ETV Bharat / international

ಉಕ್ರೇನ್​ ಮೇಲೆ ಶಕ್ತಿಶಾಲಿ ಒರೆಶ್ನಿಕ್​ ಕ್ಷಿಪಣಿ ದಾಳಿ; ನಾಲ್ವರ ಸಾವು, ಕರೆಂಟ್​, ನೀರಿಲ್ಲದೇ ಪರದಾಡಿದ ಕೀವ್​ ಮಂದಿ

ಡಿಸೆಂಬರ್‌ನಲ್ಲಿ ಅಧ್ಯಕ್ಷ ಪುಟಿನ್ ಅವರ ನಿವಾಸದ ಮೇಲೆ ಡ್ರೋನ್ ದಾಳಿಗೆ ಪ್ರತೀಕಾರವಾಗಿ ರಷ್ಯಾ, ಉಕ್ರೇನ್​ ಮೇಲೆ ಒರೆಶ್ನಿಕ್ ಕ್ಷಿಪಣಿ ದಾಳಿ ನಡೆಸಿದೆ.

Russia Hits Ukraine
ಉಕ್ರೇನ್​ ಮೇಲೆ ಶಕ್ತಿಶಾಲಿ ಒರೆಶ್ನಿಕ್​ ಕ್ಷಿಪಣಿ ದಾಳಿ (AP)
author img

By ETV Bharat Karnataka Team

Published : January 9, 2026 at 4:08 PM IST

3 Min Read
Choose ETV Bharat

ಕೀವ್​, ಉಕ್ರೇನ್​: ಉಕ್ರೇನ್​ ಮೇಲೆ ರಷ್ಯಾ ದಾಳಿ ಮುಂದುವರೆಸಿದೆ. ರಾಜಧಾನಿ ಕೀವ್​ ಮೇಲೆ ರಷ್ಯಾ ತನ್ನ ಹೈಪರ್‌ಸಾನಿಕ್ ಒರೆಶ್ನಿಕ್ ಕ್ಷಿಪಣಿಯಿಂದ ದಾಳಿ ಮಾಡಿದೆ. ಸತತವಾಗಿ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಷ್ಯಾ - ಉಕ್ರೇನ್​ ಯುದ್ದವನ್ನು ಕೊನೆಗೊಳಿಸಲು ಉಕ್ರೇನ್​ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳು ಹೆಣಗಾಡುತ್ತಿವೆ. ಅಷ್ಟೇ ಅಲ್ಲ ಯುದ್ಧ ಕೊನೆಗೊಂಡ ಬಳಿಕವೂ ಉಕ್ರೇನ್​ ರಕ್ಷಣೆಗೆ ಯುರೋಪ್​ ಸೇನೆ ನಿಯೋಜನೆಗೆ ಒಪ್ಪಿಕೊಂಡಿವೆ.

ಆದರೆ, ನ್ಯಾಟೋ ರಕ್ಷಣಾ ಒಪ್ಪಂದದ ವಿಸ್ತರಣೆ ತಡೆಯುವುದೇ ರಷ್ಯಾದ ಗುರಿಯಾಗಿದ್ದು, ಉಕ್ರೇನ್​​ ನಲ್ಲಿ ಪಾಶ್ಚಿಮಾತ್ಯ ಪಡೆಗಳ ನಿಯೋಜನೆಯನ್ನು ಖಂಡಿಸಿದೆ ಮತ್ತು ಅದಕ್ಕೆ ಅವಕಾಶ ಮಾಡಿಕೊಡಲು ರಷ್ಯಾ ಸಿದ್ದವಿಲ್ಲ. ಹೀಗಾಗಿ ಅದು ಉಕ್ರೇನ್​ ಮೇಲೆ ದಾಳಿ ಮುಂದುವರೆಸಿದೆ.

ಉಕ್ರೇನ್​ ನಲ್ಲಿ ಯುರೋಪಿಯನ್​ ಪಡೆಗಳ ನಿಯೋಜನೆಯನ್ನು ಕಾನೂನುಬದ್ಧ ಮಿಲಿಟರಿ ಗುರಿಗಳೆಂದು ಪರಿಗಣಿಸಲಾಗುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಗುರುವಾರ ಎಚ್ಚರಿಸಿದ್ದಾರೆ. ಉಕ್ರೇನ್ ಮತ್ತು ಅದರ ಅಮೆರಿಕನ್ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳನ್ನು ಯುದ್ಧದ ಅಕ್ಷ ಎಂದು ಬ್ರಾಂಡ್ ಮಾಡಿದ್ದಾರೆ.

ಪುಟಿನ್ ನಿವಾಸದ ಮೇಲಿನ ದಾಳಿಗೆ ಪ್ರತಿಯಾಗಿ ಕ್ಷಿಪಣಿ ದಾಳಿ: ಈ ನಡುವೆ ರಷ್ಯಾ ತನ್ನ ದಾಳಿಯನ್ನು ಮುಂದುವರೆಸಿದೆ, ಪ್ರತಿದಿನ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ರಷ್ಯಾದ ರಕ್ಷಣಾ ಸಚಿವಾಲಯವು ರಾತ್ರಿಯಿಡೀ ನಿಗದಿತ ಗುರಿಗಳ ಮೇಲೆ ಒರೆಶ್ನಿಕ್ ಹೈಪರ್ಸಾನಿಕ್ ಕ್ಷಿಪಣಿಯನ್ನು ಬಳಸಿದೆ ಎಂದು ಹೇಳಿದೆ. ಡಿಸೆಂಬರ್‌ನಲ್ಲಿ ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ನಡೆದ ಡ್ರೋನ್ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳು ನಡೆದಿವೆ ಎಂದು ಹೇಳಿದೆ. ಆ ದಾಳಿಯ ಹಿಂದೆ ತಾನು ಇದ್ದೇನೆ ಎಂಬುದನ್ನು ಉಕ್ರೇನ್ ನಿರಾಕರಿಸಿದೆ.

ದಾಳಿಯ ಕುರಿತು ಮಾಸ್ಕೋ ಯಾವುದೇ ಇತರ ವಿವರಗಳನ್ನು ನೀಡಿಲ್ಲ. ಆದರೆ, ಉಕ್ರೇನಿಯನ್ ಅಧಿಕಾರಿಗಳು ಪಶ್ಚಿಮ ನಗರವಾದ ಎಲ್ವಿವ್ ಬಳಿ ಮೂಲಸೌಕರ್ಯ ಸೌಲಭ್ಯದ ಮೇಲೆ ಹೈಪರ್ಸಾನಿಕ್ ವೇಗದಲ್ಲಿ ಚಲಿಸುವ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಸಾವು: ಕೀವ್​ ನಗರದಾದ್ಯಂತ ನಡೆದ ಡ್ರೋನ್ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ತುರ್ತು ರಕ್ಷಣಾ ಕಾರ್ಯಕರ್ತರು ಸೇರಿದಂತೆ ಕನಿಷ್ಠ 24 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಎಡದಂಡೆಯಲ್ಲಿರುವ ವಸತಿ ಕಟ್ಟಡ ಮೇಲೆ ನಡೆದ ಎರಡನೇ ದಾಳಿಯಲ್ಲಿ ಒಬ್ಬ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಮೇಯರ್ ವಿಟಾಲಿ ಕ್ಲಿಟ್ಸ್ಕೊ,ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆದಿದೆ ಎಂದು ವಿವರಿಸಿದ್ದಾರೆ. ಈ ಸಮಯದಲ್ಲಿ ನಗರದ ಕೆಲವು ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿದವು. ರಷ್ಯಾದ ಬೆಲ್ಗೊರೊಡ್‌ನಲ್ಲಿ ಗಡಿ ಉದ್ದಕ್ಕೂ ದಾಳಿ ನಡೆದಿದ್ದು, ಅರ್ಧ ಮಿಲಿಯನ್​ ಗೂ ಹೆಚ್ಚು ಜನರು ಕರೆಂಟ್​ ಇಲ್ಲದೇ ಸಮಸ್ಯೆ ಎದುರಿಸಿದರು ಎಂದು ಹೇಳಿದ್ದಾರೆ.

ಸುಮಾರು 200,000 ಜನರು ನೀರು ಸರಬರಾಜಿನ ಸಂಪರ್ಕ ಕಳೆದುಕೊಂಡಿದ್ದಾರೆ ಎಂದು ವ್ಯಾಚೆಸ್ಲಾವ್ ಗ್ಲಾಡ್ಕೋವ್ ಹೇಳಿದ್ದಾರೆ. ಪಶ್ಚಿಮ ನಗರವಾದ ಎಲ್ವಿವ್‌ನಲ್ಲಿ ಗಂಟೆಗೆ ಸುಮಾರು 13,000 ಕಿಲೋಮೀಟರ್ (8,000 ಮೈಲುಗಳು) ವೇಗದಲ್ಲಿ ಚಲಿಸುವ ಬ್ಯಾಲಿಸ್ಟಿಕ್ ಕ್ಷಿಪಣಿ ಮಧ್ಯರಾತ್ರಿಯ ಮೊದಲು ಮೂಲಸೌಕರ್ಯ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ವಿಕಿರಣ ಮಟ್ಟಗಳು ಸಾಮಾನ್ಯ ವ್ಯಾಪ್ತಿಯಲ್ಲಿವೆ ಎಂದು ಪ್ರಾದೇಶಿಕ ಮಿಲಿಟರಿ ಆಡಳಿತವು ಹೇಳಿದೆ. 2024 ರ ಕೊನೆಯಲ್ಲಿ ಮಧ್ಯ ಉಕ್ರೇನ್‌ನ ಡ್ನಿಪ್ರೊ ನಗರದ ಮೇಲೆ ದಾಳಿ ಮಾಡಲು ರಷ್ಯಾ ಸಾಂಪ್ರದಾಯಿಕ ಸಿಡಿತಲೆ ಹೊಂದಿರುವ ಒರೆಶ್ನಿಕ್ ಅನ್ನು ಬಳಸಿತ್ತು.

ಯಾವುದೇ ಒಪ್ಪಂದದಿಂದ ಬಹಳ ದೂರ: ಮುಂದಿನ ಕೆಲವು ದಿನಗಳಲ್ಲಿ ಯಾವುದೇ ಸಮಯದಲ್ಲಿ ಸಂಭಾವ್ಯ ಮಹತ್ವದ ವಾಯುದಾಳಿ ನಡೆಯಬಹುದು ಎಂದು ಕೀವ್​ ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಗುರುವಾರ ಎಚ್ಚರಿಸಿದ ನಂತರ ರಷ್ಯಾದ ಇತ್ತೀಚಿನ ದಾಳಿ ನಡೆದಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಮ್ಮ ಸಂಜೆಯ ಭಾಷಣದಲ್ಲಿ ಈ ಎಚ್ಚರಿಕೆಯ ಬಗ್ಗೆ ಪ್ರಸ್ತಾಪ ಮಾಡಿದ್ದರು.

ಡ್ನಿಪ್ರೊಪೆಟ್ರೋವ್ಸ್ಕ್ ಮತ್ತು ಜಪೋರಿಝಿಯಾ ಪ್ರದೇಶಗಳಲ್ಲಿನ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದ ನಂತರ ಲಕ್ಷಾಂತರ ಮನೆಗಳಿಗೆ ವಿದ್ಯುತ್​ ಮತ್ತು ನೀರನ್ನು ಪುನಃಸ್ಥಾಪಿಸಲು ಉಕ್ರೇನ್ ಇನ್ನೂ ಹರಸಾಹಸ ಪಡುತ್ತಿತ್ತು. ಇದು ನಿಜವಾಗಿಯೂ ರಾಷ್ಟ್ರೀಯ ಮಟ್ಟದ ತುರ್ತುಸ್ಥಿತಿ ಎಂದು ಡ್ನಿಪ್ರೊಪೆಟ್ರೋವ್ಸ್ಕ್‌ನ ರಾಜಧಾನಿ ಡ್ನಿಪ್ರೊದ ಮೇಯರ್ ಬೋರಿಸ್ ಫಿಲಾಟೊವ್ ಹೇಳಿದ್ದಾರೆ. ಚಳಿಗಾಲದ ಶೀತಗಾಳಿಯ ಈ ಸಂದರ್ಭದಲ್ಲಿ ಕುಟುಂಬಗಳು ವಿದ್ಯುತ್ ಇಲ್ಲದೇ ಪರದಾಡಬೇಕಾಯಿತು.

ಯುಎಸ್ ಭದ್ರತಾ ಖಾತರಿಗಳಿಗಾಗಿ ಕೀವ್​ ಮತ್ತು ವಾಷಿಂಗ್ಟನ್ ನಡುವಿನ ಒಪ್ಪಂದವು ಮೂಲಭೂತವಾಗಿ ಅಂತಿಮಗೊಳಿಸಲು ಸಿದ್ಧವಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದರೂ ರಷ್ಯಾದ ಪ್ರಕಾರ ಕದನ ವಿರಾಮ ಒಪ್ಪಂದವು ಇನ್ನೂ "ಸಾಕಷ್ಟು ದೂರ" ಇದೆ ಎಂದು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಒಪ್ಪಿಕೊಂಡಿದ್ದಾರೆ.

ಈ ವಾರ ಯುರೋಪಿಯನ್ ನಾಯಕರು ಮತ್ತು ಅಮೆರಿಕದ ರಾಯಭಾರಿಗಳು ಉಕ್ರೇನ್‌ಗೆ ಯುದ್ಧಾನಂತರದ ಖಾತರಿಗಳಲ್ಲಿ ಯುಎಸ್ ನೇತೃತ್ವದ ಮೇಲ್ವಿಚಾರಣಾ ಕಾರ್ಯವಿಧಾನ ಮತ್ತು ಬಹುರಾಷ್ಟ್ರೀಯ ಪಡೆ ಸೇರಿವೆ ಎಂದು ಘೋಷಿಸಿದ ನಂತರ ಮಾಸ್ಕೋ ಅಸಮಾಧಾನ ವ್ಯಕ್ತಪಡಿಸಿದೆ. ಪ್ಯಾರಿಸ್‌ನಲ್ಲಿ ನಡೆದ ಶೃಂಗಸಭೆಯ ನಂತರ ಈ ಬಗ್ಗೆ ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ ರಷ್ಯಾ ಈ ಯೋಜನೆಯನ್ನು "ಅಪಾಯಕಾರಿ" ಮತ್ತು "ವಿನಾಶಕಾರಿ" ಎಂದು ಕರೆದಿದೆ.

ಇವುಗಳನ್ನು ಓದಿ: ಟ್ರಂಪ್​ಗೆ ಮೋದಿ ಕರೆ ಮಾಡದ ಕಾರಣ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ನಡೆಯಲಿಲ್ಲ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಲುಟ್ನಿಕ್​

ಇರಾನ್​ನಲ್ಲಿ ಭುಗಿಲೆದ್ದ ಹಿಂಸಾಚಾರ: ಫೋನ್​, ಇಂಟರ್ನೆಟ್​ ಸಂಪರ್ಕ ಕಡಿತ