ಖಮೇನಿ ಹತ್ಯೆಯು 'ನೈತಿಕತೆ, ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ': ರಷ್ಯಾದ ಅಧ್ಯಕ್ಷ ಪುಟಿನ್
ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆ ನೈತಿಕತೆ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

Published : March 1, 2026 at 7:00 PM IST
ಮಾಸ್ಕೋ (ರಷ್ಯಾ): ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿರುವ ಅಮೆರಿಕ ಮತ್ತು ಇಸ್ರೇಲ್ ಕ್ರಮವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾನುವಾರ ತೀವ್ರವಾಗಿ ಖಂಡಿಸಿದ್ದಾರೆ. ಇದು ನೈತಿಕತೆ ಮತ್ತು ಕಾನೂನಿನ ಉಲ್ಲಂಘನೆ ಎಂದು ಪುಟಿನ್ ಕಿಡಿಕಾರಿದ್ದಾರೆ.
ಭಾನುವಾರ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್‌ಗೆ ಪುಟಿನ್ ಪತ್ರ ಬರೆದಿದ್ದು, ಖಮೇನಿ ಹತ್ಯೆಗೆ ರಷ್ಯಾದ ನಾಯಕ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಹತ್ಯೆಯು ಮಾನವ ನೈತಿಕತೆ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಎಲ್ಲಾ ಮಾನದಂಡಗಳ ಉಲ್ಲಂಘನೆ ಎಂದು ಪುಟಿನ್ ಹೇಳಿದ್ದಾರೆ. ಅಲ್ಲದೆ, ಖಮೇನಿ ರಷ್ಯಾ-ಇರಾನ್ ಸ್ನೇಹಪರ ಸಂಬಂಧಗಳ ಅಭಿವೃದ್ಧಿಗೆ ಅಪಾರ ವೈಯಕ್ತಿಕ ಕೊಡುಗೆ ನೀಡಿದ ಮಹೋನ್ನತ ರಾಜಕಾರಣಿ ಎಂದು ಪುಟಿನ್ ಸ್ಮರಿಸಿದ್ದಾರೆ.
ಸರ್ವೋಚ್ಚ ನಾಯಕನ ಸಂಬಂಧಿಕರು ಮತ್ತು ಪ್ರೀತಿಪಾತ್ರರಿಗೆ, ಸರ್ಕಾರ ಮತ್ತು ಇರಾನ್‌ನ ಇಡೀ ಜನರಿಗೆ ತಮ್ಮ ಅತ್ಯಂತ ಪ್ರಾಮಾಣಿಕ ಸಹಾನುಭೂತಿ ಮತ್ತು ಬೆಂಬಲ ತಿಳಿಸುವಂತೆ ಪೆಜೆಶ್ಕಿಯಾನ್ ಅವರಿಗೆ ಬರೆದ ಪತ್ರದಲ್ಲಿ ಪುಟಿನ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಶನಿವಾರ ಇರಾನ್ ಮೇಲಿನ ದಾಳಿಗಳನ್ನು ಅಪಾಯಕಾರಿ ಸಾಹಸ ಎಂದು ರಷ್ಯಾ ಖಂಡಿಸಿತ್ತು. ಅಲ್ಲದೆ ಶನಿವಾರ, ಮಾಸ್ಕೋದ ಉನ್ನತ ರಾಜತಾಂತ್ರಿಕ ಸೆರ್ಗೆಯ್ ಲಾವ್ರೊವ್ ಅವರು ಇರಾನಿನ ಸಹವರ್ತಿ ಅಬ್ಬಾಸ್ ಅರಾಗ್ಚಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು.
ಈ ಹಿಂದೆ ರಷ್ಯಾವು ಉಕ್ರೇನ್ ಮೇಲೆ ನಡೆಸಿದ್ದ ದಾಳಿ ವೇಳೆ ಇರಾನ್ ರಷ್ಯಾದ ಬೆಂಬಲಕ್ಕೆ ನಿಂತಿತ್ತು. ಅಲ್ಲದೆ, ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿಗಳಿಗೂ ಮುನ್ನ ಸಂಯಮ ಕಾಪಾಡಿಕೊಳ್ಳುವಂತೆ ರಷ್ಯಾ ಕರೆ ನೀಡಿತ್ತು.
2025ರಲ್ಲಿ, ಮಿಲಿಟರಿ ವಿಷಯಗಳು ಸೇರಿದಂತೆ ಉಭಯ ರಾಷ್ಟ್ರಗಳ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಿರುವ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದಕ್ಕೆ ರಷ್ಯಾ ಮತ್ತು ಇರಾನ್ ಸಹಿ ಹಾಕಿದ್ದವು.
ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ರಾಜಧಾನಿ ಟೆಹ್ರಾನ್ ಮತ್ತು ದೇಶದ ಇತರ ನಗರಗಳನ್ನು ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರ ಸ್ವರೂಪ ಪಡೆದಿದೆ. ದಾಳಿಗೆ ಪ್ರತ್ಯುತ್ತರವಾಗಿ, ಇಸ್ರೇಲ್ ಮತ್ತು ಅಮೆರಿಕದ ನೆಲೆಗಳಿರುವ ಮಧ್ಯಪ್ರಾಚ್ಯದ ಹಲವಾರು ದೇಶಗಳ ಮೇಲೆ ಇರಾನ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಇದರೊಂದಿಗೆ ಮಧ್ಯಪ್ರಾಚ್ಯದಲ್ಲಿ ಭೀಕರ ಯುದ್ಧದ ಕಾರ್ಮೋಡ ಆವರಿಸಿದೆ.
ಬಳಿಕ, ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಪಡೆಗಳು ನಡೆಸುತ್ತಿರುವ ದಾಳಿಯು ಎರಡನೇ ದಿನವೂ ಮುಂದುವರೆದಿದ್ದು, ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ(86) ಅವರನ್ನು ಹತ್ಯೆ ಮಾಡಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಖಮೇನಿ ಜೊತೆಗೆ 40 ಉನ್ನತ ಅಧಿಕಾರಿಗಳು ಹತ್ಯೆಯಾಗಿದ್ದಾರೆ ಎಂದು ಅಮೆರಿಕ ತಿಳಿಸಿದೆ.
ಇದನ್ನೂ ಓದಿ: ಖಮೇನಿ ಹತ್ಯೆ ವಿರೋಧಿಸಿ ಕಾಶ್ಮೀರದಲ್ಲಿ ಪ್ರತಿಭಟನೆ: ಶಾಂತಿ ಕಾಪಾಡಲು ಸಿಎಂ ಓಮರ್ ಮನವಿ

