ಪಾಕ್ - ಅಫ್ಘಾನಿಸ್ತಾನ ನಡುವೆ ಓಪನ್ ವಾರ್: 55 ಪಾಕಿಸ್ತಾನಿ ಸೈನಿಕರ ಹತ್ಯೆಗೆ ಪ್ರತಿಯಾಗಿ 130 ಆಫ್ಘನ್ರನ್ನು ಕೊಂದ ಇಸ್ಲಾಮಾಬಾದ್
ಗಡಿ ದಾಳಿಗೆ ಪ್ರತಿಯಾಗಿ 130 ಕ್ಕೂ ಹೆಚ್ಚು ಅಫ್ಘಾನ್ ತಾಲಿಬಾನ್ ಹೋರಾಟಗಾರರನ್ನು ಕೊಂದಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ.

By PTI
Published : February 27, 2026 at 9:10 AM IST
ಇಸ್ಲಾಮಾಬಾದ್, ಪಾಕಿಸ್ತಾನ: ತಾಲಿಬಾನ್ ನಡೆಸಿದೆ ಎನ್ನಲಾದ ಗಡಿ ದಾಳಿಯಲ್ಲಿ 55 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕಾರ್ಯಾಚರಣೆ ಪ್ರಾರಂಭಿಸಿದ್ದು, 130 ಕ್ಕೂ ಹೆಚ್ಚು ತಾಲಿಬಾನ್ ಹೋರಾಟಗಾರರನ್ನು ಕೊಂದಿರುವುದಾಗಿ ಹೇಳಿದೆ.
ಆಫ್ಘನ್ ತಾಲಿಬಾನ್ ಹಲವಾರು ಗಡಿ ಪೋಸ್ಟ್‌ಗಳ ಮೇಲೆ ದಾಳಿ ನಡೆಸಿದ ನಂತರ ಗುರುವಾರ ತಡರಾತ್ರಿ ಆಪರೇಷನ್ ಗಜಬ್ ಲಿಲ್ ಹಕ್ ಪ್ರಾರಂಭವಾಗಿದೆ ಎಂದು ಪಾಕಿಸ್ತಾನ ಹೇಳಿದೆ. ರಕ್ಷಣಾ ಸಚಿವ ಖವಾಜಾ ಆಸಿಫ್ ಕಾರ್ಯಾಚರಣೆ ನಡೆಯುತ್ತಿದೆ ಎಂಬುದನ್ನು ದೃಢಪಡಿಸಿದ್ದಾರೆ. ಸಶಸ್ತ್ರ ಪಡೆಗಳು ಪ್ರಸ್ತುತ ಅಫ್ಘಾನ್ ತಾಲಿಬಾನ್‌ನ ಆಕ್ರಮಣಕ್ಕೆ ಬಲವಾದ ಪ್ರತಿಕ್ರಿಯೆ ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.
ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿರುವ ಅವರು, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅತ್ತೌಲ್ಲಾ ತರಾರ್, ಕನಿಷ್ಠ 133 ತಾಲಿಬಾನ್ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದಿದ್ದಾರೆ.
ಕಾಬೂಲ್, ಪಕ್ತಿಯಾ ಮತ್ತು ಕಂದಹಾರ್‌ನಲ್ಲಿರುವ ಆಫ್ಘನ್ ತಾಲಿಬಾನ್ ರಕ್ಷಣಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಹೆಚ್ಚಿನ ಸಾವುನೋವುಗಳಾಗಿರುವ ಸಾಧ್ಯತೆಯಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ತಾಲಿಬಾನ್ ಆಡಳಿತದ ಕನಿಷ್ಠ 27 ಪೋಸ್ಟ್‌ಗಳನ್ನು ನಾಶಪಡಿಸಲಾಗಿದೆ. ಒಂಬತ್ತು ಇತರ ಪೋಸ್ಟ್‌ಗಳನ್ನು ಪಾಕ್ ಪಡೆಗಳು ವಶಕ್ಕೆ ಪಡೆದುಕೊಂಡಿವೆ ಎಂದು ತಿಳಿಸಿದ್ದಾರೆ.
ಎರಡು ಕಾರ್ಪ್ಸ್ ಪ್ರಧಾನ ಕಚೇರಿಗಳು, ಮೂರು ಬ್ರಿಗೇಡ್ ಪ್ರಧಾನ ಕಚೇರಿಗಳು, ಎರಡು ಮದ್ದುಗುಂಡು ಡಿಪೋಗಳು, ಒಂದು ಲಾಜಿಸ್ಟಿಕ್ಸ್ ಬೇಸ್, ಮೂರು ಬೆಟಾಲಿಯನ್ ಪ್ರಧಾನ ಕಚೇರಿಗಳು, ಎರಡು ಸೆಕ್ಟರ್ ಪ್ರಧಾನ ಕಚೇರಿಗಳು ಮತ್ತು 80 ಕ್ಕೂ ಹೆಚ್ಚು ಟ್ಯಾಂಕ್‌ಗಳು, ಫಿರಂಗಿ ಬಂದೂಕುಗಳು ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಪಾಕ್ ಸಚಿವರು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ವಾಯುಪಡೆಯು ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾದಲ್ಲಿರುವ ತಾಲಿಬಾನ್‌ನ ಪ್ರಮುಖ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪಿಟಿವಿ ನ್ಯೂಸ್ ವರದಿ ಮಾಡಿದೆ. ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ತಾಲಿಬಾನ್ ಸರ್ಕಾರವನ್ನು ಗೃಹ ಸಚಿವ ಮೊಹ್ಸಿನ್ ನಖ್ವಿ ಖಂಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಪಾಕ್ ಗೃಹ ಇಲಾಖೆ, ಪಾಕಿಸ್ತಾನದ ಸಶಸ್ತ್ರ ಪಡೆಗಳು ತಾಲಿಬಾನ್‌ನ ಮುಕ್ತ ಆಕ್ರಮಣಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿವೆ ಎಂದು ಸಚಿವರು ಹೇಳಿದ್ದನ್ನು ಉಲ್ಲೇಖಿಸಿದೆ.
ದೇಶವು ಸಶಸ್ತ್ರ ಪಡೆಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ತಾಲಿಬಾನ್ ದಾಳಿ ಮಾಡುವ ಮೂಲಕ ಭೀಕರ ತಪ್ಪು ಮಾಡಿದೆ. ಅವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಭದ್ರತೆಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ ಎಂದು ನಖ್ವಿ ಅಬ್ಬರಿಸಿದ್ದಾರೆ.
ಪಾಕಿಸ್ತಾನ ಶಾಂತಿ ಮತ್ತು ಪ್ರಾದೇಶಿಕ ಸಮಗ್ರತೆಯ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ. ನಮ್ಮ ಸಶಸ್ತ್ರ ಪಡೆಗಳ ಪ್ರತಿಕ್ರಿಯೆ ಸಮಗ್ರ ಮತ್ತು ನಿರ್ಣಾಯಕವಾಗಿದೆ. ನಮ್ಮ ಶಾಂತಿಯನ್ನು ದೌರ್ಬಲ್ಯವೆಂದು ತಪ್ಪಾಗಿ ಭಾವಿಸುವವರು ಬಲವಾದ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪಾಕಿಸ್ತಾನದ ಜನರು ಮತ್ತು ಸಶಸ್ತ್ರ ಪಡೆಗಳು ರಾಷ್ಟ್ರದ ಸುರಕ್ಷತೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಭದ್ರಪಡಿಸಿಕೊಳ್ಳಲು ಯಾವಾಗಲೂ ಸಿದ್ಧವಾಗಿರುತ್ತವೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಇವುಗಳನ್ನು ಓದಿ:
PAK - AFG WAR: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವಾಯುದಾಳಿ: 80ಕ್ಕೂ ಹೆಚ್ಚು ಜನರು ಸಾವು!

