ETV Bharat / international

ಜಿಬೂಟಿ ಕರಾವಳಿಯಲ್ಲಿ ದೋಣಿ ಮುಳುಗಡೆ ದುರಂತ: ಸಾವಿನ ಸಂಖ್ಯೆ 139ಕ್ಕೆ ಏರಿಕೆ, 84 ಮಂದಿ ಇನ್ನೂ ನಾಪತ್ತೆ

ಜಿಬೂಟಿ ಕರಾವಳಿಯಲ್ಲಿ 2 ದಿನಗಳ ಹಿಂದೆ ಭೀಕರ ದೋಣಿ ದುರಂತ ಸಂಭವಿಸಿದ್ದು, ಅದರಲ್ಲಿದ್ದ 305 ಜನರ ಪೈಕಿ ಈವರೆಗೂ 139 ಮಂದಿ ಸಾವಿಗೀಡಾಗಿದ್ದಾರೆ.

BOAT CAPSIZES OFF DJIBOUTI
ದುರಂತ ಸಂಭವಿಸಿದ ಸ್ಥಳ (AFP)
author img

By PTI

Published : October 11, 2026 at 8:58 PM IST

2 Min Read
Choose ETV Bharat

ಜಿನೀವಾ: ಜಿಬೂಟಿ ಕರಾವಳಿಯಲ್ಲಿ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 139ಕ್ಕೆ ಏರಿದೆ. ಇಂದು ನಡೆದ ಕಾರ್ಯಾಚರಣೆಯಲ್ಲಿ 30 ಶವಗಳು ಪತ್ತೆಯಾಗಿವೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ತಿಳಿಸಿದೆ.

ಅಕ್ಟೋಬರ್ 8-9ರ ರಾತ್ರಿ ಜಿಬೂಟಿಯಿಂದ ಯೆಮೆನ್‌ಗೆ ಹೊರಟಿದ್ದ ಅತಿಯಾದ ಜನರನ್ನು ಹೊಂದಿದ್ದ ದೋಣಿ ಮುಳುಗಡೆಯಾಗಿತ್ತು. ಘಟನೆಯಲ್ಲಿ ಸುಮಾರು 84 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಐಒಎಂ ಹೇಳಿದೆ.

ಒಟ್ಟು 305ರ ಜನರನ್ನು ಹೊತ್ತಿದ್ದ ಈ ದೋಣಿಯು ಜಿಬೂಟಿಯ ಓಬೋಕ್​ ಪಟ್ಟಣದ ಉತ್ತರ ಭಾಗದಲ್ಲಿ ಮುಳುಗಡೆಯಾಗಿದೆ ಎಂದು ಬದುಕುಳಿದವರು ತಿಳಿಸಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಮತ್ತು ಭೀಕರ ದುರಂತವಾಗಿದೆ. ಸದ್ಯ ವಿವಿಧ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಜಿಬೂಟಿಯ ಐಒಎಂ ಮಿಷನ್​ ಮುಖ್ಯಸ್ಥ ಅಲೆಕ್ಸಾಂಡರ್​ ಕೊಯಿಸಾಕ್​ ತಿಳಿಸಿದ್ದಾರೆ.

ಈ ವಲಸೆ ಮಾರ್ಗದಲ್ಲಿ ಆರ್ಥಿಕ ಅವಕಾಶಗಳನ್ನು ಹುಡುಕುತ್ತಾ ಬಾಬ್​ ಎಲ್​ ಮಂಡೇಬ್​ ಜಲಮಾರ್ಗವನ್ನು ದಾಟಿ ಯೆಮೆನ್​​ ಮತ್ತು ಗಲ್ಫ್​ ರಾಷ್ಟ್ರಗಳಿಗೆ ತಲುಪಲು ವಲಸಿಗರು ಎದುರಿಸುತ್ತಿರುವ ಅಪಾಯಗಳಿಗೆ ಈ ದುರಂತವು ಒಂದು ಉದಾಹರಣೆಯಾಗಿದೆ. ಪತ್ತೆಯಾದ ಶವಗಳಲ್ಲಿ 52 ಪುರುಷರು, 42 ಮಹಿಳೆಯರು ಮತ್ತು 15 ಮಕ್ಕಳು ಇದ್ದಾರೆ. ಹಡಗು ದುರಂತದಲ್ಲಿ 80ಕ್ಕೂ ಹೆಚ್ಚು ಜನರು ಬದುಕುಳಿದಿದ್ದಾರೆ. ಎಲ್ಲರೂ ಇಥಿಯೋಪಿಯನ್ ಪ್ರಜೆಗಳಾಗಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಒಬಾಕ್‌ನಲ್ಲಿರುವ ವಲಸೆ ಕೇಂದ್ರದಲ್ಲಿ ಬದುಕುಳಿದ 64 ಜನರಿಗೆ ಆಶ್ರಯ ನೀಡಲಾಗಿದೆ. ಕಾಣೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ. ದುರಂತ ಸಂಭವಿಸಿ 2 ದಿನವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಈ ವರ್ಷದ ಜನವರಿಯಿಂದ ಅಕ್ಟೋಬರ್​ವರೆಗೆ ಇಥಿಯೋಪಿಯಾದಿಂದ 1,78,000 ಜನರು ಜಿಬೂಟಿಗೆ ಆಗಮಿಸಿದ್ದಾರೆ ಎಂದು ಐಒಎಂ ತಿಳಿಸಿದೆ.

2025ರಲ್ಲಿ ಸಮುದ್ರ ಮಾರ್ಗದಿಂದ ಯೆಮೆನ್‌ಗೆ ತೆರಳುತ್ತಿದ್ದಾಗ 900ಕ್ಕೂ ಹೆಚ್ಚು ವಲಸಿಗರು ಸಾವನ್ನಪ್ಪಿದ್ದಾರೆ. ವಲಸೆ ಹೋಗುವವರ ಸಂಖ್ಯೆ ಶೇಕಡಾ 18ರಷ್ಟು ಹೆಚ್ಚಾಗಿದೆ. ಮಾರ್ಚ್ 2026ರಲ್ಲಿ ನಡೆದ ಹಡಗು ಧ್ವಂಸದಲ್ಲಿ 9 ಜನರು ಸಾವನ್ನಪ್ಪಿ, 45 ಜನರು ಕಾಣೆಯಾಗಿದ್ದರು. ಇವರೆಲ್ಲರೂ ಇಥಿಯೋಪಿಯಾ ಹಾಗೂ ಸೊಮಾಲಿಯಾದಿಂದ ಬಂದವರು ಎಂದು ಐಒಎಂ ವಕ್ತಾರ ಕೆನಡಿ ಒಮೊಂಡಿ ಒಕೊತ್ ತಿಳಿಸಿದ್ದಾರೆ.

ಇವುಗಳನ್ನೂ ಓದಿ: