ಅಫ್ಘಾನಿಸ್ತಾನದ ವಿರುದ್ಧದ ಯುದ್ದದಲ್ಲಿ ಪಾಕಿಸ್ತಾನ ಬೆಂಬಲಿಸಿದ ಅಮೆರಿಕ
ತಾಲಿಬಾನ್ ದಾಳಿಯನ್ನು ಪಾಕಿಸ್ತಾನ ಸೂಕ್ತವಾಗಿ ನಿರ್ವಹಣೆ ಮಾಡಿದ್ದು, ಪಾಕಿಸ್ತಾನವನ್ನು ಬೆಂಬಲಿಸುವುದಾಗಿ ಅಲಿಸನ್ ಹೂಕರ್ ತಿಳಿಸಿದ್ದಾರೆ


Published : February 28, 2026 at 12:20 PM IST
ವಾಷಿಂಗ್ಟನ್, ಅಮೆರಿಕ: ನೆರೆಯ ಅಫ್ಘಾನಿಸ್ತಾನದ ಮೇಲೆ ಯುದ್ಧ ಸಾರಿರುವ ಪಾಕಿಸ್ತಾನವನ್ನು ಬೆಂಬಲಿಸುವುದಾಗಿ ಅಮೆರಿಕ ತಿಳಿಸಿದೆ. ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ತಾಲಿಬಾನ್ ದಾಳಿಯನ್ನು ಪಾಕಿಸ್ತಾನ ಸೂಕ್ತವಾಗಿ ನಿರ್ವಹಣೆ ಮಾಡಿದ್ದು, ಪಾಕಿಸ್ತಾನವನ್ನು ಬೆಂಬಲಿಸುವುದಾಗಿ ಪಾಕಿಸ್ತಾನದ ಅಧೀನ ಕಾರ್ಯದರ್ಶಿ ಜೊತೆಗಿನ ಮಾತುಕತೆಯ ನಂತರ, ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಅಲಿಸನ್ ಹೂಕರ್ ಎಕ್ಸ್ ಜಾಲತಾಣದಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಅಮ್ನಾ ಬಲೋಚ್ ಮಾತನಾಡಿ, ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಇತ್ತೀಚಿನ ಸಂಘರ್ಷದಲ್ಲಿ ಸಾವನ್ನಪ್ಪಿದ ಜೀವಗಳಿಗೆ ಸಂತಾಪ ಸೂಚಿಸಿದರು. ಆದರೆ, ಅವರು ಪಾಕ್ ಮತ್ತು ಅಫ್ಘಾನ್ ನಡುವಿನ ಸಂಘರ್ಷ ಕೊನೆಗೊಳಿಸುವ ಕುರಿತು ಕರೆ ನೀಡಲಿಲ್ಲ.
Spoke today with Pakistan Foreign Secretary Baloch to express condolences for lives lost in the recent conflict between Pakistan and the Taliban. We continue to monitor the situation closely and expressed support for Pakistan’s right to defend itself against Taliban attacks.
— Allison M. Hooker (@UnderSecStateP) February 27, 2026
ಈ ಹಿಂದೆ ಮಾತನಾಡಿದ ಬ್ರಿಟನ್, ಉಭಯ ದೇಶಗಳ ನಡುವಿನ ಬಿಕ್ಕಟ್ಟನ್ನು ಕೊನೆಗೊಳಿಸುವಂತೆ ತಿಳಿಸಿದರು. ಚೀನಾ ಕೂಡ ಕದನ ವಿರಾಮ ಮಾತುಕತೆ ನಡೆಸುವಂತೆ ಕರೆ ನೀಡಿತು. 2021ರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೈನ ಹಿಂಪಡೆದ ಮೇಲೆ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಅಫ್ಘಾನಿಸ್ತಾನದ ಪ್ರಮುಖ ನಗರಗಳ ಮೇಲೆ ಪಾಕಿಸ್ತಾನ ಬಾಂಬ್ ದಾಳಿ ಮಾಡಿದೆ.
ಈ ಹಿಂದೆ ಅಫ್ಘಾನಿಸ್ತಾನ ಯುದ್ಧವು ಪಾಕಿಸ್ತಾನದೊಂದಿಗಿನ ಅಮೆರಿಕದ ಸಂಬಂಧವನ್ನು ಹದಗೆಡಿಸಿದೆ. ಮಾಜಿ ಅಧ್ಯಕ್ಷ ಜೋ ಬೈಡನ್ ಅವರು ತಾಲಿಬಾನ್‌ಗೆ ಹಿಂದೆ ಬೆಂಬಲ ನೀಡಿದ್ದರಿಂದ ಇಸ್ಲಾಮಾಬಾದ್‌ನೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಅಮೆರಿಕವು ಪಾಶ್ಚಿಮಾತ್ಯ ಪರ ಸರ್ಕಾರವನ್ನು ಬೆಂಬಲಿಸಿತ್ತು.
ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಧೋರಣೆ ಬದಲಾಯಿಸಿದ್ದು, ಪಾಕಿಸ್ತಾನದ ಜೊತೆಗೆ ಆತ್ಮೀಯ ಸಂಬಂದ ಮುಂದುವರೆಸಿದ್ದಾರೆ. ಕಳೆದ ವರ್ಷ ಮೇನಲ್ಲಿ ನಡೆದ ಭಾರತ- ಪಾಕಿಸ್ತಾನ ನಡುವಿನ ಸಂಘರ್ಷದ ಸಂದರ್ಭದಲ್ಲಿ ಅಮೆರಿಕ ಮಧ್ಯಸ್ಥಿಕೆವಹಿಸಿತು ಎಂದು ಪಾಕಿಸ್ತಾನ ಹೊಗಳುವ ಪ್ರಯತ್ನ ಮಾಡಿತ್ತು. ಟ್ರಂಪ್ಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿತ್ತು. ಇದೀಗ ಅಪ್ಘಾನನಿಸ್ತಾನದ ಮೇಲಿನ ದಾಳಿಯಲ್ಲೂ ಟ್ರಂಪ್, ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಶ್ಲಾಘಿಸಿದ್ದು, ಬೆಂಬಲಕ್ಕೆ ನಿಂತಿದ್ದಾರೆ.
ನಿಮಗೆ ಒಬ್ಬ ಮಹಾನ್ ಪ್ರಧಾನಿ ಹಾಗೂ ಮಹಾನ್ ನಾಯಕರಿದ್ದಾರೆ. ಪಾಕಿಸ್ತಾನ ಉತ್ತಮ ಕಾರ್ಯ ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಶಹಬ್ಬಾಷ್ಗಿರಿ ಕೊಟ್ಟಿದ್ದಾರೆ.
ಪಾಕಿಸ್ತಾನ ವಾಯುಪಡೆಯು ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾದಲ್ಲಿರುವ ತಾಲಿಬಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಪಿಟಿವಿ ನ್ಯೂಸ್ ವರದಿ ಮಾಡಿದೆ.
ಇವುಗಳನ್ನೂ ಓದಿ:
ಅಫ್ಘಾನಿಸ್ತಾನದ ಮೇಲಿನ ದಾಳಿ ಖಂಡಿಸಿ ಭಾರತ ನೀಡಿದ್ದ ಹೇಳಿಕೆಯನ್ನು ತಿರಸ್ಕರಿಸಿದ ಪಾಕ್

