ETV Bharat / international

ನಮ್ಮ ಬಳಿ ಸಾಕಷ್ಟು ಶಸ್ತ್ರಾಸ್ತ್ರ ದಾಸ್ತಾನಿದೆ, ಶಾಶ್ವತವಾಗಿ ಯುದ್ಧ ಮುಂದುವರೆಸಬಹುದು: ಟ್ರಂಪ್ ಎಚ್ಚರಿಕೆ

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಇರಾನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ದಾಳಿ ಮುಂದುವರೆಸಿದೆ. ಇದರ ಮಧ್ಯೆ ಅಮೆರಿಕ ಅಧ್ಯಕ್ಷ ಟ್ರಂಪ್, ನಮ್ಮ ಬಳಿ ಸಾಕಷ್ಟು ಶಸ್ತ್ರಾಸ್ತ್ರ ದಾಸ್ತಾನಿದೆ ಎಂದು ಹೇಳಿದ್ದಾರೆ.

trump-says-we-have-virtually-unlimited-supply-of-these-weapons
ದಾಳಿಯಿಂದ ತೀವ್ರ ಹಾನಿಗೊಳಗಾದ ಟೆಹ್ರಾನ್‌ನಲ್ಲಿರುವ​ ಕಟ್ಟಡ (AP)
author img

By ETV Bharat Karnataka Team

Published : March 3, 2026 at 12:57 PM IST

2 Min Read
Choose ETV Bharat

ವಾಷಿಂಗ್ಟನ್(ಯುಎಸ್ಎ)​: ನಮ್ಮ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಇರಾನ್​ ಮೇಲೆ ನಿಖರ ದಾಳಿ ಮಾಡಿದ್ದೇವೆ ಎಂದು ತಮ್ಮ ಸೇನಾ ಕಾರ್ಯಾಚರಣೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಮರ್ಥಿಸಿಕೊಂಡಿದ್ದಾರೆ.

ಯುಎಸ್ ಕಾಂಗ್ರೆಸ್​​ಗೆ ಅಧಿಕೃತ ಪತ್ರ ಬರೆದಿರುವ ಅವರು, ಹಾರ್ಮುಜ್ ಜಲಸಂಧಿ ಮೂಲಕ ಸಮುದ್ರ ವಾಣಿಜ್ಯದ ಮುಕ್ತ ಹರಿವನ್ನು ಖಚಿತಪಡಿಸಿಕೊಳ್ಳಲು ಹಾಗೂ ಪ್ರಾದೇಶಿಕ ಮಿತ್ರರಾಷ್ಟ್ರಗಳ ರಕ್ಷಣೆಗೆ ಫೆ.28ರಂದು ತಮ್ಮ ನಿರ್ದೇಶನದಂತೆ ಅಮೆರಿಕ ಸೇನೆ ಇರಾನ್​ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ನಾಗರಿಕ ಸಾವು-ನೋವುಗಳನ್ನು ಕಡಿಮೆ ಮಾಡಲು, ಭವಿಷ್ಯದ ದಾಳಿಗಳನ್ನು ತಡೆಯಲು ಮತ್ತು ಇರಾನ್‌ನ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಟಸ್ಥಗೊಳಿಸುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಲಾಗಿದೆ ಎಂದಿದ್ದಾರೆ.

ನಮ್ಮ ಬಳಿ ಸಾಕಷ್ಟು ಶಸ್ತ್ರಾಸ್ತ್ರಗಳಿವೆ: ಪಶ್ಚಿಮ ಏಷ್ಯಾದ ಉದ್ವಿಗ್ನತೆಯ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಟ್ರಂಪ್​, ನಮ್ಮ ಬಳಿ ಸಾಕಷ್ಟು ಯುದ್ದ ಸಾಮಗ್ರಿ ದಾಸ್ತಾನಿದೆ. ಮಧ್ಯಮ ಮತ್ತು ಉನ್ನತ ಮಧ್ಯಮ ದರ್ಜೆಯ ಶಸ್ತ್ರಾಸ್ತ್ರಗಳ ಅನಿಯಮಿತ ಪೂರೈಕೆ ಹೊಂದಿದ್ದೇವೆ. ಈ ಪೂರೈಕೆಗಳೊಂದಿಗೆ ನಾವು ಶಾಶ್ವತವಾಗಿ ಯುದ್ದ ಮಾಡಬಹುದು. ಅಲ್ಲದೇ ನಮಗಾಗಿ ಹೊರ ದೇಶದಲ್ಲೂ ಹೆಚ್ಚುವರಿ ಉನ್ನತ ದರ್ಜೆಯ ಶಸ್ತ್ರಾಸ್ತ್ರ ಸಂಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳ ಕಮಾಂಡ್ ಪೋಸ್ಟ್‌ಗಳು ಹಾಗೂ ಇರಾನಿನ ವಾಯು ರಕ್ಷಣಾ ಮತ್ತು ಕ್ಷಿಪಣಿ ಉಡಾವಣಾ ತಾಣಗಳನ್ನು ನಾಶಪಡಿಸಿದ್ದೇವೆ ಎಂದು ಅಮೆರಿಕ ಸೇನೆ ಹೇಳಿದೆ.

ಹಿಜ್ಬುಲ್ಲಾ ಗುರಿಗಳ ಮೇಲೆ ಇಸ್ರೇಲ್​ ದಾಳಿ: ಬೈರುತ್‌ನ ಲೆಬನಾನ್ ವಲಯದಲ್ಲಿ ಪ್ಯಾಲೇಸ್ತೇನಿಯನ್​ ಇಸ್ಲಾಮಿಕ್ ಜಿಹಾದ್ ಕಮಾಂಡರ್ ಅಬು ಹಮ್ಜಾ ರಾಮಿ ಎಂಬವನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

ಐಡಿಎಫ್​ ಪಡೆಗಳು ಮತ್ತು ಇಸ್ರೇಲಿ ನಾಗರಿಕರ ವಿರುದ್ಧ ನೂರಾರು ಭಯೋತ್ಪಾದಕ ದಾಳಿ ಮತ್ತು ಭಯೋತ್ಪಾದಕ ನೇಮಕಾತಿ, ತರಬೇತಿ, ಶಸ್ತ್ರಾಸ್ತ್ರ ಸಂಗ್ರಹದಲ್ಲಿ ತೊಡಗಿದ್ದ ಅಬು ಹಮ್ಜಾ ರಾಮಿಯನ್ನು ಹತ್ಯೆ ಮಾಡಲಾಗಿದೆ. ಈತ ಸಿರಿಯಾ-ಲೆಬನಾನ್​ ಗಡಿಗಳೂ ಸೇರಿದಂತೆ ಪಿಐಜೆ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ಈತನ ಹತ್ಯೆಯ ಮೂಲಕ ಇಸ್ರೇಲ್ ವಿರುದ್ಧ ಭಯೋತ್ಪಾದಕ ಕಾರ್ಯಾಚರಣೆಗಳನ್ನು ನಡೆಸುವ ಪಿಐಜೆ ಸಾಮರ್ಥ್ಯ ಕುಗ್ಗಿಸಲಾಗಿದೆ ಎಂದು ಇಸ್ರೇಲ್​ ಸೇನೆ ಹೇಳಿದೆ.

ಇಸ್ರೇಲ್​ ವಾಯು ನೆಲೆ ಮೇಲೆ ದಾಳಿ ನಡೆಸಿದ್ದೇವೆ- ಹಿಜ್ಬುಲ್ಲಾ: ಇಸ್ರೇಲ್‌ನ ರಾಮತ್ ಡೇವಿಡ್ ವಾಯುನೆಲೆ ಮೇಲೆ ಇಂದು ದಾಳಿ ನಡೆಸಿದ್ದಾಗಿ ಹಿಜ್ಬುಲ್ಲಾ ಹೇಳಿಕೊಂಡಿದೆ ಎಂದು ವರದಿಯಾಗಿದೆ.

ಹಿಜ್ಬುಲ್ಲಾ ಪ್ರಕಾರ, ಇಸ್ರೇಲ್​ ದಾಳಿಗೆ ಪ್ರತಿಯಾಗಿ ಇಂದು ವಾಯುನೆಲೆಯಲ್ಲಿರುವ ರಾಡಾರ್ ತಾಣಗಳು ಮತ್ತು ನಿಯಂತ್ರಣ ಕೊಠಡಿಗಳ ಮೇಲೆ ಡ್ರೋನ್‌ಗಳನ್ನು ಹಾರಿಸಲಾಗಿದೆ.

ಬಹ್ರೈನ್​ನಲ್ಲಿರುವ ಅಮೆರಿಕದ ವಾಯುನೆಲೆ ಮೇಲೆ ಬೃಹತ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಮಂಗಳವಾರ ಮುಂಜಾನೆ ನಡೆಸಿದ ಈ ದಾಳಿಯಲ್ಲಿ ಅಮೆರಿಕದ ವಾಯುನೆಲೆಯ ಮುಖ್ಯ ಕಮಾಂಡ್​ ಕಟ್ಟಡ ನಾಶಪಡಿಸಿಕೊಂಡಿರುವುದಾಗಿ ಇರಾನ್​ ಐಆರ್‌ಜಿಸಿ ತಿಳಿಸಿದೆ.

ಇವುಗಳನ್ನೂ ಓದಿ: