ETV Bharat / international

ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ: ಪ್ರಧಾನಿ ಮೋದಿ

ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಸಂಸತ್ತಿನಲ್ಲಿ ಭಾಷಣ ಮಾಡಿದ್ದು ಇದೇ ಮೊದಲು.

ಇಸ್ರೇಲ್ ಸಂಸತ್ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಇಸ್ರೇಲ್ ಸಂಸತ್ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ (IANS)
author img

By ETV Bharat Karnataka Team

Published : February 25, 2026 at 10:33 PM IST

|

Updated : February 25, 2026 at 10:51 PM IST

2 Min Read
Choose ETV Bharat

ಟೆಲ್ ಅವಿವ್(ಇಸ್ರೇಲ್): ಭಾರತ ದೀರ್ಘಕಾಲದಿಂದ ಭಯೋತ್ಪಾದನೆಯ ನೋವು ಅನುಭವಿಸಿದೆ. ಈ ಜಾಗತಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತವು ಇಸ್ರೇಲ್ ಜೊತೆಗೆ ದೃಢವಾಗಿ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬುಧವಾರ ಇಸ್ರೇಲ್ ಸಂಸತ್ತು 'ನೆಸ್ಸೆಟ್' ಉದ್ದೇಶಿಸಿ ಅವರು ಐತಿಹಾಸಿಕ ಭಾಷಣ ಮಾಡಿದರು.

ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರತಿ ಜೀವಕ್ಕೂ ಭಾರತೀಯರ ಆಳವಾದ ಸಂತಾಪವಿದೆ. ನಿಮ್ಮ ನೋವನ್ನು ನಾವು ಅನುಭವಿಸುತ್ತೇವೆ. ನಿಮ್ಮ ದುಃಖವನ್ನು ನಾವೂ ಹಂಚಿಕೊಳ್ಳುತ್ತೇವೆ. ನಾಗರಿಕರ ಹತ್ಯೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದರು.

ಮೋದಿ ಭಾಷಣದ ಹಲವಾರು ಸಂದರ್ಭಗಳಲ್ಲಿ ಇಸ್ರೇಲ್ ಸಂಸದರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದಿಸಿದ ಗಾಜಾ ಶಾಂತಿ ಉಪಕ್ರಮ ಒಂದು ಪರಿಹಾರ ಮಾರ್ಗವನ್ನು ಒದಗಿಸುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ನಾವು ಭರವಸೆ ಉಳಿಸಿಕೊಳ್ಳುವುದು ಮುಖ್ಯ. ಭಾರತ ಈ ಹೆಜ್ಜೆಗೆ ತನ್ನ ದೃಢವಾದ ಬೆಂಬಲ ವ್ಯಕ್ತಪಡಿಸಿದೆ. ಪ್ಯಾಲೆಸ್ಟೈನ್ ಸಮಸ್ಯೆಯನ್ನು ಪರಿಹರಿಸುವ ಮೂಲಕ ಈ ಪ್ರದೇಶದ ಎಲ್ಲಾ ಜನರಿಗೂ ನ್ಯಾಯಯುತ ಶಾಂತಿಯ ಭರವಸೆಯನ್ನು ಅದು ನೀಡುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮೆಲ್ಲಾ ಪ್ರಯತ್ನಗಳು ಬುದ್ಧಿವಂತಿಕೆ, ಧೈರ್ಯ ಮತ್ತು ಮಾನವೀಯತೆಯಿಂದ ಕೂಡಿರಲಿ ಎಂದು ಅವರು ಕಿವಿಮಾತು ಹೇಳಿದರು.

ಇದೇ ವೇಳೆ, ಇಸ್ರೇಲ್‌ಗೆ ಮತ್ತೆ ಭೇಟಿ ನೀಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಮೋದಿ ತಿಳಿಸಿದರು.

ಇಸ್ರೇಲ್ ಅನ್ನು ಭಾರತ ಗುರುತಿಸಿದಂದೇ ನಾನು ಜನಿಸಿದೆ: ಭಾರತವು ಇಸ್ರೇಲ್ ಅನ್ನು ಔಪಚಾರಿಕವಾಗಿ ಗುರುತಿಸಿದಂದೇ (1950ರ ಸೆಪ್ಟೆಂಬರ್ 17) ನಾನು ಜನಿಸಿದ್ದಾಗಿ ಮೋದಿ ಹೇಳುತ್ತಿದ್ದಂತೆ ಇಸ್ರೇಲ್ ಸಂಸದರು ಚಪ್ಪಾಳೆಯ ಸುರಿಮಳೆಗೈದರು.

ಮೋದಿಗೆ ಎದ್ದು ನಿಂತು ಗೌರವ ಸೂಚಿಸಿದ ಇಸ್ರೇಲ್ ಸಂಸದರು: ಇದಕ್ಕೂ ಮುನ್ನ, ಸಂಸತ್ ಸದಸ್ಯರು ಚಪ್ಪಾಳೆ ತಟ್ಟುತ್ತಾ ಎದ್ದು ನಿಂತು ಮೋದಿಗೆ ಸ್ವಾಗತ ಕೋರಿದರು. ಇಡೀ ಸಭಾಂಗಣದಲ್ಲಿ "ಮೋದಿ, ಮೋದಿ" ಎಂಬ ಘೋಷಣೆಗಳು ಮೊಳಗಿದವು. ಸ್ಪೀಕರ್ ಅಮೀರ್ ಒಹಾನಾ ಅವರು ಮೋದಿ ಅವರನ್ನು ಇಸ್ರೇಲ್ ಸಂಸತ್ತಿಗೆ ಹಿಂದಿಯಲ್ಲೇ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಮೋದಿಗೆ ಇಸ್ರೇಲ್ ಸಂಸತ್ತಿನ ಅತ್ಯುನ್ನತ ಗೌರವ: ಪ್ರಧಾನಿ ಮೋದಿದೆ ಇಸ್ರೇಲ್ ಸಂಸತ್ತಿನ ಅತ್ಯುನ್ನತ ಗೌರವ 'ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ'ಪ್ರದಾನ ಮಾಡಲಾಯಿತು.

ಭಾರತ-ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಪ್ರಧಾನಿ ಮೋದಿ ಅವರ ಕೊಡುಗೆಯನ್ನು ಗುರುತಿಸಿ ಇಸ್ರೇಲ್ ಈ ಪದಕ ನೀಡಿ ಗೌರವಿಸಿದೆ.

ಇದನ್ನೂ ಓದಿ: ಇಸ್ರೇಲ್‌ಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

Last Updated : February 25, 2026 at 10:51 PM IST