ಪಾಕಿಸ್ತಾನದಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿಗೆ ನುಗ್ಗಿ ದಾಂಧಲೆ: 22 ಮಂದಿ ಪ್ರತಿಭಟನಾಕಾರರು ಸಾವು
ಇರಾನ್ ನಾಯಕ ಖಮೇನಿ ಹತ್ಯೆಯ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಪ್ರತಿಭಟನಾಕಾರರು ಬೀದಿಗಿಳಿದಿದ್ದು, ಅಮೆರಿಕ ಕಾನ್ಸುಲೇಟ್ ಕಚೇರಿ ಮೇಲೆ ದಾಂಧಲೆ ನಡೆಸಿದ್ದಾರೆ. ಭದ್ರತಾ ಪಡೆ ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷದಲ್ಲಿ ಹಲವರು ಸಾವನ್ನಪ್ಪಿದ್ದಾರೆ.


Published : March 2, 2026 at 11:16 AM IST
|Updated : March 2, 2026 at 11:28 AM IST
ಕರಾಚಿ(ಪಾಕಿಸ್ತಾನ): ಇರಾನ್ ಸರ್ಕಾರವನ್ನು ಬೆಂಬಲಿಸಿ ಪಾಕಿಸ್ತಾನದಲ್ಲಿ ನೂರಾರು ಪ್ರತಿಟನಾಕಾರರು ಕರಾಚಿ ಸೇರಿದಂತೆ ದೇಶದ ವಿವಿಧೆಡೆ ಅಮೆರಿಕದ ಕಾನ್ಸುಲೇಟ್ ಕಚೇರಿ ಮತ್ತು ವಿಶ್ವಸಂಸ್ಥೆ ಕಚೇರಿಗೆ ನುಗ್ಗುವ ಪ್ರಯತ್ನ ನಡೆಸಿದ್ದು, ಪ್ರತಿಭಟನಾಕಾರರು ಹಾಗು ಭದ್ರತಾ ಪಡೆಗಳ ನಡುವಿನ ಹಿಂಸಾತ್ಮಕ ಸಂಘರ್ಷದಲ್ಲಿ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದು, 120 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕೊಲ್ಲಲಾಗಿದೆ. ಈ ದಾಳಿ ಖಂಡಿಸಿ ಕರಾಚಿಯಲ್ಲಿ ಭುಗಿಲೆದ್ದ ಪ್ರತಿಭಟನೆಯಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಖಮೇನಿ ಹತ್ಯೆಗೆ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ದುಃಖ ವ್ಯಕ್ತಪಡಿಸಿದ್ದು, ಇರಾನ್ಗೆ ತಮ್ಮ ಸಂತಾಪ ಸೂಚಿಸಿದ್ದಾರೆ. ಇರಾನ್ ದುಃಖದ ಸ್ಥಿತಿಯಲ್ಲಿ ಪಾಕಿಸ್ತಾನ ಇರಾನಿಗರ ಜೊತೆ ನಿಲ್ಲುತ್ತದೆ ಎಂದಿದ್ದಾರೆ.
ಕರಾಚಿಯಲ್ಲಿ ನಡೆದ ಪ್ರತಿಭಟನಾ ಸಂಘರ್ಷದಲ್ಲಿ ಆರು ಜನ ಸಾವನ್ನಪ್ಪಿದ್ದು, ಅನೇಕರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ 10ಕ್ಕೇರಬಹುದು ಎಂದು ಸರ್ಕಾರಿ ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.
ಇದಲ್ಲದೆ ಪೇಶಾವರ, ಉತ್ತರ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶದಲ್ಲೂ ಕೂಡ ಇರಾನ್ ಮೇಲಿನ ದಾಳಿ ಖಂಡಿಸಿ, ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ಗುಂಪು ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆ ನಡುವೆ ಉಂಟಾದ ಸಂಘರ್ಷದಲ್ಲಿ 12 ಮಂದಿ ಸಾವನ್ನಪ್ಪಿದ್ದು, 80 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸರ್ಕಾರಿ ವಕ್ತಾರರೊಬ್ಬರು, ನಮ್ಮ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಿವಿಧ ಸ್ಥಳಗಳಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಪದೇ ಪದೇ ಘರ್ಷಣೆ ನಡೆಸಿದರು. ಸ್ಥಳೀಯ ದತ್ತಿ ಸಂಸ್ಥೆಯ ಕಚೇರಿಗಳಿಗೆ ಹಾನಿ ಮಾಡಿದ್ದಾರೆ. ಪೊಲೀಸ್ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಭದ್ರತಾ ಪಡೆಗಳು ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದರು.
ಇವುಗಳನ್ನೂ ಓದಿ:

