ETV Bharat / international

ಕ್ಷಿಪಣಿ ದಾಳಿಗೆ ಆಕ್ರೋಶ: ಇರಾನ್‌ನಲ್ಲಿರುವ ತನ್ನ ರಾಯಭಾರ ಕಚೇರಿ ಮುಚ್ಚಿದ ಯುಎಇ

ಇರಾನ್ ನಡೆಸಿದ ದಾಳಿಗಳು ನಮ್ಮ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆ ಮತ್ತು ಪ್ರಾದೇಶಿಕ ಭದ್ರತೆ, ಸ್ಥಿರತೆಗೆ ನೇರ ಬೆದರಿಕೆ ಒಡ್ಡಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯ ಹೇಳಿದೆ.

ಸಾಂದರ್ಭಿಕ ಚಿತ್ರ
ಯುಎಇ ಧ್ವಜ (UAEembassyindia X handle)
author img

By ETV Bharat Karnataka Team

Published : March 2, 2026 at 11:02 AM IST

2 Min Read
Choose ETV Bharat

ಅಬುಧಾಬಿ(ಯುಎಇ): ಯುಎಇ ಮತ್ತು ಒಮಾನ್ ಗುರಿಯಾಗಿಸಿಕೊಂಡು ಇರಾನ್ ನಡೆಸಿದ ಕ್ಷಿಪಣಿ ದಾಳಿಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ತೀವ್ರವಾಗಿ ಖಂಡಿಸಿದೆ.

ಈ ದಾಳಿಗಳನ್ನು ಅಪಾಯಕಾರಿ ಎಂದಿರುವ ಯುನೈಟೆಡ್ ಅರಬ್ ಎಮಿರೇಟ್ಸ್, ಟೆಹ್ರಾನ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ತಕ್ಷಣವೇ ಮುಚ್ಚುವುದಾಗಿ ಮತ್ತು ರಾಯಭಾರಿ, ರಾಜತಾಂತ್ರಿಕ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.

ಇರಾನ್ ದಾಳಿಗಳು ದೇಶದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆ ಮತ್ತು ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗೆ ನೇರ ಬೆದರಿಕೆಯನ್ನು ಒಡ್ಡಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸಹೋದರ ಮತ್ತು ಸ್ನೇಹಪರ ರಾಷ್ಟ್ರಗಳ ಮೇಲೆ ದಾಳಿ ಸ್ವೀಕಾರಾರ್ಹವಲ್ಲ. ಎಲ್ಲಾ ಕಾನೂನು ಮತ್ತು ರಾಜಕೀಯ ಮಾನದಂಡಗಳಿಗೆ ಇದು ವಿರುದ್ಧವಾಗಿದೆ. ಯುದ್ಧ ಹೆಚ್ಚಾಗುವುದನ್ನು ತಡೆಯುವ ಪ್ರಯತ್ನಗಳನ್ನು ದುರ್ಬಲಗೊಳಿಸುವ ಮತ್ತು ಪ್ರಾದೇಶಿಕ ಉದ್ವಿಗ್ನತೆಯನ್ನು ಉಲ್ಬಣಗೊಳಿಸುವ ಸ್ವೀಕಾರಾರ್ಹವಲ್ಲದ ನಡೆ ಇದು ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ವಸತಿ ಪ್ರದೇಶಗಳು, ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಸೇವಾ ಸೌಲಭ್ಯಗಳು ಸೇರಿದಂತೆ ನಾಗರಿಕ ಸ್ಥಳಗಳ ವಿರುದ್ಧದ ಈ ದಾಳಿಗಳು ಆಕ್ರಮಣಕಾರಿ ಕೃತ್ಯಗಳಾಗಿವೆ. ಈ ದಾಳಿಗಳು ಅಮಾಯಕ ನಾಗರಿಕರನ್ನು ಅಪಾಯಕಾರಿ ಸನ್ನಿವೇಶಕ್ಕೆ ಒಳಪಡಿಸಿವೆ. ಇದು ರಾಷ್ಟ್ರೀಯ ಸಾರ್ವಭೌಮತ್ವದ ಉಲ್ಲಂಘನೆ ಮತ್ತು ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ನ ಸ್ಪಷ್ಟ ಉಲ್ಲಂಘನೆ ಎಂದು ಸಚಿವಾಲಯ ಕಿಡಿ ಕಾರಿದೆ.

ತನ್ನ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಯಾವುದೇ ಆಕ್ರಮಣಶೀಲತೆ ಕ್ರಮಗಳ ವಿರುದ್ಧ ಯುಎಇ ದೃಢ ಮತ್ತು ಅಚಲ ನಿಲುವನ್ನು ಪ್ರತಿಬಿಂಬಿಸಲಿದೆ ಎಂದು ಸಚಿವಾಲಯ ವಿವರಿಸಿದೆ.

ಪರಿಸ್ಥಿತಿ ಉಲ್ಬಣ ಕಡಿಮೆ ಮಾಡುವ ಅವಕಾಶಗಳನ್ನು ಹಾಳುಮಾಡುವ ಮತ್ತು ಪ್ರದೇಶವನ್ನು ಅತ್ಯಂತ ಅಪಾಯಕಾರಿ ಮಾರ್ಗಗಳತ್ತ ತಳ್ಳುವ ನಿರಂತರ ಆಕ್ರಮಣಕಾರಿ ಮತ್ತು ಪ್ರಚೋದನಕಾರಿ ವಿಧಾನದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆ ಮತ್ತು ಸ್ಥಿರತೆ, ಇಂಧನ ಭದ್ರತೆ ಮತ್ತು ಜಾಗತಿಕ ಆರ್ಥಿಕತೆಯ ಸ್ಥಿರತೆಗೆ ಬೆದರಿಕೆ ಎಂದು ಸಚಿವಾಲಯ ತಿಳಿಸಿದೆ.

ಇದಲ್ಲದೆ, ದುಬೈನ ಕ್ರೌನ್ ಪ್ರಿನ್ಸ್, ಉಪ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಪ್ರಾದೇಶಿಕ ಬೆಳವಣಿಗೆಗಳ ಕುರಿತು ಚರ್ಚಿಸಲು ಕುವೈತ್‌ನ ರಕ್ಷಣಾ ಸಚಿವ ಅಬ್ದುಲ್ಲಾ ಅಲಿ ಅಬ್ದುಲ್ಲಾ ಅಲ್-ಸಲೇಮ್ ಅಲ್-ಸಬಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯ (MOD ಯುಎಇ) ಹೇಳಿದೆ.

ಇದನ್ನೂ ಓದಿ: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ: ಜಾಗತಿಕ ನಾಯಕರು ಹೇಳಿದ್ದೇನು?