ETV Bharat / international

ಅಮೆರಿಕ-ಇಸ್ರೇಲ್ ಭೀಕರ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ: 200ಕ್ಕೂ ಹೆಚ್ಚು ಸಾವು, ಇರಾನ್‌ನಲ್ಲಿ 40 ದಿನ ಶೋಕ

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ಈ ದಾಳಿಯಲ್ಲಿ ಖಮೇನಿ ಅವರ ಮಗಳು, ಮೊಮ್ಮಗಳು, ಸೊಸೆ ಮತ್ತು ಅಳಿಯನೂ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ತಿಳಿಸಿದೆ.

ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲ ಖಮೇನಿ
ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲ ಅಲಿ ಖಮೇನಿ (AP)
author img

By ETV Bharat Karnataka Team

Published : March 1, 2026 at 6:59 AM IST

|

Updated : March 1, 2026 at 7:35 AM IST

3 Min Read
Choose ETV Bharat

ವಾಷಿಂಗ್ಟನ್(ಯುಎಸ್ಎ): ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲ ಅಲಿ ಖಮೇನಿ(86) ಅವರನ್ನು ಹತ್ಯೆ ಮಾಡಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣ ವೇದಿಕೆ ಟ್ರೂಥ್‌ನಲ್ಲಿ ತಿಳಿಸಿದ್ದಾರೆ.

ದಾಳಿ ಮುಂದುವರೆಯುತ್ತದೆ-ಟ್ರಂಪ್: "ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ಸಾವನ್ನಪ್ಪಿದ್ದಾರೆ. ಇದು ಇರಾನ್ ಜನರು ಮಾತ್ರವಲ್ಲ, ಖಮೇನಿ ಮತ್ತವರ ರಕ್ತಪಿಪಾಸು ಗುಂಪಿನಿಂದ ಕೊಲ್ಲಲ್ಪಟ್ಟ ಅಥವಾ ಅಂಗವಿಕಲರಾದ ಜಗತ್ತಿನಾದ್ಯಂತದ ಅನೇಕ ದೇಶಗಳ ಜನರಿಗೆ ದೊರೆದ ನ್ಯಾಯ. ಖಮೇನಿ ನಮ್ಮ ಗುಪ್ತಚರ ಮತ್ತು ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಇರಾನಿನ ಜನರು ತಮ್ಮ ದೇಶವನ್ನು ಮರಳಿ ಪಡೆಯಲು ಇದು ಏಕೈಕ ದೊಡ್ಡ ಅವಕಾಶ. ಇರಾನ್‌ನ ಐಆರ್‌ಜಿಸಿ, ಸೇನೆ ಮತ್ತಿತರ ಭದ್ರತಾ ಮತ್ತು ಪೊಲೀಸ್ ಪಡೆಗಳು ಇನ್ನು ಮುಂದೆ ನಮ್ಮೊಂದಿಗೆ ಹೋರಾಡಲು ಬಯಸುವುದಿಲ್ಲ. ಭಾರೀ ಮತ್ತು ನಿಖರವಾದ ಬಾಂಬ್ ದಾಳಿ ವಾರವಿಡೀ ನಿರಂತರವಾಗಿ ಮುಂದುವರಿಯುತ್ತದೆ" ಎಂದು ಟ್ರಂಪ್ ತಿಳಿಸಿದ್ದಾರೆ.

200ಕ್ಕೂ ಹೆಚ್ಚು ಮಂದಿ ಸಾವು: ಈ ಭಯಾನಕ ದಾಳಿಗಳಲ್ಲಿ ಇಲ್ಲಿಯವರೆಗೆ 201ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇದರಲ್ಲಿ 108 ಮಂದಿ ವಿದ್ಯಾರ್ಥಿಗಳು ಎಂದು ವರದಿಯಾಗಿದೆ.

ಖಮೇನಿ ಮಗಳು, ಅಳಿಯ, ಮೊಮ್ಮಗಳು, ಸೊಸೆಯೂ ಹತ್ಯೆ: ಈ ದಾಳಿಯಲ್ಲಿ ಖಮೇನಿ ಅವರ ಮಗಳು, ಮೊಮ್ಮಗಳು, ಸೊಸೆ ಮತ್ತು ಅಳಿಯನೂ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ರಾಜ್ಯ ಮಾಧ್ಯಮ ವರದಿ ಮಾಡಿರುವುದನ್ನು ಟೈಮ್ಸ್ ಆಫ್ ಇಸ್ರೇಲ್ ಉಲ್ಲೇಖಿಸಿದೆ.

ಇರಾನ್ ವಿರುದ್ಧ ಅಮೆರಿಕ, ಇಸ್ರೇಲ್ ಜಂಟಿ ದಾಳಿ
ಇರಾನ್ ವಿರುದ್ಧ ಅಮೆರಿಕ, ಇಸ್ರೇಲ್ ಜಂಟಿ ಸೇನಾ ದಾಳಿ (AP)

ಇರಾನ್‌ ರಕ್ಷಣಾ ಸಚಿವ, ಕ್ರಾಂತಿಕಾರಿ ಗಾರ್ಡ್ಸ್ ಕಮಾಂಡರ್, ಉನ್ನತ ಭದ್ರತಾ ಸಲಹೆಗಾರ ಹತ್ಯೆ-ಇಸ್ರೇಲ್: ಇರಾನ್‌ನ ರಕ್ಷಣಾ ಮಂತ್ರಿ, ಉನ್ನತ ಭದ್ರತಾ ಸಲಹೆಗಾರ ಮತ್ತು ಕ್ರಾಂತಿಕಾರಿ ಗಾರ್ಡ್‌ನ ಕಮಾಂಡರ್‌ನನ್ನು ಕೊಂದು ಹಾಕಿದ್ದೇವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

'ಇರಾನ್‌ನಲ್ಲಿ ನೂರಾರು ಮಂದಿ ಸಾವು': ಯುಎಸ್-ಇಸ್ರೇಲ್ ದಾಳಿಯಲ್ಲಿ ನೂರಾರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಇರಾನಿನ ರಾಜತಾಂತ್ರಿಕ ಅಧಿಕಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಕ್ಷಿಪಣಿ ಉಡಾವಣೆ
ಅಮೆರಿಕ ನೌಕಾಪಡೆಯಿಂದ ಕ್ಷಿಪಣಿ ದಾಳಿ (AP)

ಖಮೇನಿ ಹತ್ಯೆಗೆ ತಕ್ಕ ಉತ್ತರ- ಇರಾನ್ ಶಪಥ: ಖಮೇನಿ ಹತ್ಯೆಗೆ ಪ್ರತಿಕ್ರಿಯಿಸಿದ ಇರಾನ್ ಸರ್ಕಾರ, ಈ ಮಹಾ ಅಪರಾಧಕ್ಕೆ ನಾವು ತಕ್ಕ ಉತ್ತರ ನೀಡದೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಖಮೇನಿ ಅವರ ಹತ್ಯೆಗೆ 'ಕಠಿಣ, ನಿರ್ಣಾಯಕ ಮತ್ತು ವಿಷಾದ ಹುಟ್ಟಿಸುವಂತಹ ಶಿಕ್ಷೆ' ನೀಡುತ್ತೇವೆ ಎಂದು ಇರಾನಿನ ಕ್ರಾಂತಿಕಾರಿ ಗಾರ್ಡ್(IRGC) ಹೇಳಿರುವುದಾಗಿ ವರದಿಯಾಗಿದೆ.

40 ದಿನ ಶೋಕಾಚರಣೆ ಘೋಷಣೆ: ಖಮೇನಿ ಹತ್ಯೆಯ ಹಿನ್ನೆಲೆಯಲ್ಲಿ 40 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ಮಾಡಲಾಗುವುದು ಎಂದು ಇರಾನ್ ಘೋಷಣೆ ಮಾಡಿದೆ.

ಖಮೇನಿ ಸಾವಿಗೆ ಇರಾನ್‌ನಲ್ಲಿ ಜನರ ಸಂಭ್ರಮ: ಈ ಮಧ್ಯೆ, ಇರಾನ್‌ನಲ್ಲಿ ಜನರು ಗುಂಪುಗಳು ಬೀದಿಗಳಲ್ಲಿ ಸಂಭ್ರಮಿಸುತ್ತಿರುವ ಕುರಿತ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ.

ಇರಾನ್‌ನ ಹಲವು ನಗರಗಳಲ್ಲಿ ಜನರು ಗುಂಪು ಸೇರಿ ಸಂಭ್ರಮಿಸುತ್ತಿರುವ ಸುದ್ದಿಯನ್ನು ಸಿಎನ್‌ಎನ್ ವರದಿ ಮಾಡಿದೆ. ಈ ವರದಿಗಳಲ್ಲಿ, "ಇಸ್ಲಾಮಿಕ್ ಗಣರಾಜ್ಯಕ್ಕೆ ಸಾವು" ಮತ್ತು "ಶಾ ಚಿರಾಯುವಾಗಲಿ" ಎಂಬ ಘೋಷಣೆಗಳು ಮೊಳಗಿವೆ.

ಫಾಕ್ಸ್ ನ್ಯೂಸ್ ವಿಡಿಯೋ ಪೋಸ್ಟ್ ಮಾಡಿದ್ದು ಇದರಲ್ಲಿ, ಇರಾನ್‌ನ ಕರಾಜ್‌ನ ಉಪನಗರ ಬೆಸಾತ್ ಪಟ್ಟಣದ ಬೀದಿಗಳಲ್ಲಿ ಇರಾನಿಯನ್ನರು ಖಮೇನಿ ಸಾವನ್ನು ಸಂಭ್ರಮಿಸುತ್ತಿರುವುದು ಕಂಡುಬರುತ್ತದೆ.

ಇರಾನಿನ ಕಾರ್ಯಕರ್ತೆ ಮತ್ತು ಪತ್ರಕರ್ತೆ ಮಸಿಹ್ ಅಲಿನೆಜಾದ್ ಅವರು ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿ, "ಇಸ್ರೇಲ್ ಕ್ರೂರ ಖಮೇನಿಯನ್ನು ಕೊಂದಿದೆ ಎಂಬ ಸುದ್ದಿ ತಿಳಿದ ನಂತರ ಇರಾನಿನ ಮಹಿಳೆಯರು ಕೂದಲು ಮುಚ್ಚದೆ ಬೀದಿಗಳಲ್ಲಿ ಕುಣಿಯುತ್ತಿದ್ದಾರೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನೊಂದು ವಿಡಿಯೋದಲ್ಲಿ, "ಇರಾನ್ ಒಳಗೆ ಇರಾನಿನ ಜನರು ಸಂಭ್ರಮಿಸುತ್ತಿರುವ ವಿಡಿಯೋ. ನಾನು ಕನಸು ಕಾಣುತ್ತಿದ್ದೇನೆಯೇ?" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇರಾನ್ ಮೇಲೆ ಅಮೆರಿಕ ಇಸ್ರೇಲ್ ದಾಳಿ
ಇರಾನ್ ಮೇಲೆ ಅಮೆರಿಕ ಇಸ್ರೇಲ್ ದಾಳಿ (AP)

ಲಂಡನ್‌ನಿಂದ ಬಂದಿರುವ ವರದಿಗಳಲ್ಲಿ, ಲಂಡನ್‌ನ ಬೀದಿಗಳಲ್ಲಿ ವಲಸಿಗ ಇರಾನಿಯನ್ನರು ಮತ್ತು ಇಸ್ರೇಲಿಗಳು ನೃತ್ಯ ಮಾಡುವ ವಿಡಿಯೋಗಳಿವೆ.

ಖಮೇನಿ ಉತ್ತರಾಧಿಕಾರಿ ಯಾರು?: ಖಮೇನಿ ಹತ್ಯೆಯ ನಂತರ ಇದೀಗ ಇರಾನ್ ಆಡಳಿತ ಉತ್ತರಾಧಿಕಾರಿಯನ್ನು ನೇಮಿಸುತ್ತದೆಯೇ? ಖಮೇನಿ ಸಾವು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಕ್ಕೆ ಅಂತ್ಯ ಹಾಡುತ್ತದೆಯೇ ಎಂಬುದು ಪ್ರಶ್ನೆ.

ಇದನ್ನೂ ಓದಿ: ಇರಾನ್‌ನ ಹಾರ್ಮೋಜ್‌ಗನ್‌ನಲ್ಲಿ ಇಸ್ರೇಲ್​ ನಡೆಸಿದ ದಾಳಿಯಲ್ಲಿ 40 ವಿದ್ಯಾರ್ಥಿಗಳು ಸಾವು: ರಾಜ್ಯ ಮಾಧ್ಯಮ

Last Updated : March 1, 2026 at 7:35 AM IST