ಅಮೆರಿಕ ಸೈನಿಕರ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಟ್ರಂಪ್ ಪ್ರತಿಜ್ಞೆ: ಎದ್ದೇಳಿ 'USA ನಿಮ್ಮೊಂದಿಗಿದೆ' ಎಂದು ಇರಾನ್ ಜನತೆಗೆ ಕರೆ
ಇರಾನ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮೆರಿಕದ ಸೈನಿಕರ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ, ಇರಾನ್ ಆಡಳಿತದ ವಿರುದ್ಧ ಎದ್ದೇಳುವಂತೆ ಅಲ್ಲಿನ ಜನತೆಗೆ ಆಗ್ರಹಿಸಿದ್ದಾರೆ.

Published : March 2, 2026 at 1:42 PM IST
ನ್ಯೂಯಾರ್ಕ್(ಅಮೆರಿಕ): ನಮ್ಮ ಎಲ್ಲ ಉದ್ದೇಶ ಸಾಧಿಸುವವರೆಗೂ ಇರಾನ್ ವಿರುದ್ಧದ ಅತ್ಯಂತ ಅಗಾಧ ಮಿಲಿಟರಿ ದಾಳಿಗಳಲ್ಲಿ ಒಂದಾದ 'ಆಪರೇಷನ್ ಎಪಿಕ್ ಫ್ಯೂರಿ' ಪೂರ್ಣ ಬಲದೊಂದಿಗೆ ಮುಂದುವರೆಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.
ಅಮೆರಿಕ-ಇಸ್ರೇಲ್ ಭಾನುವಾರ ಇರಾನ್‌ನಾದ್ಯಂತ ನಿರ್ದಿಷ್ಟ ಗುರಿಗಳ ಮೇಲೆ ದಾಳಿ ನಡೆಸಿ, ಅಲ್ಲಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಬಳಿಕ ಕಾರ್ಯಾಚರಣೆಯು ಇನ್ನಷ್ಟು ತೀವ್ರಗೊಂಡಿದೆ. ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳ ಮೇಲೆ ಬೃಹತ್ ಬಾಂಬ್‌ಗಳನ್ನು ಪ್ರಯೋಗಿಸಿ ಯುದ್ಧನೌಕೆಗಳನ್ನು ನಾಶಮಾಡಲಾಗಿದೆ.
ಪ್ರತಿಯಾಗಿ, ಇಸ್ರೇಲ್ ಮತ್ತು ಕೊಲ್ಲಿ ಭಾಗದ ಸುತ್ತಮುತ್ತಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಮತ್ತು ಸೌದಿ ರಾಜಧಾನಿ ಮತ್ತು ಜಾಗತಿಕ ವ್ಯಾಪಾರ ಕೇಂದ್ರವಾದ ದುಬೈ ಮೇಲೆ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು.
ಸಾಮಾಹಿಕ ಜಾಲತಾಣ ಟ್ರೂಥ್ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮೇಲೆ ಆರಂಭಿಸಿರುವ ಯುದ್ಧದಲ್ಲಿ ಮೃತಪಟ್ಟ ಮೂರು ಯುಎಸ್ ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ, ಯುದ್ಧ ಕೊನೆಗೊಳ್ಳುವ ಮುನ್ನ ಹೆಚ್ಚಿನ ಸಾವು-ನೋವುಗಳ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ಮೇಲಿನ ಅಮೆರಿಕದ ದಾಳಿ ಸಂದರ್ಭದಲ್ಲಿ ಮೂವರು ಅಮೆರಿಕನ್ ಯೋಧರು ಸಾವನ್ನಪ್ಪಿದ್ದಾರೆ ಮತ್ತು ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಯುಎಸ್ ಮಿಲಿಟರಿ ಭಾನುವಾರ ಘೋಷಿಸಿತ್ತು.
ನಾಗರಿಕತೆಯ ಮೇಲೆ ಯುದ್ಧ ಮಾಡಿದ ಭಯೋತ್ಪಾದಕರಿಗೆ ಅಮೆರಿಕ ಅತ್ಯಂತ ಶಿಕ್ಷಾರ್ಹ ಹೊಡೆತ ನೀಡಲಿದೆ. ನಾವು 9 ಇರಾನಿ ನೌಕಾ ಹಡಗುಗಳನ್ನು ನಾಶಪಡಿಸಿದ್ದೇವೆ. ಅವುಗಳಲ್ಲಿ ಕೆಲವು ಪ್ರಮುಖ ಹಾಗೂ ಬೃಹತ್ ನೌಕೆಗಳಾಗಿವೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಸೌಲಭ್ಯಗಳು ಸೇರಿದಂತೆ ಇರಾನ್‌ನಾದ್ಯಂತ ನೂರಾರು ನೆಲೆಗಳನ್ನು ಯುಎಸ್ ಪಡೆಗಳು ಹೊಡೆದುರುಳಿಸಿವೆ. ಅಲ್ಲದೇ, ಇನ್ನೊಂದು ವಿಭಿನ್ನ ದಾಳಿಯಲ್ಲಿ, ನಾವು ಇರಾನ್‌ನ ನೌಕಾ ಪ್ರಧಾನ ಕಚೇರಿಯನ್ನು ಹೆಚ್ಚಾಗಿ ನಾಶಪಡಿಸಿದ್ದೇವೆ ಎಂದು ಯುಎಸ್ ಅಧ್ಯಕ್ಷರು ಪ್ರತಿಪಾದಿಸಿದ್ದಾರೆ.
ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರನ್ನು "ದರಿದ್ರ ಮತ್ತು ನೀಚ ವ್ಯಕ್ತಿ" ಎಂದು ಕರೆದಿರುವ ಟ್ರಂಪ್, ಖಮೇನಿ ಕೈಯಲ್ಲಿ ಅಮೆರಿಕನ್ನರ ರಕ್ತವಿದೆ. ಹಾಗೂ ವಿವಿಧ ದೇಶಗಳಲ್ಲಿ ಅಸಂಖ್ಯಾತ ಮುಗ್ಧ ಜನರ ಹತ್ಯೆಗೆ ಖಮೇನಿ ಕಾರಣ ಎಂದು ಆರೋಪಿಸಿದ್ದಾರೆ.
ಖಮೇನಿ ಸಾವಿನ ಘೋಷಣೆಯ ಬೆನ್ನಲ್ಲೇ ಇರಾನ್‌ನಾದ್ಯಂತ ಸಂಭ್ರಮಾಚರಣೆಗಳು ವರದಿಯಾಗಿವೆ. ಅದರ ಸಂಪೂರ್ಣ ಮಿಲಿಟರಿ ಕಮಾಂಡ್ ರಚನೆಯನ್ನು ಕಿತ್ತುಹಾಕಲಾಗಿದೆ. ಮಿಲಿಟರಿ ಕಮಾಂಡ್ನ ಅನೇಕರು ತಮ್ಮ ಜೀವ ಉಳಿಸಿಕೊಳ್ಳಲು ಶರಣಾಗಲು ಬಯಸುತ್ತಿದ್ದಾರೆ. ದೀರ್ಘ ಶ್ರೇಣಿಯ ಕ್ಷಿಪಣಿಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇರಾನಿನ ಆಡಳಿತವು ಎಲ್ಲರಿಗೆ ಗಂಭೀರ ಬೆದರಿಕೆಯಾಗಿದೆ. ಭಯೋತ್ಪಾದಕ ಸೈನ್ಯಗಳನ್ನು ಬೆಳೆಸುವ ರಾಷ್ಟ್ರವು ಅಂತಹ ಶಸ್ತ್ರಾಸ್ತ್ರಗಳನ್ನು ಹೊಂದಲು ನಾವು ಅನುಮತಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಸುಮಾರು 50 ವರ್ಷಗಳಿಂದ, ಈ ದುಷ್ಟ ಉಗ್ರಗಾಮಿಗಳು ಅಮೆರಿಕ, ಇಸ್ರೇಲ್ ಮೇಲೆ ದಾಳಿ ಮಾಡುತ್ತಿದ್ದಾರೆ. ಇರಾನ್ ಭಯೋತ್ಪಾದನೆಯಲ್ಲಿ ವಿಶ್ವದ ನಂಬರ್ ಒನ್ ರಾಷ್ಟ್ರ ಎಂದು ಟ್ರಂಪ್ ಟೀಕಿಸಿದ್ದಾರೆ.
ಅಮೆರಿಕ ಮಿಲಿಟರಿ ಗಣ್ಯ ಕ್ರಾಂತಿಕಾರಿ ಗಾರ್ಡ್‌ಗಳ ಪ್ರಧಾನ ಕಚೇರಿಯನ್ನು ನಾಶಪಡಿಸಿದೆ. ನಿಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವ ಮೂಲಕ ಸಾವಿನಿಂದ ವಿನಾಯಿತಿ ಪಡೆಯಿರಿ ಎಂದು ಮತ್ತೊಮ್ಮೆ ಕ್ರಾಂತಿಕಾರಿ ಗಾರ್ಡ್ ಹಾಗೂ ಪೊಲೀಸರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಇಲ್ಲದಿದ್ದರೆ ನೀವು ನಿಶ್ಚಿತ ಸಾವನ್ನು ಎದುರಿಸಿ, ಅದು ಖಚಿತ ಎಂದು ಟ್ರಂಪ್ ವಿಡಿಯೋ ಭಾಷಣದಲ್ಲಿ ಸಂದೇಶ ರವಾನಿಸಿದ್ದಾರೆ.
ಇರಾನ್‌ನ ಜನತೆ ಅಲ್ಲಿನ ಸರ್ಕಾರವನ್ನು ಸ್ವಾಧೀನಪಡಿಸಿಕೊಳ್ಳುವಂತೆ ಕರೆ ನೀಡಿರುವ ಟ್ರಂಪ್, ಇಸ್ಲಾಮಿಕ್ ಗಣರಾಜ್ಯವನ್ನು ಉರುಳಿಸಲು ಎದ್ದು ನಿಲ್ಲುವಂತೆ ಒತ್ತಾಯಿಸಿದ್ದಾರೆ. ''ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿರುವ ಎಲ್ಲಾ ಇರಾನಿನ ದೇಶಭಕ್ತರು ಧೈರ್ಯಶಾಲಿಗಳಾಗಿ, ವೀರರಾಗಿ ಮತ್ತು ನಿಮ್ಮ ದೇಶವನ್ನು ಮರಳಿ ಪಡೆಯಿರಿ ಎಂದು ನಾನು ಕರೆ ನೀಡುತ್ತೇನೆ. ಅಮೆರಿಕ ನಿಮ್ಮೊಂದಿಗಿದೆ" ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: 'ಕುವೈತ್ನಲ್ಲಿ ಅಮೆರಿಕದ F15 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ': ಫೋಟೋ, ವಿಡಿಯೋ ರಿಲೀಸ್ ಮಾಡಿದ ಇರಾನ್

