ಅಫ್ಘಾನಿಸ್ತಾನದ ಮೇಲಿನ ದಾಳಿ ಖಂಡಿಸಿ ಭಾರತ ನೀಡಿದ್ದ ಹೇಳಿಕೆಯನ್ನು ತಿರಸ್ಕರಿಸಿದ ಪಾಕ್
ಆಫ್ಘನ್ ಬಂಡುಕೋರ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಅಫ್ಘಾನಿಸ್ತಾನದಲ್ಲಿ ಏಳು ಉಗ್ರಗಾಮಿ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ ಎಂದು ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ ಹೇಳಿದ್ದಾರೆ.


Published : February 27, 2026 at 12:00 PM IST
ಇಸ್ಲಾಮಾಬಾದ್ (ಪಾಕಿಸ್ತಾನ): ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವು ನಾಗರಿಕರು ಸಾವನ್ನಪ್ಪಿದ್ದು, ಈ ಘಟನೆಯನ್ನು ಖಂಡಿಸಿ ಭಾರತ ನೀಡಿದ್ದ ಹೇಳಿಕೆಯನ್ನು ಪಾಕಿಸ್ತಾನ ವಿದೇಶಾಂಗ ಕಚೇರಿ ತಿರಸ್ಕರಿಸಿದೆ.
ಅಫ್ಘಾನಿಸ್ತಾನದ ಮೇಲಿನ ಪಾಕ್ ಕ್ರಮವನ್ನು ಖಂಡಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿದ್ದರು. ಈ ದಾಳಿ ಪಾಕಿಸ್ತಾನ ತನ್ನ ಆಂತರಿಕ ವೈಫಲ್ಯಗಳನ್ನು ಬಹಿರಂಗ ಮಾಡಲು ಮಾಡಿದ ಮತ್ತೊಂದು ಪ್ರಯತ್ನ ಎಂದು ಬಣ್ಣಿಸಿದ್ದರು. ಅಲ್ಲದೇ ಅಫ್ಘಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯ ರಕ್ಷಣೆಗೆ ಭಾರತದ ತನ್ನ ಬೆಂಬಲ ನೀಡಲಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.
ರಂಜಾನ್ ಪವಿತ್ರ ತಿಂಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರ ಸಾವುನೋವುಗಳಿಗೆ ಕಾರಣವಾದ ಆಫ್ಘನ್ ಭೂಪ್ರದೇಶದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಭಾರತದ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ - ಪಾಕ್: ಪಾಕ್ನ ವಿದೇಶಾಂಗ ಕಚೇರಿಯ ವಕ್ತಾರ ತಹಿರ್ ಅಂದ್ರಾಬಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಇತ್ತೀಚೆಗೆ ನಡೆದ ಬಂಡುಕೋರರ ದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನದಲ್ಲಿರುವ ಕನಿಷ್ಠ ಏಳು ಉಗ್ರಗಾಮಿ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ. ಭಾರತದ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ ಎಂದು ಅವರು ತಿಳಿಸಿದ್ದರು.
ಭಾರತವು ಪಾಕಿಸ್ತಾನದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವಲ್ಲಿ ಭಾಗಿಯಾಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಅಲ್ಲದೇ, ಅವರು ತಮ್ಮ ಹೇಳಿಕೆಗಳನ್ನು ಬೆಂಬಲಿಸುವ ಯಾವುದೇ ಪುರಾವೆಗಳನ್ನು ಒದಗಿಸಲಿಲ್ಲ. ಬಲೂಚಿಸ್ತಾನದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಹೇಳಿಕೆಗಳನ್ನು ನೀಡಿದೆ. ಈ ಹೇಳಿಕೆಗಳು ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ ಭಾರತದ ಶಾಮೀಲಿನ ಹೆಚ್ಚುವರಿ ಪುರಾವೆಗಳನ್ನು, ಸಾಂದರ್ಭಿಕ ಪುರಾವೆಗಳನ್ನು ಒದಗಿಸುತ್ತವೆ ಎಂದು ಆರೋಪಿಸಿದರು.
ಪಾಕಿಸ್ತಾನಿ ನಾಗರಿಕರ ಸುರಕ್ಷತೆ ಮತ್ತು ಸನ್ನಿಹಿತ ಭಯೋತ್ಪಾದಕ ದಾಳಿಗಳನ್ನು ತಡೆಗಟ್ಟಲು ನೆರೆಯ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಸೇನೆ ದಾಳಿ ನಡೆಸಿದೆ ಎಂದು ಪಾಕ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಅಫ್ಘಾನಿಸ್ತಾನದ ಕಡೆಯಿಂದ ಯಾವುದೇ ದಾಳಿ ನಡೆದರೂ ಪಾಕಿಸ್ತಾನ ಸೇನೆಯು ಆತ್ಮರಕ್ಷಣೆಗಾಗಿ ತನ್ನ ಹಕ್ಕುಗಳನ್ನು ತ್ವರಿತವಾಗಿ ಮತ್ತು ಬಲವಾಗಿ ಪ್ರತಿಕ್ರಿಯಿಸುತ್ತದೆ. ಪಾಕಿಸ್ತಾನವು ಪ್ರಸ್ತುತ ಅಫ್ಘಾನ್ ತಾಲಿಬಾನ್ ಜೊತೆ ಯಾವುದೇ ರಚನಾತ್ಮಕ ಮಾತುಕತೆಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದರು.
ಪಾಕಿಸ್ತಾನ ವಾಯುಪಡೆಯು ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾದಲ್ಲಿರುವ ತಾಲಿಬಾನ್‌ನ ಪ್ರಮುಖ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪಿಟಿವಿ ನ್ಯೂಸ್ ವರದಿ ಮಾಡಿದೆ. ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ತಾಲಿಬಾನ್ ಸರ್ಕಾರವನ್ನು ಗೃಹ ಸಚಿವ ಮೊಹ್ಸಿನ್ ನಖ್ವಿ ಖಂಡಿಸಿದ್ದಾರೆ.

