ETV Bharat / international

H-1B ವೀಸಾ ವಂಚನೆ ಪ್ರಕರಣ: ಭಾರತೀಯ ಐಟಿ ಸಂಸ್ಥೆಯ ಅಧಿಕೃತ ಹೆಸರು ಉಲ್ಲೇಖ

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ಕಾರ್ಯಪಡೆ ಅಡಿ ನಡೆಯುತ್ತಿರುವ ಈ ತನಿಖೆಯಲ್ಲಿ, ಭಾರತೀಯ ಐಟಿ ಸಂಸ್ಥೆ ಕಾಗ್ನಿಜೆಂಟ್ ಸೇರಿ ಹಲವು ಕಂಪನಿಗಳು ತನಿಖೆಯ ವ್ಯಾಪ್ತಿಗೆ ಬಂದಿವೆ.

US Launches Major H-1B Visa Fraud Investigation; Official Names Indian IT Firm
ಸಂಗ್ರಹ ಚಿತ್ರ (IANS)
author img

By ETV Bharat Karnataka Team

Published : July 9, 2026 at 4:15 PM IST

1 Min Read
Choose ETV Bharat

ವಾಷಿಂಗ್ಟನ್: H-1B ಮತ್ತು PERM ಉದ್ಯೋಗ ವೀಸಾ ವಿಚಾರದಲ್ಲಿ ಹಲವು ಕಂಪನಿಗಳು ಮಾಡಿರುವ ವಂಚನೆ ಹಾಗೂ ಮೋಸದ ಕುರಿತು ಅಮೆರಿಕವು ಬುಧವಾರ ತನಿಖೆ ಆರಂಭಿಸಿದೆ. ಭಾರತೀಯ ಐಟಿ ಸಂಸ್ಥೆ ಕಾಗ್ನಿಜೆಂಟ್ ಸೇರಿ ಹಲವು ಕಂಪನಿಗಳು ತನಿಖೆಯ ವ್ಯಾಪ್ತಿಗೆ ಬಂದಿವೆ.

ಪರಿಶೀಲನೆಯಲ್ಲಿರುವ ಹಲವು ಕಂಪನಿಗಳಲ್ಲಿ ಭಾರತೀಯ ಐಟಿ ಸಂಸ್ಥೆಯಾದ ಕಾಗ್ನಿಜೆಂಟ್​ನ ಅಧಿಕೃತ ಹೆಸರು ಕೂಡ ಸೇರಿಕೊಂಡಿದೆ ಎಂದು ಅಮೆರಿಕ ಫೆಡರಲ್ ಕಾರ್ಮಿಕ ಅಧಿಕಾರಿಯೊಬ್ಬರು ಮಾಹಿತಿ ಒದಗಿಸಿದ್ದಾರೆ.

ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುವ ಇನ್ಸ್‌ಪೆಕ್ಟರ್ ಜನರಲ್ (OIG) ಕಚೇರಿಯು ವ್ಯಾಪಕವಾದ ಯೋಜನೆಗಳನ್ನು ಬಯಲು ಮಾಡಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇದರಲ್ಲಿ ಉದ್ಯೋಗದಾತರು ಮತ್ತು ದಲ್ಲಾಳಿಗಳು ಮೋಸದಿಂದ ಅರ್ಜಿಗಳನ್ನು ಸಲ್ಲಿಸಿ, ವೇತನ‌ದ ಒಂದು ಭಾಗವನ್ನು ಒತ್ತಡ‌ದಿಂದ ಕಮಿಷನ್‌ ರೂಪದಲ್ಲಿ ಪಡೆಯುವ ವ್ಯವಸ್ಥೆಯ ಮೂಲಕ ವಿದೇಶಿ ಕಾರ್ಮಿಕರನ್ನು ಶೋಷಿಸುತ್ತಿವೆ. ಕಡಿಮೆ ವೇತನದ ಕಾರ್ಮಿಕರನ್ನು ವಿದೇಶಗಳಿಂದ ಕರೆಸಿಕೊಂಡು, ಅಮರಿಕದ ಕಾರ್ಮಿಕರ ಅವಕಾಶಗಳನ್ನು ಕಿತ್ತುಕೊಳ್ಳುತ್ತಿವೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

"ನಾವು ಈಗಾಗಲೇ ಸಮನ್ಸ್‌ಗಳನ್ನು ನೀಡಲು ಪ್ರಾರಂಭಿಸಿದ್ದೇವೆ. ಪ್ರತಿಯೊಂದು ಸುಳಿವು ಪತ್ತೆ ಹಚ್ಚುತ್ತೇವೆ. ಕಾಗ್ನಿಜೆಂಟ್‌ನಂತಹ ಕೆಲವು ದೊಡ್ಡ ಕಂಪನಿಗಳ ಬಗ್ಗೆ ಮಾಹಿತಿ ನೀಡುವವರು ನಮ್ಮಲ್ಲಿದ್ದಾರೆ. H-1B ಮತ್ತು PERM ಉದ್ಯೋಗ ವೀಸಾ ವಿಚಾರದಲ್ಲಿನ ಈ ವಂಚನೆ ಬಗ್ಗೆ ಚರ್ಚೆ ನಡೆಸುತ್ತಿದ್ದರೆ" ಎಂದು ಕಾರ್ಮಿಕ ಇಲಾಖೆಯ ಇನ್ಸ್‌ಪೆಕ್ಟರ್ ಜನರಲ್ ಆಂಥೋನಿ ಡಿ'ಎಸ್ಪೊಸಿಟೊ ಬುಧವಾರ ಫಾಕ್ಸ್ ಬಿಸಿನೆಸ್‌ಗೆ ತಿಳಿಸಿದ್ದಾರೆ.

ಈ ಕುರಿತ ವಂಚನೆ ತಡೆಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ನೇತೃತ್ವದ ಕಾರ್ಯಪಡೆ ಕ್ರಮ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ರೀತಿಯ ಅಕ್ರಮಗಳು ಕಾರ್ಮಿಕರ ಕೊರತೆಯನ್ನು ಪರಿಹರಿಸಲು ವಿನ್ಯಾಸಗೊಳಿಸಲಾದ ಕಾರ್ಮಿಕ ಇಲಾಖೆಯ ಕಾರ್ಯಕ್ರಮಗಳ ವಿಶ್ವಾಸಾರ್ಹತೆಯನ್ನು ಹಾಳುಮಾಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುರ್ಬಲ ಕಾರ್ಮಿಕರನ್ನು ಶೋಷಿಸುವ ಮತ್ತು ಅಮೆರಿಕನ್ ಕಾರ್ಮಿಕರಿಂದ ಉದ್ಯೋಗಗಳನ್ನು ಕದಿಯುವ ಎಲ್ಲಾ ಮೋಸದ ಜಾಲಗಳನ್ನು ಬೇರುಸಹಿತ ತೆಗೆದುಹಾಕಲು OIG ದೃಢನಿಶ್ಚಯ ಹೊಂದಿದೆ ಅಂತಲೂ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ವಲಸೆ ಮತ್ತು ವಿದೇಶಿ ನಿಯಮ 2025ಕ್ಕೆ ಬದಲಾವಣೆ: ವೀಸಾ ಅವಧಿ ಕುರಿತು ಮಹತ್ವದ ಸೂಚನೆ!