ಅಮೆರಿಕ ಭಾರತದ ಮೇಲೆ ಸುಂಕ ಹೇರಿಕೆ ಮಾಡಿರುವುದರಿಂದ ಮೋದಿ ಸಂತಸದಿಂದಿಲ್ಲ: ಆದರೆ ಅವರೊಂದಿಗೆ ಉತ್ತಮ ಸಂಬಂಧ ಇದೆ - ಟ್ರಂಪ್
ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ಮಿತ್ರರಾಷ್ಟ್ರಗಳು ಮತ್ತು ವಿರೋಧಿಗಳೊಂದಿಗಿನ ದಶಕಗಳ ಆರ್ಥಿಕ ಅಸಮತೋಲನ ಸರಿಪಡಿಸಲು ಸುಂಕಗಳ ಹೇರಿಕೆ ಅತ್ಯಗತ್ಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.


Published : January 7, 2026 at 10:58 PM IST
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸುಂಕಗಳನ್ನು ಹೇರಿರುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇಂತಹ ಕ್ರಮಗಳು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ. ಮಿತ್ರರಾಷ್ಟ್ರಗಳು ಮತ್ತು ವಿರೋಧಿಗಳೊಂದಿಗಿನ ದೀರ್ಘಕಾಲದ ಆರ್ಥಿಕ ಅಸಮತೋಲನವನ್ನು ಸರಿ ಪಡಿಸಲು ಈ ಕ್ರಮ ಅಗತ್ಯ ಎಂದು ಅವರು ಹೇಳಿದ್ದಾರೆ.
ಹೌಸ್ GOP ಸದಸ್ಯ ರಿಟ್ರೀಟ್ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ತಮ್ಮ ಉತ್ತಮ ಸಂಬಂಧದ ಬಗ್ಗೆ ಪುನರುಚ್ಚರಿಸಿದ್ದಾರೆ. ಆದಾಗ್ಯೂ ರಷ್ಯಾದ ತೈಲವನ್ನು ಖರೀದಿಸುವುದಕ್ಕಾಗಿ ಭಾರತದ ಮೇಲೆ ಯುಎಸ್ ವಿಧಿಸಿರುವ ಹೆಚ್ಚಿನ ಸುಂಕಗಳ ಬಗ್ಗೆ ಪ್ರಧಾನಿ ಮೋದಿ ಅತೃಪ್ತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಭಾರತ 68 ಅಪಾಚೆಗಳನ್ನು ಆರ್ಡರ್ ಮಾಡಿತ್ತು ಈ ಸಲುವಾಗಿಯೇ ಪ್ರಧಾನಿ ಮೋದಿ ನನ್ನನ್ನು ನೋಡಲು ಬಂದಿದ್ದರು. ಸರ್ ದಯವಿಟ್ಟು ನಾನು ನಿಮ್ಮನ್ನು ಭೇಟಿ ಮಾಡಬಹುದೇ ಎಂದು ಮನವಿ ಮಾಡಿದ್ದರು. ಹೌದು ನನಗೆ ಅವರೊಂದಿಗೆ ಉತ್ತಮ ಸಂಬಂಧವಿದೆ. ಆದರೆ ಈಗ ಅವರು ನನ್ನ ಬಗ್ಗೆ ಅಷ್ಟೊಂದು ಸಂತೋಷವಾಗಿಲ್ಲ. ಏಕೆಂದರೆ, ಅದು ನಿಮಗೆ ತಿಳಿದಿದೆ. ಅವರು ಈಗ ಬಹಳಷ್ಟು ಸುಂಕಗಳನ್ನು ಪಾವತಿಸುತ್ತಿದ್ದಾರೆ. ಆದರೆ ಈಗ ಭಾರತ ಅಮೆರಿಕದಿಂದ ತೈಲ ಖರೀದಿಯನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಟ್ರಂಪ್ ಹೇಳಿದ್ದಾರೆ.
ವಿದೇಶಿ ನಾಯಕರೊಂದಿಗಿನ ಸಂಭಾಷಣೆಗಳನ್ನು ಸ್ಮರಿಸಿಕೊಂಡ ಟ್ರಂಪ್, ಆಕ್ರಮಣಕಾರಿಯಾಗಿ ಸುಂಕ ಹೇರಿಕೆ ಮಾಡಿರುವುದನ್ನು ಸಮರ್ಥಿಸಿಕೊಂಡರು. ನಾನು ನಿಮ್ಮಿಂದ ಪ್ರತಿಯಾಗಿ ಕೇಳುತ್ತಿರುವುದಕ್ಕಿಂತ 42 ಪಟ್ಟು ಹೆಚ್ಚು ದುಬಾರಿ ಸುಂಕವನ್ನು ನಿಮ್ಮ ಮೇಲೆ ವಿಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಸುಂಕಗಳ ಹೇರಿಕೆಯಿಂದಾಗಿ ಅಮೆರಿಕ ಹೆಚ್ಚಿನ ಆದಾಯವನ್ನು ಗಳಿಸುತ್ತಿದೆ ಎಂದು ಯುಎಸ್ ಅಧ್ಯಕ್ಷರು ಹೇಳಿದ್ದಾರೆ. ನಮ್ಮ ದೇಶಕ್ಕೆ $650 ಶತಕೋಟಿಗಿಂತ ಹೆಚ್ಚು ಆದಾಯ ಹರಿದು ಬರಲಿದೆ ಎಂದು ಅವರು ಹೇಳಿದರು.
ಸುಂಕ ಹೇರಿಕೆ ವಿಚಾರ ಸುಪ್ರೀಂನಲ್ಲಿದೆ ಎಂದ ಟ್ರಂಪ್: ರಕ್ಷಣಾ ಸಿದ್ಧತೆಯಿಂದ ಬೇರ್ಪಡಿಸಲಾಗದಂತೆ ಅವರು ವ್ಯಾಪಾರ ನೀತಿಯನ್ನು ರೂಪಿಸಿದರು. ಸುಂಕಗಳ ಕಾರಣದಿಂದಾಗಿ ನಮಗೆ ರಾಷ್ಟ್ರೀಯ ಭದ್ರತೆ ಸಿಕ್ಕಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ವಿಷಯವು ಇದೀಗ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದೂ ಟ್ರಂಪ್ ಹೇಳಿದ್ದಾರೆ. ಹಿಂದಿನ ಆಡಳಿತಗಳು ಜಗತ್ತಿಗೆ ಸಬ್ಸಿಡಿ ನೀಡಿದ್ದವು ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಕರೆ ಮಾಡಿ ಹೊಸ ವರ್ಷದ ಶುಭಾಶಯ, ಗಾಜಾ ಶಾಂತಿ ಬಗ್ಗೆ ಚರ್ಚಿಸಿದ ಇಸ್ರೇಲ್ ಪ್ರಧಾನಿ

