ಇರಾನ್‌ನ ಮುಂದಿನ ಸರ್ವೋಚ್ಚ ನಾಯಕರಾಗಿ ಆಯ್ಕೆಯಾಗುವವರನ್ನೂ ಹತ್ಯೆ ಮಾಡುತ್ತೇವೆ: ಇಸ್ರೇಲ್
ಇರಾನ್‌ನ ಮುಂದಿನ ಸರ್ವೋಚ್ಚ ನಾಯಕನ ಆಯ್ಕೆಗೆ ಒಂದೆಡೆ ಸಭೆ ನಡೆಯುತ್ತಿದ್ದರೆ, ಇತ್ತ ಇಸ್ರೇಲ್ ಅವರನ್ನೂ ಕೊಂದು ಹಾಕುತ್ತೇವೆ ಎಂದು ಎಚ್ಚರಿಕೆ ಸಂದೇಶ ನೀಡಿದೆ.

Published : March 4, 2026 at 2:39 PM IST
|Updated : March 4, 2026 at 3:01 PM IST
ಜೆರುಸಲೇಂ(ಇಸ್ರೇಲ್): ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಭೀಕರ ಕ್ಷಿಪಣಿ ದಾಳಿ ನಡೆಸಿ ಹತ್ಯೆ ಮಾಡಿರುವ ಇಸ್ರೇಲ್, ಮುಂದೆ ಆಯ್ಕೆಯಾಗುವ ನಾಯಕನನ್ನೂ ಹೊಡೆದುರುಳಿಸಲಾಗುವುದು ಎಂದು ಬುಧವಾರ ಎಚ್ಚರಿಕೆ ನೀಡಿದೆ.
ಇರಾನ್‌ನ ಮುಂದಿನ ನಾಯಕನ ಆಯ್ಕೆಗಾಗಿ ಟೆಹ್ರಾನ್ನಲ್ಲಿ ಸಭೆ ನಡೆಸುತ್ತಿದ್ದ ಕಟ್ಟಡದ ಮೇಲೆ ಇಸ್ರೇಲ್ ಮಂಗಳವಾರ ದಾಳಿ ಮಾಡಿತ್ತು. ಇದರ ಬೆನ್ನಲ್ಲೇ ಈ ಎಚ್ಚರಿಕೆ ಸಂದೇಶ ರವಾನಿಸಿದೆ.
"ಇಸ್ರೇಲ್ ಅನ್ನು ನಾಶಮಾಡುವ ಮನಸೋಸ್ಥಿತಿ ಉಳ್ಳವರು, ಅಮೆರಿಕ ಮತ್ತು ಇತರ ರಾಷ್ಟ್ರಗಳಿಗೆ ಬೆದರಿಕೆ ಹಾಕುವ ಉದ್ದೇಶ ಹೊಂದಿರುವ ಯಾವುದೇ ವ್ಯಕ್ತಿ ಇರಾನ್ ನಾಯಕತ್ವ ವಹಿಸಿಕೊಂಡರೆ ಅವರನ್ನು ನಿರ್ಮೂಲನೆ ಮಾಡುತ್ತೇವೆ. ಇರಾನಿಯನ್ನರ ರಕ್ಷಣೆಗಾಗಿ ಭಯೋತ್ಪಾದಕ ಆಡಳಿತದಿಂದ ನೇಮಿಸಲ್ಪಟ್ಟ ಪ್ರತಿಯೊಬ್ಬ ನಾಯಕನಿಗೂ ಸಾವೇ ಗತಿ" ಎಂದು ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದಾರೆ.
ಖಮೇನಿ ಅಂತ್ಯಕ್ರಿಯೆ ಇಂದು ಸಂಜೆ ಆರಂಭ: ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಇಂದು ಸಂಜೆಯಿಂದ ಆರಂಭವಾಗಲಿದೆ. ಸಕಲ ಸರ್ಕಾರಿ ಗೌರವಗಳ ಸಮೇತ, ಶಿಯಾ ಮುಸ್ಲಿಮರ ವಿಧಿವಿಧಾನಗಳ ಮೂಲಕ ಮೂರು ದಿನ ನಡೆಯಲಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಬುಧವಾರ ರಾತ್ರಿ 10 ಗಂಟೆಗೆ ಟೆಹ್ರಾನ್‌ನಲ್ಲಿರುವ ಇಮಾಮ್ ಖಮೇನಿ ಗ್ರ್ಯಾಂಡ್ ಮಸೀದಿಯಲ್ಲಿ ಮೃತದೇಹವನ್ನು ಇಡಲಾಗಿದ್ದು, ಅಂತಿಮ ನಮನ ಸಲ್ಲಿಸಲು ಜನರಿಗೆ ಅವಕಾಶ ನೀಡಲಾಗುವುದು ಎಂದು ಇಸ್ಲಾಮಿಕ್ ಡೆವಲಪ್ಮೆಂಟ್ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
86 ವರ್ಷದ ಖಮೇನಿ ಅವರನ್ನು ಈಶಾನ್ಯ ಇರಾನ್‌ನಲ್ಲಿರುವ ಅವರ ಜನ್ಮ ಸ್ಥಳವಾದ ಮಶಾದ್‌ನಲ್ಲಿ ಸಮಾಧಿ ಮಾಡಲಾಗುತ್ತಿದೆ.
ಇವುಗಳನ್ನೂ ಓದಿ:

