ETV Bharat / international

'ಅಮೆರಿಕದ ಉಸ್ತುವಾರಿಯಲ್ಲಿ ವೆನಿಜುವೆಲಾ': ಕ್ಯೂಬಾ, ಮೆಕ್ಸಿಕೋ, ಕೊಲಂಬಿಯಾ ಮೇಲೆ ​ಡೊನಾಲ್ಡ್​ ಟ್ರಂಪ್ ಕಣ್ಣು

ಅಮೆರಿಕದ ಉಸ್ತುವಾರಿಯಲ್ಲಿ ವೆನಿಜುವೆಲಾ ಇರಲಿದೆ. ಕ್ಯೂಬಾ, ಮೆಕ್ಸಿಕೋ, ಕೊಲಂಬಿಯಾ ಡ್ರಗ್ಸ್​ ಮಾಫಿಯಾ ನಿಯಂತ್ರಿಸಬೇಕು. ಇಲ್ಲವಾದಲ್ಲಿ ದಾಳಿ ಮಾಡುವುದಾಗಿ ಡೊನಾಲ್ಡ್​ ಟ್ರಂಪ್​ ಎಚ್ಚರಿಕೆ ನೀಡಿದ್ದಾರೆ.

US ATTACK ON VENEZUELA
ವೆನಿಜುವೆಲಾದ ಮೇಲಿನ ದಾಳಿ ಖಂಡಿಸಿ ನಡೆದ ಪ್ರತಿಭಟನೆ (AFP)
author img

By ETV Bharat Karnataka Team

Published : January 5, 2026 at 3:18 PM IST

2 Min Read
Choose ETV Bharat

ವಾಷಿಂಗ್ಟನ್(ಅಮೆರಿಕ): ಅಧ್ಯಕ್ಷ ನಿಕೋಲಸ್ ಮಡುರೊ ಬಂಧನ, ಹಂಗಾಮಿ ಅಧ್ಯಕ್ಷರಾಗಿ ಡೆಲ್ಸಿ ರೊಡ್ರಿಗಸ್ ಅವರನ್ನು ನೇಮಕ ಮಾಡಿದ ಹೊರತಾಗಿಯೂ ವೆನಿಜುವೆಲಾ ದೇಶದ ಉಸ್ತುವಾರಿಯನ್ನು ತಾವೇ ವಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಹೇಳಿದ್ದಾರೆ. ಮುಂದಿನ ಸರತಿ ಕ್ಯೂಬಾ, ಮೆಕ್ಸಿಕೋ ಮತ್ತು ಕೊಲಂಬಿಯಾದ್ದು ಎಂದೂ ಹೇಳಿದ್ದಾರೆ.

ಜನವರಿ 3ರ ರಾತ್ರಿ ವೆನಿಜುವೆಲಾದ ಮೇಲೆ ಹಠಾತ್​ ದಾಳಿ ಮಾಡಿ ಅದರ ಅಧ್ಯಕ್ಷ ನಿಕೋಲಸ್​ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ಸೇನೆ ಬಂಧಿಸಿ ನ್ಯೂಯಾರ್ಕ್​​ಗೆ ಕರೆತಂದಿದೆ. ಇಲ್ಲಿನ ಜೈಲಿನಲ್ಲಿ ಅವರನ್ನು ಬಂಧಿಗಳನ್ನಾಗಿ ಇಡಲಾಗಿದೆ.

ಈ ಘಟನೆಯ ಮರುದಿನವೇ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹಾಲಿ ಉಪಾಧ್ಯಕ್ಷರಾಗಿರುವ ಡೆಲ್ಸಿ ರೊಡ್ರಿಗಸ್ ಅವರಿಗೆ ಅಲ್ಲಿನ ಸುಪ್ರೀಂಕೋರ್ಟ್​ ವಹಿಸಿತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಟ್ರಂಪ್​ ಆ ದೇಶದಲ್ಲಿ ಯಾರೇ ಅಧಿಕಾರ ನಡೆಸಿದರೂ, ಅಮೆರಿಕದ ಉಸ್ತುವಾರಿಯಲ್ಲಿ ಇರುತ್ತಾರೆ ಎಂದು ತಮ್ಮ ಎಂದಿನ ದಾಟಿಯಲ್ಲಿ ಹೇಳಿದ್ದಾರೆ. ಇತ್ತ ರೊಡ್ರಿಗಸ್​ ಕೂಡ ಅಮೆರಿಕದ ಜೊತೆ ಒಟ್ಟಾಗಿ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ತೈಲ ನಿಕ್ಷೇಪಗಳಲ್ಲಿ ಅಮೆರಿಕ ಹೂಡಿಕೆ: ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿರುವ ಟ್ರಂಪ್​, "ವೆನಿಜುವೆಲಾದಲ್ಲಿ ಈಗ ಯಾರು ಅಧಿಕಾರದಲ್ಲಿದ್ದಾರೆ ಎಂದು ಕೇಳಬೇಡಿ. ನನ್ನ ಉತ್ತರ ವಿವಾದವಾಗುತ್ತದೆ. ಆ ದೇಶದ ಆಡಳಿತದ ಚುಕ್ಕಾಣಿಯನ್ನು ಯಾರೇ ವಹಿಸಿಕೊಂಡರೂ ಅಮೆರಿಕದ ಉಸ್ತುವಾರಿ ಇರಲಿದೆ" ಎಂದು ಸ್ಪಷ್ಟವಾಗಿ ಹೇಳಿದರು.

"ವೆನಿಜುವೆಲಾದ ಕಚ್ಚಾ ತೈಲ ನಿಕ್ಷೇಪಗಳಲ್ಲಿ ಅಮೆರಿಕದ ಹೂಡಿಕೆಗೆ ಹೆಚ್ಚಿನ ಅವಕಾಶ ಪಡೆಯಲಾಗುವುದು. ಇದು ಈಡೇರುವವರೆಗೆ ಮಡುರೊ ಉತ್ತರಾಧಿಕಾರಿಯಾಗಿ ಬರುವ ಅಧ್ಯಕ್ಷರೊಂದಿಗೆ ಸೇರಿ ಕೆಲಸ ಮಾಡಲಾಗುವುದು. ಇದು ಭೂಮಿಯ ಮೇಲೆ ಶಾಂತಿಸ್ಥಾಪನೆಗಾಗಿ ಮಾಡುತ್ತಿರುವ ಕೆಲಸ" ಎಂದರು.

"ವೆನಿಜುವೆಲಾದಲ್ಲಿ ಚುನಾವಣೆ ನಡೆಯಲು ಇನ್ನಷ್ಟು ದಿನ ಕಾಯಬೇಕು. ಸಮಯ ಬಂದಾಗ ನಡೆಸಲಿದ್ದೇವೆ. ಅದಕ್ಕೂ ಮೊದಲು ಹಳತಪ್ಪಿರುವ ದೇಶವನ್ನು ಸರಿದಾರಿಗೆ ಪ್ರಯತ್ನ ಮಾಡುತ್ತಿದ್ದೇವೆ. ಅದೊಂದು ಒಡೆದು ಹೋದ ದೇಶವಾಗಿದೆ" ಎಂದು ಟೀಕಿಸಿದರು.

ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾಕ್ಕೆ ಎಚ್ಚರಿಕೆ: ಇದೇ ವೇಳೆ, ಲ್ಯಾಟಿನ್​ ಅಮೆರಿಕದ ದೇಶಗಳಾದ ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾಕ್ಕೆ ಟ್ರಂಪ್​ ಎಚ್ಚರಿಕೆ ನೀಡಿದ್ದಾರೆ. ಅಲ್ಲಿನ ಸರ್ಕಾರಗಳು ಡ್ರಗ್ಸ್​ ಮಾಫಿಯಾವನ್ನು ನಿಯಂತ್ರಿಸುತ್ತಿಲ್ಲ. ಇದು ಹೀಗೇ ಮುಂದುವರದಿದರೆ, ವೆನಿಜುವೆಲಾಗೆ ಬಂದ ಸ್ಥಿತಿ ಈ ದೇಶಗಳಿಗೂ ಬರುತ್ತದೆ. ಇದೇ ಮಾದರಿಯಲ್ಲಿ ದಾಳಿ ಮಾಡಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷರು ಎಚ್ಚರಿಕೆ ನೀಡಿದರು.

ವೆನಿಜುವೆಲಾದ ಮೇಲಿನ ದಾಳಿಯನ್ನು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ಮೆಕ್ಸಿಕೋದ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಮತ್ತು ಕ್ಯೂಬಾದ ಅಧ್ಯಕ್ಷ ಮಿಗ್ಯುಯೆಲ್ ಡಯಾಜ್ ಕ್ನೆಲ್ ಅವರು ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಟ್ರಂಪ್​, ಇವರ ಆಡಳಿತದಲ್ಲಿ ಡ್ರಗ್ಸ್​ ಮಾಫಿಯಾ ಹೆಚ್ಚಾಗಿದೆ. ಅಲ್ಲಿಂದ ಪೆಡ್ಲರ್​ಗಳು ಅಮೆರಿಕಕ್ಕೆ ಬಂದು ಡ್ರಗ್ಸ್​ ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಇದನ್ನು ತಡೆಯಬೇಕಾಗಿದೆ ಎಂದರು.

ಮೆಕ್ಸಿಕೋದ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಒಳ್ಳೆಯ ಮಹಿಳೆ. ಆದರೆ, ದೇಶವನ್ನು ನಿಯಂತ್ರಿಸಲು ಆಕೆಗೆ ಸಾಧ್ಯವಾಗುತ್ತಿಲ್ಲ. ಅಮೆರಿಕಕ್ಕೆ ಡ್ರಗ್ಸ್​ ರವಾನೆಯಾಗುತ್ತಿರುವುದನ್ನು ಆಕೆ ಮೊದಲು ತಡೆಯಲಿ. ಇಲ್ಲವಾದಲ್ಲಿ ಅಮೆರಿಕದ ದಾಳಿ ಎದುರಿಸಲಿ ಎಂದು ಸವಾಲು ಹಾಕಿದರು.

ಅಮೆರಿಕದ ದಾಳಿಗೆ 70 ಜನ ಸಾವು: ರಾತ್ರೋರಾತ್ರಿ ಅಮೆರಿಕ ಮಾಡಿದ ದಾಳಿಗೆ ಸೇನಾ ಸಿಬ್ಬಂದಿ ಸೇರಿ 70 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಸರ್ಕಾರ ಅಧಿಕೃತಗೊಳಿಸಿಲ್ಲವಾದರೂ, ಅಲ್ಲಿನ ಆಸ್ಪತ್ರೆಗಳು ನೀಡಿದ ಮಾಹಿತಿಯ ಪ್ರಕಾರ, 70 ಜನರು ಮೃತಪಟ್ಟು, 90 ಮಂದಿ ಗಾಯಗೊಂಡಿದ್ದಾರೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಿಲಿಟರಿ ಅಧಿಕಾರಿಯೊಬ್ಬರು ಕನಿಷ್ಠ 15 ಜನರು ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಹಂಗಾಮಿ ಅಧ್ಯಕ್ಷೆಯಾಗಿರುವ ಡೆಲ್ಸಿ ರೋಡ್ರಿಗಸ್ ಅವರು ಶಾಂತಿ ಕಾಪಾಡಲು ದೇಶದ ನಿವಾಸಿಗಳಿಗೆ ಕರೆ ನೀಡಿದ್ದಾರೆ.

ಇವುಗಳನ್ನೂ ಓದಿ: