಾಲಯಗಳು, ಮಾರುಕಟ್ಟೆಗಳು, ಕೊತ್ತಲಗಳು, ಖಜಾನೆ ಕಟ್ಟಡ, ವಿಜಯನಗರ ಸಾಮ್ರಾಜ್ಯದ ಆಕರ್ಷಕ ಅವಶೇಷಗಳಿಂದ ಕೂಡಿವೆ. ಹಂಪಿಯ ಪುರಾತನ ವಿರೂಪಾಕ್ಷ ದೇವಾಲಯ, ವಿಶ್ವವಿಖ್ಯಾತ ಕಲ್ಲಿನ ರಥ, ಹೇಮಕೂಟ ಬೆಟ್ಟದಲ್ಲಿರುವ ಸುಂದರ ದೇವಾಲಯ ಸಂಕೀರ್ಣ ಪ್ರವಾಸಿಗರ ಗಮನಸೆಳೆಯುತ್ತದೆ. ಸಪ್ತಸ್ವರದ ಕಲ್ಲಿನ ಕಂಬಗಳು, ವಿಜಯನಗರ ವಾಸ್ತುಶಿಲ್ಪದ ಉದಾಹರಣೆಯಾದ ಕಮಲ ಮಹಲ್, ಆನೆ ಲಾಯ ಹಾಗೂ ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪತಿ, ಉಗ್ರನರಸಿಂಹ ಮೂರ್ತಿ ಸೇರಿದಂತೆ ವಿವಿಧ ಜನ ಮನ ಸೆಳೆಯುತ್ತವೆ.

ಗುಮ್ಮಟ ನಗರಿ ವಿಜಯಪುರ: ವಿಜಯಪುರದಲ್ಲಿ ಹಲವು ಆಕರ್ಷಕ ಹಾಗೂ ಸುಂದರ ಐತಿಹಾಸಿಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಅದರಲ್ಲೂ ಗೋಲ್ ಗುಂಬಜ್ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ವಿಜಯಪುರ ನಗರವು ನಿಮ್ಮನ್ನು ರಾಜಮನೆತನದ ಹಿಂದಿನ ದಿನಗಳಿಗೆ ಕರೆದೊಯ್ಯುವಂತಹ ಗಮನಸೆಳೆಯುವ ಪ್ರವಾಸಿ ತಾಣವಾಗಿದೆ. ವಿಶ್ವದ ಅತಿದೊಡ್ಡ ಅಸಹಾಯಕ ಗುಮ್ಮಟಗಳಲ್ಲಿ ಒಂದಾದ ಗೋಳಗುಮ್ಮಟ, ಸೊಗಸಾದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ಇಬ್ರಾಹಿಂ ರೋಜಾ, ಭವ್ಯ ಜಮ್ಮಾ ಮಸೀದಿ, ಸುಲ್ತಾನರ ಅರಮನೆ ಹಾಗೂ ದರ್ಬಾರ್ ಹಾಲ್ ಆಗಿರುವ ಗಗನ್ ಮಹಲ್, ಅಪೂರ್ಣ ಸ್ಮಾರಕ ಬಾರಾಕಮಾನ್ ಹಾಗೂ ವಿಶ್ವದ ಅತಿದೊಡ್ಡ ಮಧ್ಯಕಾಲೀನ ಫಿರಂಗಿಯಾದ ಮಲಿಕ್-ಇ-ಮೈದಾನ್, ಅಸರ ಮಹಲ್, ಉಪ್ಲಿ ಬುರ್ಜ್, ಸುಂದರವಾದ ಮೆಟ್ಟಿಲು ಬಾವಿ ಚಂದ್ ಬಾವಡಿ, ತಾಜ್ ಬಾವಡಿ, ಬಿಜಾಪುರ ಕೋಟೆ, ಜೋಡು ಗುಮ್ಮಟ, ಮಿಥಾರಿ ಮಹಲ್ ಸೇರಿದಂತೆ ಹಲವು ಸುಂದರ ತಾಣಗಳು ಪ್ರವಾಸಿಗರ ಸೆಳೆಯುತ್ತವೆ. ಒಮ್ಮೆಯಾದರೂ ವಿಜಯಪುರದ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.


ಐತಿಹಾಸಿಕ ಹಳೇಬೀಡು: ಪ್ರಾಚೀನ ಕಾಲದಲ್ಲಿ ‘ದ್ವಾರಸಮುದ್ರ’ ಎಂದು ಕರೆಯುತ್ತಿದ್ದ ಹಳೇಬೀಡು ಅತ್ಯುತ್ತಮ ಪ್ರವಾಸಿ ತಾಣವಾಗಿದೆ. ಈ ಸುಂದರವಾದ ತಾಣವು ಹಾಸನ ಜಿಲ್ಲೆಯಲ್ಲಿದೆ. ಹಳೇಬೀಡಿನಲ್ಲಿ ಭವ್ಯ ಐತಿಹಾಸಿ ದೇವಾಲಯಗಳನ್ನು ವೀಕ್ಷಿಸಬಹುದು. ಸುಂದರಮಯವಾದ ಶಿಲ್ಪಗಳ ಸೊಬಗು ವೀಕ್ಷಿಸುವುದರಿಂದ ಮನಕ್ಕೆ ಸಂತೋಷ ಲಭಿಸುತ್ತದೆ. ಹಳೇಬೀಡು ಅದ್ಭುತ ಹೊಯ್ಸಳ ವಾಸ್ತುಶಿಲ್ಪ, ಐತಿಹಾಸಿಕ ದೇವಾಲಯ ಸಂಕೀರ್ಣಗಳು, ಕಣ್ಮನ ಸೆಳೆಯುವ ಜೈನ ತಾಣಗಳಿಂದ ಹಳೇಬಿಡನ್ನು 'ಭಾರತೀಯ ವಾಸ್ತುಶಿಲ್ಪದ ರತ್ನ' ಎಂದು ಪ್ರಸಿದ್ಧಿ ಪಡೆದಿದೆ.

ಗಮಸೆಳೆಯುವ ಬೇಲೂರು: ಹಾಸನ ಜಿಲ್ಲೆಯ ವ್ಯಾಪ್ತಿಗೆ ಬರುವ ಬೇಲೂರು ಹಳೇಬೀಡಿನ ಅವಳಿ ಪಟ್ಟಣವಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಬೇಲೂರು ಹಳೇಬೀಡಿನಿಂದ ಬಸ್ 17 ಕಿಮೀ ದೂರದಲ್ಲಿದೆ. ಹೊಯ್ಸಳ ಆಳ್ವಿಕೆಯಲ್ಲಿ ಬೇಲೂರು ರಾಜಧಾನಿಯಾಗಿತ್ತು. ಬೇಲೂರಿನ ಪ್ರಮುಖ ದೇವಾಲಯಗಳಲ್ಲಿ ಚೆನ್ನಕೇಶವ ದೇವಸ್ಥಾನ ಹಾಗೂ ಕಪ್ಪೆ ಚೆನ್ನಿಗರಾಯ ದೇವಾಲಯವು ಪ್ರವಾಸಿಗರ ಗಮನಸೆಳೆಯುತ್ತವೆ. ಈ ಭವ್ಯವಾದ ಚೆನ್ನಕೇಶವ ದೇವಸ್ಥಾನದ ಕಟ್ಟಡದ ನಿರ್ಮಾಣ ಪೂರ್ಣಗೊಳಿಸಲು 103 ವರ್ಷಗಳು ಬೇಕಾಯಿತು ಎಂದು ಪೌರಾಣಿಕ ಕಥೆ ತಿಳಿಸುತ್ತದೆ.

ಸುಂದರ ತಾಣ ಐಹೊಳೆ: ಬಾಗಲಕೋಟೆ ಜಿಲ್ಲೆಯಲ್ಲಿ ಐತಿಹಾಸಿಕ ತಾಣ ಐಹೊಳೆಯಲ್ಲಿ ನೂರಕ್ಕೂ ಹೆಚ್ಚು ಸುಂದರ ದೇವಾಲಯಗಳು, ಸ್ಮಾರಕಗಳಿವೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಐಹೊಳೆಯನ್ನು ದೇವಾಲಯ ವಾಸ್ತುಶಿಲ್ಪ ಮತ್ತು ಸಂಕೀರ್ಣವಾದ ಕಲ್ಲಿನ ಕೆಲಸಗಳಿಗೆ ಪ್ರಮುಖ ಕೇಂದ್ರವಾಗಿದೆ. 100ಕ್ಕೂ ಹೆಚ್ಚು ಹಿಂದೂ ಹಾಗೂ ಜೈನ ದೇವಾಲಯಗಳಿವೆ. ಅಪ್ಸಿಡಲ್ ಆಕಾರದ ದುರ್ಗಾ ದೇವಸ್ಥಾನ, ಐತಿಹಾಸಿಕ ಲಾಡ್ ಖಾನ್ ದೇವಸ್ಥಾನ, ಬೆಟ್ಟದ ಮೇಲಿನ ಮೇಗುಟಿ ಜೈನ ದೇವಾಲಯ, ರಾವಣ ಫಾಡಿ ಗುಹೆ, ಗೌಡರಗುಡಿ ದೇವಾಲಯ, ಜೋತಿರ್ಲಿಂಗ ದೇವಾಲಯಗಳ ಸಮೂಹ, 9ನೇ ಶತಮಾನದ ಚಕ್ರ ಗುಡಿ, ಸೂರ್ಯನಾರಾಯಣ ಗುಡಿ ಸೇರಿದಂತೆ ವಿವಿಧ ಸ್ಮಾರಕಗಳು ವೀಕ್ಷಿಸಬಹುದು.

ವಾಸ್ತುಶಿಲ್ಪದ ಅದ್ಭುತ ಸ್ಥಳ ಪಟ್ಟದಕಲ್ಲು: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪಟ್ಟದಕಲ್ಲು ಭವ್ಯವಾದ ದೇವಾಲಯಗಳನ್ನು ಹೊಂದಿದೆ. ಇವುಗಳಲ್ಲಿ ಒಂಬತ್ತು ಹಿಂದೂ ದೇವಾಲಯಗಳು ಹಾಗೂ ಒಂದು ಜೈನ ಧರ್ಮದ ದೇವಾಲಯವಿದೆ. ಅತ್ಯಂತ ದೊಡ್ಡ ಸುಂದರವಾದ ವಿರೂಪಾಕ್ಷ ದೇವಾಲಯ, ಚಾಲುಕ್ಯರ ದ್ರಾವಿಡ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾದ ಮಲ್ಲಿಕಾರ್ಜುನ ದೇವಾಲಯ, ಸಂಗಮೇಶ್ವರ ದೇವಾಲಯ, ನಾಗರ, ದ್ರಾವಿಡ ಶೈಲಿಯ ಪಾಪನಾಥ ದೇವಾಲಯ, ಉತ್ತರ ಭಾರತದ ರೇಖಾನಾಗರ ಶೈಲಿಯ ಗಳಗನಾಥ ದೇವಾಲಯ, ಸೂಕ್ಷ್ಮ ಕೆತ್ತನೆಗಳಿಗೆ ಹೆಸರುವಾಸಿಯಾದ ಕಾಶಿವಿಶ್ವನಾಥ ದೇವಾಲಯ, ಜೈನ ನಾರಾಯಣ ದೇವಾಲಯಗಳು ಪಟ್ಟದಕಲ್ಲು ತಾಣದ ವಿಶೇಷ ಆಕರ್ಷಣೆಯಾಗಿದೆ.


ಪಂಚಲಿಂಗ ತಾಣ ತಲಕಾಡು: ಕರ್ನಾಟಕದ ಗುಪ್ತ ರತ್ನ, ಅತೀಂದ್ರಿಯ ಪಟ್ಟಣ ಎಂದು ಕರೆಯಲಾಗುವಂತಹ ತಲಕಾಡು ಐತಿಹಾಸಿಕ ಪ್ರವಾಸಿ ತಾಣವಾಗಿ ಎಲ್ಲರನ್ನೂ ಸೆಳೆಯುತ್ತಿದೆ. ತಲಕಾಡು ಪಂಚಲಿಂಗ ದೇವಾಲಯಗಳಿಗೆ ಪ್ರಸಿದ್ಧಿ ಪಡೆದಿದೆ. ಪಂಚಲಿಂಗ ದೇವಾಲಯಗಳಲ್ಲಿ ವೈದ್ಯನಾಥೇಶ್ವರ ದೇವಾಲಯ ಪ್ರಮುಖವಾಗಿದೆ. ಅರ್ಕೇಶ್ವರ ದೇವಾಲಯ, ಪಾತಾಳೇಶ್ವರ ದೇವಾಲಯ, ಅತಿ ದೊಡ್ಡ ಶಿವಲಿಂಗ ಇರುವ ಮರುಳೇಶ್ವರ ದೇವಾಲಯ, ಮುಡುಕುತೊರೆಯ ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ ದೇವಾಲಯ, ಕೀರ್ತಿನಾರಾಯಣ ದೇವಾಲಯಗಳಿಗೆ ಭೇಟಿ ನೀಡಿಬಹುದು. ಜೊತೆಗೆ ದೇವಾಲಯಗಳ ಸಮೀಪದಲ್ಲಿ ಕಾವೇರಿ ನದಿಯ ದಡವು ಉತ್ತಮ ಪಿಕ್ನಿಕ್ ಸ್ಫಳವಾಗಿದೆ. ಇದರೊಂದಿಗೆ ಪ್ರವಾಸಿಗರು ತೆಪ್ಪದಲ್ಲಿ ಸವಾರಿ ಮಾಡಲು ಹೇಳಿ ಮಾಡಿಸಿದ ತಾಣವಾಗಿದೆ. ತಲಕಾಡಿನಿಂದ ಸ್ವಲ್ಪ ದೂರದಲ್ಲಿ ಹೊಯ್ಸಳ ಶೈಲಿಯ ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ಚನ್ನಕೇಶವ ದೇವಾಲಯ ಇದೆ. ಜೊತೆಗೆ ಭರಚುಕ್ಕಿ, ಗಗನಚುಕ್ಕಿ ಎಂಬ ಸುಂದರ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತಿವೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ವೀಸಾಯಿಲ್ಲದೆ ಈ ದೇಶಗಳಿಗೆ ಭೇಟಿ ನೀಡಬಹುದು: ಚಳಿಗಾಲದಲ್ಲಿ ಪರಿಪೂರ್ಣ ಪ್ರವಾಸಕ್ಕೆ ಪ್ಲಾನ್

