ETV Bharat / international

ಇಸ್ರೇಲ್ ಪ್ರಧಾನಿ ಜೊತೆಗಿನ ಮಾತುಕತೆಯಲ್ಲೂ ಭಾರತ-ಪಾಕ್​ ಯುದ್ಧ ನಿಲ್ಲಿಸಿದ್ದು ನಾನೇ ಎಂದ ಟ್ರಂಪ್​

ಫ್ಲೋರಿಡಾದಲ್ಲಿ ನೆತನ್ಯಾಹು ಮತ್ತು ಅವರ ನಿಯೋಗವನ್ನು ಭೇಟಿ ಮಾಡಿರುವ ಟ್ರಂಪ್, ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾದ ಬಳಿಕ ಇಲ್ಲಿಯವರೆಗೆ 8 ಯುದ್ಧಗಳನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ.

trump-repeats-claim-of-ending-conflict-between-india-and-pakistan-during-meeting-with-netanyahu
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ (AP)
author img

By ETV Bharat Karnataka Team

Published : December 30, 2025 at 11:01 AM IST

2 Min Read
Choose ETV Bharat

ನ್ಯೂಯಾರ್ಕ್(ಯುಎಸ್‌ಎ)​: ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಜೊತೆಗೆ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯ ಸಂದರ್ಭದಲ್ಲೂ ಅವರು, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಪುನರುಚ್ಚರಿಸಿದ್ದಾರೆ.

ಫ್ಲೋರಿಡಾದ ಪಾಮ್​ ಬೀಚ್​ನಲ್ಲಿರುವ ಮಾರ್​ ಎ ಲಾಗೊದಲ್ಲಿ ನೆತನ್ಯಾಹು ಮತ್ತು ಅವರ ನಿಯೋಗವನ್ನು ಭೇಟಿ ಮಾಡಿರುವ ಅವರು, ತಾವು ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾದ ಬಳಿಕ ಹಲವು ಯುದ್ಧಗಳನ್ನು ನಿಲ್ಲಿಸಿರುವುದಾಗಿ ಹೇಳಿದ್ದಾರೆ.

ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಯುದ್ಧವನ್ನು ನಿಲ್ಲಿಸಿದೆ. ದೇಶಗಳ ಮೇಲೆ ಸುಂಕಗಳು ಮತ್ತು ಇತರೆ ಸಂಘರ್ಷಗಳ ಬೆದರಿಕೆ ಹಾಕಿ ಯುದ್ಧ ನಿಲ್ಲಿಸುತ್ತಿದ್ದೇನೆ. ಆದರೆ, ಯುದ್ಧ ನಿಲ್ಲಿಸಿದ ಶ್ರೇಯ ನಮಗೆ ಸಿಗಲಿಲ್ಲ ಎಂದು ಬೇಸರಿಸಿರುವ ಅವರು, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನೂ ತಾವೇ ನಿಲ್ಲಿಸಿದ್ದಾಗಿ ತಿಳಿಸಿದ್ದಾರೆ.

ಇಲ್ಲಿಯವರೆಗೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅಜೆರ್ಬೈಜಾನ್​ ಕುರಿತು ಹೇಳಿದ್ದು ಒಳ್ಳೆದಾಯಿತು. ಪುಟಿನ್​ ಕೂಡ 10 ವರ್ಷದಲ್ಲಿ ನಾನು ಪ್ರಯತ್ನಿಸುತ್ತಿರುವ ಯುದ್ಧಗಳನ್ನು ನೀವು ನಿಲ್ಲಿಸಿದ್ದೀರಿ ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಮೆಚ್ಚಿಕೊಂಡಿದ್ದರು. ನಾನು ಈ ಯುದ್ಧಗಳನ್ನು ಒಂದೇ ದಿನದಲ್ಲಿ ನಿಲ್ಲಿಸಿದೆ ಎಂದಿದ್ದಾರೆ.

ವ್ಯಾಪಾರದ ಮೂಲಕ ಈ ಯುದ್ಧಗಳನ್ನು ನಿಲ್ಲಿಸಿದೆ. ಯುದ್ಧ ನಿಲ್ಲಿಸದಿದ್ದರೆ ವ್ಯಾಪಾರ ನಿಲ್ಲಿಸುವುದಾಗಿ ಎರಡು ಕಡೆಯವರಿಗೂ ತಿಳಿಸಿದೆ. ಆ ಬಳಿಕ ಶೇ 200ರಷ್ಟು ಸುಂಕ ಹಾಕಿದೆ. ಮರುದಿನವೇ ಅವರು 35 ವರ್ಷದ ಯುದ್ಧವನ್ನು ನಿಲ್ಲಿಸಿದರು. ಇದಕ್ಕೆ ಮನ್ನಣೆ ಸಿಕ್ಕಿದೆಯೇ?, ಇಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ.

ಭಾರತ ಮತ್ತು ಪಾಕ್​ ಸೇರಿದಂತೆ ಎಂಟು ಯುದ್ಧವನ್ನು ಟ್ರಂಪ್​ ನಿಲ್ಲಿಸಿರುವುದಾಗಿ ದ್ವಿಪಕ್ಷೀಯ ಸಭೆಗೂ ಮುಂಚಿತವಾಗಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗು ಅವರ ಅಳಿಯ ಜೇರೆಡ್ ಕುಶ್ನರ್ ಮತ್ತು ಹಿರಿಯ ಆಡಳಿತ ಅಧಿಕಾರಿಗಳು ನೆತನ್ಯಾಹು ಅವರಿಗೆ ತಿಳಿಸಿದ್ದರು.

ಮೇ 10ರಂದು ಭಾರತ ಮತ್ತು ಪಾಕ್​ ನಡುವೆ ಅಮೆರಿಕ​ ಮಧ್ಯಸ್ಥಿಕೆ ನಡೆಸಿದ್ದು, ಕದನವಿರಾಮ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಟ್ರಂಪ್​ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು. ಭಾರತ-ಪಾಕ್​ ನಡುವಿನ ಸಂಘರ್ಷದ ಕುರಿತು ಈಗಾಗಲೇ ಟ್ರಂಪ್ ಅಂದಾಜು​ 70 ಬಾರಿ ಹೇಳಿಕೆ ನೀಡಿದ್ದಾರೆ. ಆದರೆ, ಭಾರತ ಈ ಸಂಘರ್ಷ ಎರಡು ದೇಶದ ಸೇನಾ ಮುಖ್ಯಸ್ಥರ ಮಾತುಕತೆಯಿಂದ ಬಗೆಹರಿಯಿತೇ ಹೊರತು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯಿಂದ ಅಲ್ಲ ಎಂದು ಸ್ಪಷ್ಟಪಡಿಸಿದೆ.

ಇವುಗಳನ್ನೂ ಓದಿ: