ETV Bharat / international

ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ವಿದ್ಯಾರ್ಥಿನಿ ಸೇರಿ ನಾಲ್ವರ ಹತ್ಯೆ

ಅಮೆರಿಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರು ಸಾವನ್ನಪ್ಪಿದ್ದು, ಭಯೋತ್ಪಾದಕ ಸಂಚಿನ ಸಂದೇಹವಿದ್ದು ತನಿಖೆ ನಡೆಯುತ್ತಿದೆ.

ಸವಿತಾ ಶಾನ್
ಗುಂಡಿನ ದಾಳಿಯಿಂದ ಮೃತಪಟ್ಟ ವಿದ್ಯಾರ್ಥಿನಿ ಸವಿತಾ ಶಾನ್ (IANS)
author img

By ETV Bharat Karnataka Team

Published : March 3, 2026 at 9:34 AM IST

2 Min Read
Choose ETV Bharat

ನ್ಯೂಯಾರ್ಕ್(ಯುಎಸ್‌ಎ): ದುಷ್ಕರ್ಮಿಯೊಬ್ಬ ಅಮಾಯಕರ ಮೇಲೆ ಮನಬಂದಂತೆ ಗುಂಡು ಹಾರಿಸಿ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಮೃತಪಟ್ಟವರ ಪೈಕಿ ಒಬ್ಬ ವಿದ್ಯಾರ್ಥಿನಿ ಭಾರತೀಯ ಮೂಲದವರಾಗಿದ್ದಾರೆ. ಇರಾನ್‌ ಧ್ವಜದ ಚಿಹ್ನೆ ಧರಿಸಿದ ವ್ಯಕ್ತಿ, ಇಲ್ಲಿನ ಜನಪ್ರಿಯ ಸ್ಥಳದ ಹೊರಭಾಗದಲ್ಲಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಮೃತಪಟ್ಟ ಭಾರತೀಯ ಮೂಲದ ವಿದ್ಯಾರ್ಥಿನಿಯನ್ನು ಸವಿತಾ ಶಾನ್ ಎಂದು ಸೋಮವಾರ ಅಧಿಕಾರಿಗಳು ಗುರುತಿಸಿದ್ದಾರೆ. ಈ ಘಟನೆಯಲ್ಲಿ ಇತರೆ 14 ಜನರು ಗಾಯಗೊಂಡಿದ್ದಾರೆ.

ದಾಳಿಕೋರ ಸೆನೆಗಲ್‌ನ ವಲಸೆಗಾರ 53 ವರ್ಷದ ನ್ಡಿಯಾಗಾ ಡಯಾಗ್ನೆ ಎಂಬಾತನಿಗೆ ಭಯೋತ್ಪಾದಕ ಚಟುವಟಿಕೆಗಳ ಸಂಬಂಧವಿರುವ ಮಾಹಿತಿ ಇದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ)ನ ಆ್ಯಕ್ಟಿಂಗ್ ಸ್ಪೆಷಲ್ ಏಜೆಂಟ್ ಅಲೆಕ್ಸ್ ಡೋರನ್ ತಿಳಿಸಿದ್ದಾರೆ.

ವಿದ್ಯಾರ್ಥಿನಿಯ ಸಾವನ್ನು ಟೆಕ್ಸಾಸ್ ವಿವಿಯ ಅಧ್ಯಕ್ಷ ಜಿಮ್ ಡೇವಿಸ್ ದೃಢಪಡಿಸಿದ್ದು, ಇಮೇಲ್ ಮೂಲಕ ತಮ್ಮ ಕ್ಯಾಂಪಸ್ ಸಮುದಾಯಕ್ಕೆ ಮಾಹಿತಿ ನೀಡಿದ್ದಾರೆ. "ಆಕೆ ಜಗತ್ತಿನಲ್ಲಿ ಬದಲಾವಣೆ ತರಲು ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿ" ಎಂದು ಅವರು ಉಲ್ಲೇಖಿಸಿದ್ದಾರೆ. "ಪೋಷಕರಿಗೆ ಪ್ರೀತಿಯ ಮಗುವಾಗಿದ್ದಳು ಮತ್ತು ಹಲವರಿಗೆ ನಂಬಿಕಸ್ತ ಸ್ನೇಹಿತೆಯಾಗಿದ್ದಳು" ಎಂದು ಸ್ಮರಿಸಿದ್ದಾರೆ. "ಆಘಾತಕಾರಿ ಘಟನೆಯಿಂದ ಅತೀವ ಬೇಸರ ಉಂಟಾಗಿದೆ. ನಾವು ಆಕೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.

ಗುಂಡಿನ ದಾಳಿಯನ್ನು ವಿವರಿಸಿದ ಆಸ್ಟಿನ್ ಪೊಲೀಸ್ ಮುಖ್ಯಸ್ಥೆ ಲಿಸಾ ಡೇವಿಸ್, "ಭಾನುವಾರ ಬೆಳಗ್ಗೆ ಆರೋಪಿ ಡಯಾಗ್ನೆ ತನ್ನ ಕಾರನ್ನು ಬಿಯರ್ ಗಾರ್ಡನ್‌ನ ಹೊರ ಭಾಗದಲ್ಲಿ ನಿಲ್ಲಿಸಿ, ಜನರ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿದ. ನಂತರ ಕಾರಿನಿಂದಿಳಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರ ಮೇಲೆ ರೈಫಲ್‌ನಿಂದ ಗುಂಡು ಹಾರಿಸುತ್ತಿದ್ದ. ನಂತರ ಪೊಲೀಸರು ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದರು" ಎಂದು ತಿಳಿಸಿದರು.

ವಿವಿಯ ರೇಡಿಯೋ ಸ್ಟೇಷನ್ KUT, ಆಕೆಯ ಗೆಳೆಯ ಹೇಳಿರುವ ಪ್ರಕಾರ, ವಿದ್ಯಾರ್ಥಿನಿಗೆ 21 ವರ್ಷ ಪ್ರಾಯವಾಗಿತ್ತು ಮತ್ತು ಆಸ್ಟಿನ್‌ನಲ್ಲಿ ಬೆಳೆದಿದ್ದರು ಎಂದು ತಿಳಿಸಿದೆ.

ಲಿಂಕ್ಡ್‌ಇನ್‌ನಲ್ಲಿರುವ ಸವಿತಾ ಶಾನ್ ಅವರು ಪೋಸ್ಟ್ ಮಾಡಿರುವಂತೆ, ಅವರು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಗಳಲ್ಲಿ ಬ್ಯಾಚುಲರ್ ಪದವಿ ಪಡೆಯುತ್ತಿದ್ದಾರೆ. ಈ ವರ್ಷ ಪದವಿ ಪಡೆಯುವ ನಿರೀಕ್ಷೆ ಹೊಂದಿದ್ದರು. ಇದಲ್ಲದೇ ಆಸ್ಟಿನ್ ತಮಿಳು ಸಂಗಮ್‌ನಲ್ಲಿ ಸ್ವಯಂಸೇವಕರಾಗಿದ್ದರು.

ಅಮೆರಿಕ ಮತ್ತು ಇಸ್ರೇಲ್ ಶನಿವಾರ ಇರಾನ್ ಮೇಲೆ ಸೇನಾ ಕಾರ್ಯಾಚರಣೆ ಆರಂಭಿಸಿದ ನಂತರ ಭಯೋತ್ಪಾದನೆಯ ಆತಂಕದಿಂದ ಅಮೆರಿಕದಾದ್ಯಂತ ಕಾನೂನು ಜಾರಿ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.

ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಪ್ರತಿಕ್ರಿಯಿಸಿ, ನಮ್ಮ ಭಯೋತ್ಪಾದನಾ ನಿಗ್ರಹ ಮತ್ತು ಗುಪ್ತಚರ ತಂಡಗಳಿಗೆ ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ರಿಯಾದ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ಡ್ರೋಣ್ ದಾಳಿ; ತಕ್ಷಣ 12 ದೇಶ ಬಿಡುವಂತೆ ತನ್ನ ಪ್ರಜೆಗಳಿಗೆ ಅಮೆರಿಕ ತುರ್ತು ಸೂಚನೆ