ETV Bharat / international

ಅಮೆರಿಕ ಜೊತೆ ಮಾತುಕತೆಗೆ ನಮ್ಮ ಯಾವುದೇ ನಿಯೋಗ ಇಸ್ಲಾಮಾಬಾದ್‌ಗೆ ಭೇಟಿ ನೀಡಿಲ್ಲ: ಇರಾನ್​ ಮಾಧ್ಯಮ

ಅಮೆರಿಕ ಜೊತೆಗಿನ ಮಾತುಕತೆಗೆ ನಮ್ಮ ಯಾವುದೇ ನಿಯೋಗ ಇಲ್ಲಿಯವರೆಗೆ ಇಸ್ಲಾಮಾಬಾದ್‌ಗೆ ಭೇಟಿ ನೀಡಿಲ್ಲ ಎಂದು ಇರಾನ್ ಮಾಧ್ಯಮ ಹೇಳಿದೆ.

NO DELEGATION FROM IRAN
ಟೆಹ್ರಾನ್​ ನಗರ (AP)
author img

By ETV Bharat Karnataka Team

Published : April 21, 2026 at 4:22 PM IST

2 Min Read
Choose ETV Bharat

ಇರಾನ್​​: ಅಮೆರಿಕದ ಜೊತೆಗಿನ ಮಾತುಕತೆಗಳ ಕುರಿತು ಊಹಾಪೋಹಗಳು ಹರಿದಾಡುತ್ತಿರುವುದರ ನಡುವೆ, ನಮ್ಮ ಯಾವುದೇ ನಿಯೋಗ ಇಲ್ಲಿಯವರೆಗೆ ಇಸ್ಲಾಮಾಬಾದ್‌ಗೆ ಭೇಟಿ ನೀಡಿಲ್ಲ ಎಂದು ಇರಾನ್ ಮಾಧ್ಯಮ ತಿಳಿಸಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮ ಇಂದು ಸಂಜೆ ಕೊನೆಗೊಳ್ಳಲಿದ್ದು, ಮುಂದೇನಾಗಲಿದೆ ಎಂಬ ಕುತೂಹಲ ಮೂಡಿಸಿದೆ.

ಇನ್ನೊಂದೆಡೆ, ಜಾಗತಿಕ ಮಾರುಕಟ್ಟೆಗಳನ್ನು ಬೆಚ್ಚಿಬೀಳಿಸಿರುವ ಯುದ್ಧವನ್ನು ಕೊನೆಗೊಳಿಸುವ ಕುರಿತು ಎರಡನೇ ಸುತ್ತಿನ ಮಾತುಕತೆಗೆ ಇಸ್ಲಾಮಾಬಾದ್​​ಗೆ ತೆರಳಲು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಸಿದ್ಧರಿರುವುದಾಗಿ ಶ್ವೇತಭವನ ಪ್ರಕಟಿಸಿದೆ.

ಎರಡು ವಾರಗಳ ಹಿಂದೆ ಪಾಕ್‌ನಲ್ಲಿ ನಡೆದ ಮಾತುಕತೆಗೆ ನಿಯೋಗಗಳ ನೇತೃತ್ವ ವಹಿಸಿದ್ದ ಇರಾನ್‌ನ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು ಪ್ರತಿಕ್ರಿಯಿಸಿ, ದಿಗ್ಬಂಧನ ಹೇರುವ ಮತ್ತು ಕದನ ವಿರಾಮ ಉಲ್ಲಂಘಿಸುವ ಮೂಲಕ ಟ್ರಂಪ್ ತಮಗೆ ಸೂಕ್ತ ಎಂದು ತೋರುವ ಹೊಸ ಹಗೆತನವನ್ನು ಸಮರ್ಥಿಸಲು ಬಯಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಹಗೆತನದ ನೆರಳಿನ ಮಾತುಕತೆಯನ್ನು ನಾವು ಒಪ್ಪುವುದಿಲ್ಲ. ಕಳೆದೆರಡು ವಾರದಲ್ಲಿ ಅವರು ಯುದ್ಧ ಭೂಮಿಯಲ್ಲಿ ಹೊಸ ಆಟ ತೋರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಹಾರ್ಮುಜ್ ಜಲಸಂಧಿಯಲ್ಲಿ ಅನುಮತಿ ಇಲ್ಲದೆ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗನ್ನು ನಾವು ಟಾರ್ಗೆಟ್ ಮಾಡುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ ಎಚ್ಚರಿಕೆ ನೀಡಿದೆ.

ಇತ್ತೀಚಿಗೆ ಟ್ರಂಪ್, ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಸೇರಿದಂತೆ ಅಮೆರಿಕದ ಪ್ರತಿನಿಧಿಗಳು ಇರಾನ್ ಜೊತೆ ಕದನ ವಿರಾಮ ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ ಎಂದು ತಿಳಿಸಿದ್ದರು. ಈ ಮೂಲಕ ಇರಾನ್​ ಮತ್ತು ಅಮೆರಿಕದ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂಬುದನ್ನು ಅವರು ದೃಢಪಡಿಸಿದ್ದರು.

ಟ್ರುಥ್​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿರುವ ಟ್ರಂಪ್​, ಇರಾನ್ ಎರಡನೇ ಸುತ್ತಿನ ಮಾತುಕತೆಗಳಲ್ಲಿ ಒಪ್ಪಂದ ಮಾಡಿಕೊಳ್ಳದೇ ಇದ್ದರೆ ಇರಾನ್‌ನ ಇಂಧನ ಮತ್ತು ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಎಂದು ಎಚ್ಚರಿಸಿದ್ದರು.

ಒಪ್ಪಂದಕ್ಕೆ ಇರಾನ್​​ಗಿದು ಕೊನೆಯ ಅವಕಾಶ. ಒಂದು ವೇಳೆ ಒಪ್ಪಂದಕ್ಕೆ ಸಹಿ ಹಾಕದೇ ಇದ್ದರೆ ಇಡೀ ದೇಶವೇ ಸ್ಫೋಟಗೊಳ್ಳುವಂತೆ ಮಾಡುತ್ತೇನೆ. ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ಮಾಡಿದ ತಪ್ಪನ್ನು ನಾನು ಮಾಡಲಾರೆ ಎಂದು ಧಮ್ಕಿ ಹಾಕಿದ್ದರು.

ಇವುಗಳನ್ನೂ ಓದಿ: