ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಸುಂಕವನ್ನು ಒಂದು ಹಂತದವರೆಗೆ ಕಡಿಮೆ ಮಾಡಲಾಗುವುದು- ಟ್ರಂಪ್
ಭಾರತದ ಮೇಲೆ ಶೇ 50ರಷ್ಟು ಸುಂಕ ವಿಧಿಸಿದ್ದ ಟ್ರಂಪ್ ಇದೀಗ ಹೊಸ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿದ್ದು, ಸುಂಕ ಕಡಿಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.


Published : November 11, 2025 at 11:39 AM IST
ನ್ಯೂಯಾರ್ಕ್: ಭಾರತದೊಂದಿಗೆ ನ್ಯಾಯಯುತ ವ್ಯಾಪಾರ ಒಪ್ಪಂದ ನಡೆಸುವ ನಿಟ್ಟಿನಲ್ಲಿ ಬಹಳ ಹತ್ತಿರದಲ್ಲಿದ್ದೇವೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಧಿಸಲಾಗಿರುವ ಸುಂಕವನ್ನು ಒಂದು ಹಂತಕ್ಕೆ ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ.
ಭಾರತದೊಂದಿಗೆ ನಾವು ಒಪ್ಪಂದ ಮಾಡುತ್ತಿದ್ದು, ಈ ಹಿಂದೆ ಮಾಡಲಾದ ಒಪ್ಪಂದಕ್ಕಿಂತ ಇದು ಭಿನ್ನವಾಗಿರಲಿದೆ ಎಂದಿದ್ದಾರೆ.
ಓವಲ್ ಕಚೇರಿಯಲ್ಲಿ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಸೆರ್ಗಿಯೊ ಗೋರ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಟ್ರಂಪ್ ಮಾತನಾಡಿದರು.
ನಾವು ನ್ಯಾಯಯುತ ವ್ಯಾಪಾರ ಒಪ್ಪಂದ ಮಾಡುತ್ತಿದ್ದೇವೆ. ಈ ಹಿಂದೆ ಕೆಲವು ಅಸಮ್ಮತ ವ್ಯಾಪಾರ ಒಪ್ಪಂದ ಮಾಡಿದ್ದೆವು ಎಂದರು.
ಈ ಒಪ್ಪಂದ ಅಂತಿಮ ಹಂತದಲ್ಲಿದಲ್ಲಿದೆ. ಎಲ್ಲರಿಗೂ ಒಳಿತಾಗುವ ಒಪ್ಪಂದವಿದು. ಈ ಹಿಂದಿನ ಸರ್ಕಾರದಲ್ಲಿ ಅಧ್ಯಕ್ಷರಾಗಿದ್ದ ಜೋ ಬೈಡೆನ್ ಭಾರತದ ಬಗ್ಗೆ ತಿಳಿದಿರಲಿಲ್ಲ. ಅವರಿಗೆ ಏನೂ ಗೊತ್ತಿರಲಿಲ್ಲ ಎಂದೂ ಕೂಡ ಟ್ರಂಪ್ ಹೇಳಿದರು.
ಭಾರತದೊಂದಿಗಿನ ಸುಂಕದ ದರವನ್ನು ಕಡಿಮೆ ಮಾಡಲು ಟ್ರಂಪ್ ಮುಂದಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಹಿನ್ನೆಲೆಯಲ್ಲಿ ಭಾರತದ ಮೇಲೆ ಅತಿ ಹೆಚ್ಚಿನ ಸುಂಕ ಹೇರಲಾಗಿತ್ತು. ಅವರು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದ್ದು, ಸುಂಕವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ನಾವು ಸುಂಕವನ್ನು ಸಾಕಷ್ಟು ಕಡಿಮೆ ಮಾಡುತ್ತೇವೆ. ಈ ಸುಂಕವನ್ನು ಒಂದು ಹಂತಕ್ಕೆ ಮಾತ್ರ ಕಡಿಮೆ ಮಾಡಲಾಗುವುದು. ಸುಂಕವಿಲ್ಲದೆ ನಮ್ಮ ದೇಶವೂ ಹಲವು ವರ್ಷಗಳ ಕಾಲ ಸಾಕಷ್ಟು ತೊಂದರೆ ಅನುಭವಿಸಿತ್ತು ಎಂದರು.
ಭಾರತದ ಮೇಲೆ ಶೇ 50ರಷ್ಟು ಸುಂಕ ಹಾಗೂ ರಷ್ಯಾದಿಂದ ತೈಲ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ದಂಡನಾತ್ಮಕವಾಗಿ ಶೇ 25ರಷ್ಟು ಹೆಚ್ಚುವರಿ ಶುಲ್ಕ ವಿಧಿಸಿದ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕ ಸಂಬಂಧದಲ್ಲಿ ಬಿಕ್ಕಟ್ಟು ಎದುರಾಗಿತ್ತು. ಈ ಸುಂಕ ಅನ್ಯಾಯ, ಸಕಾರಣವಲ್ಲದ್ದು ಎಂದು ಭಾರತ ಟೀಕಿಸಿತ್ತು. ಅಲ್ಲದೇ ದೇಶದ ಹಿತಾಸಕ್ತಿಯ ಆಧಾರದ ಮೇಲೆ ನಮ್ಮ ಇಂಧನ ನೀತಿ ನಿರ್ವಹಣೆ ಮಾಡಲಾಗುತ್ತಿತ್ತು ಎಂದು ವಿದೇಶಾಂಗ ಇಲಾಖೆ ತಿಳಿಸಿತ್ತು.
ಅಮೆರಿಕ ಮತ್ತು ಭಾರತ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕಾಗಿ ಇದುವರೆಗೆ ಐದು ಸುತ್ತಿನ ಮಾತುಕತೆಗಳು ನಡೆದಿದೆ. ಕಳೆದ ತಿಂಗಳಿಂದ ಎರಡೂ ದೇಶಗಳು ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸಲು ಚರ್ಚೆ ನಡೆಸುತ್ತಿವೆ.
ಸುಂಕ ವಿರೋಧಿಗಳು ಮೂರ್ಖರೆಂದ ಟ್ರಂಪ್: ತಮ್ಮ ಸುಂಕ ನೀತಿಯನ್ನು ಸಮರ್ಥಿಸಿಕೊಂಡಿರುವ ಡೊನಾಲ್ಡ್ ಟ್ರಂಪ್, ಈ ನೀತಿಯನ್ನು ವಿರೋಧಿಸುವವರು "ಮೂರ್ಖರು" ಎಂದಿದ್ದರು. ಸಾಮಾಜಿಕ ಮಾಧ್ಯಮ ಟ್ರೂತ್ನಲ್ಲಿ ಭಾನುವಾರ ಪೋಸ್ಟ್ ಹಂಚಿಕೊಂಡಿದ್ದ ಅವರು, ಅಮೆರಿಕ ವಿಶ್ವದ ಅತ್ಯಂತ ಶ್ರೀಮಂತ, ಗೌರವಾನ್ವಿತ ದೇಶ. ಹಣದುಬ್ಬರವಿಲ್ಲ ಮತ್ತು ದಾಖಲೆಯ ಷೇರು ಮಾರುಕಟ್ಟೆ ಬೆಲೆಯನ್ನು ಹೊಂದಿದೆ. ಸುಂಕಗಳಿಂದ ಅಮೆರಿಕ ಟ್ರಿಲಿಯಲ್ ಡಾಲರ್ಗಟ್ಟಲೆ ಆದಾಯ ಪಡೆಯುತ್ತಿದೆ. ಇದು 37 ಟ್ರಿಲಿಯನ್ ಡಾಲರ್ ಸಾಲವನ್ನು ಶೀಘ್ರದಲ್ಲೇ ಮರು ಪಾವತಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದರು.
ಇವುಗಳನ್ನೂ ಓದಿ: 'ಸುಂಕ ವಿರೋಧಿಗಳು ಮೂರ್ಖರು': ಅಮೆರಿಕದ ಪ್ರತಿ ವ್ಯಕ್ತಿಗೆ $2,000 ಲಾಭಾಂಶದ ಭರವಸೆ ಕೊಟ್ಟ ಟ್ರಂಪ್
ಮೋದಿ ಅದ್ಭುತ ವ್ಯಕ್ತಿ, ನನ್ನ ಸ್ನೇಹಿತ: ಮುಂದಿನ ವರ್ಷ ಭಾರತ ಪ್ರವಾಸದ ಸುಳಿವು ನೀಡಿದ ಟ್ರಂಪ್

